ನಮ್ಮ ಮೆಟ್ರೋದ ಪ್ರಮುಖ 10 ನಿಲ್ದಾಣಗಳಲ್ಲಿ ಅಮುಲ್‌ ಕಿಯೋಸ್ಕ್‌ ಮಳಿಗೆ ತೆರೆಯಲು ಗುಜರಾತ್‌ ಕೋ-ಆಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಫೆಡರೇಷನ್‌ ಲಿ. ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ

ಬೆಂಗಳೂರು : ನಮ್ಮ ಮೆಟ್ರೋದ ಪ್ರಮುಖ 10 ನಿಲ್ದಾಣಗಳಲ್ಲಿ ಅಮುಲ್‌ ಕಿಯೋಸ್ಕ್‌ ಮಳಿಗೆ ತೆರೆಯಲು ಗುಜರಾತ್‌ ಕೋ-ಆಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಫೆಡರೇಷನ್‌ ಲಿ. ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ. ಈ ವಿಚಾರವೀಗ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್‌ ಎಂ.ವಿಶ್ವೇಶ್ವರಯ್ಯ, ಮೆಜೆಸ್ಟಿಕ್‌, ನ್ಯಾಷನಲ್‌ ಕಾಲೇಜು, ಜಯನಗರ ಹಾಗೂ ಬನಶಂಕರಿ ನಿಲ್ದಾಣದಲ್ಲಿ ಅಮುಲ್ ಮಳಿಗೆಗಳು ತೆರೆಯಲು ಒಪ್ಪಂದವಾಗಿದೆ. ಇಲ್ಲಿ ಅಮುಲ್‌ನ ಚಾಕುಲೆಟ್‌, ಸ್ನ್ಯಾಕ್ಸ್‌, ಸಾವಯವ ಸೇರಿ ಎಲ್ಲ ಬಗೆಯ ಉತ್ಪನ್ನಗಳು ಸಿಗಲಿವೆ.

ಪ್ರಯಾಣಿಕರು ಹಾಲು, ಐಸ್‌ಕ್ರೀಮ್‌, ಇನ್‌ಸ್ಟಂಟ್ಸ್‌ ಆಹಾರ ಉತ್ಪನ್ನ, ಸ್ನ್ಯಾಕ್ಸ್‌ ಖರೀದಿ ಮಾಡಬಹುದು. ಮೆಟ್ರೋ ನಿಲ್ದಾಣ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಹೆಚ್ಚು ಅನುಕೂಲಕರ ಆಗಿಸಲು ಅಮುಲ್ ಕಿಯೋಸ್ಕ್‌ ಸೆಂಟರ್‌ ತೆರೆಯಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ತನ್ನ ‘ಮೆಟ್ರೋ ಇನ್‌ಸೈಟ್ಸ್‌’ ನಲ್ಲಿ ತಿಳಿಸಿದೆ.

ಆದರೆ, ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ನಮ್ಮದೇ ‘ ಕೆಎಂಎಫ್‌ ನಂದಿನಿ’ ಇರುವಾಗ ಅಮುಲ್‌ಗೆ ಅವಕಾಶ ಮಾಡಿಕೊಟ್ಟಿರುವುದು ಯಾಕಾಗಿ? ಬಿಎಂಆರ್‌ಸಿಎಲ್‌ ಗುಜರಾತ್‌ ಮೂಲದ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡು ಅಮುಲ್‌ ಉತ್ಪನ್ನಗಳಿಗೆ ಯಾಕಾಗಿ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.