ಸಾರಾಂಶ
ರಾಜಧಾನಿ ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರಿನ ಪೂರೈಕೆಯ ಐದನೇ ಹಂತದ ಯೋಜನೆಗೆ ಚಾಲನೆ ನೀಡಿ ಒಂದು ವರ್ಷ ಸಮೀಪಿಸುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರು ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಮುಂದಾಗುತ್ತಿಲ್ಲ.
ಬೆಂಗಳೂರು : ರಾಜಧಾನಿ ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರಿನ ಪೂರೈಕೆಯ ಐದನೇ ಹಂತದ ಯೋಜನೆಗೆ ಚಾಲನೆ ನೀಡಿ ಒಂದು ವರ್ಷ ಸಮೀಪಿಸುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರು ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಮುಂದಾಗುತ್ತಿಲ್ಲ.
ಐದು ಸಾವಿರ ಕೋಟಿ ರು. ವೆಚ್ಚದಲ್ಲಿ ರಾಜ್ಯ ಸರ್ಕಾರವು 750 ಎಂಎಲ್‌ಡಿ ಹೆಚ್ಚುವರಿ ಕಾವೇರಿ ನೀರು ಪೂರೈಕೆ ಯೋಜನೆಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು. ಮುಖ್ಯವಾಗಿ ನಗರದ ಹೊರ ವಲಯದ 110 ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಯೋಜನೆಯ ಉದ್ದೇಶವಾಗಿತ್ತು. ಜಲಮಂಡಳಿಯು ಸುಮಾರು 5 ಲಕ್ಷ ಹೊಸ ಸಂಪರ್ಕ ನೀಡುವ ಗುರಿ ಹಾಕಿಕೊಂಡಿತ್ತು. ಆದರೆ, ಯೋಜನೆ ಚಾಲನೆ ಸಿಕ್ಕು ಒಂದು ವರ್ಷ ಸಮೀಪಿಸಿದರೂ ಈವರೆಗೆ ಕೇವಲ 70 ಸಾವಿರ ಮಂದಿ ಮಾತ್ರ ಕಾವೇರಿ ನೀರಿನ ಹೊಸ ಸಂಪರ್ಕ ಪಡೆದುಕೊಂಡಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ನೀರಿನ ಸಂಪರ್ಕ ಸಾಧ್ಯವಾಗದಿರುವುದರಿಂದ ದಿನಕ್ಕೆ 750 ಎಂಎಲ್‌ಡಿ ನೀರು ಪಂಪ್ ಮಾಡುವ ಸಾಮರ್ಥ್ಯವಿದ್ದರೂ 400 ಎಂಎಲ್‌ಡಿಯಷ್ಟು ನೀರನ್ನು ಮಾತ್ರ ಪ್ರತಿ ದಿನ ಪಂಪ್ ಮಾಡಲಾಗುತ್ತಿದೆ.
ಕೊಳವೆ ಬಾವಿ ನೀರಿನ ಮೇಲೆ ಅವಲಂಬನೆ
ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಲಕ್ಷಾಂತರ ರು. ವೆಚ್ಚ ಮಾಡಬೇಕಿದೆ. ಹೀಗಾಗಿ, 110 ಹಳ್ಳಿಯ ಜನರು ಕೊಳವೆ ಬಾವಿ ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇನ್ನೂ ಬೆಂಗಳೂರು ಜಲಮಂಡಳಿಯು ಕಾವೇರಿ ನೀರಿನ ಸಂಪರ್ಕ ಅಭಿಯಾನಗಳನ್ನು ನಡೆಸಿದರೂ ಜನ ಸಂಪರ್ಕ ಪಡೆಯುವುದಕ್ಕೆ ಮುಂದೆ ಬರುತ್ತಿಲ್ಲ.