ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಒಕ್ಕೂಟದ ಮಾ.22ರ ಕರ್ನಾಟಕ ಬಂದ್‌ ಕರೆಗೆ ಕೆಲ ಸಂಘಗಳಿಂದಷ್ಟೇ ಬೆಂಬಲ

| N/A | Published : Mar 20 2025, 09:09 AM IST

Kannada flag
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಒಕ್ಕೂಟದ ಮಾ.22ರ ಕರ್ನಾಟಕ ಬಂದ್‌ ಕರೆಗೆ ಕೆಲ ಸಂಘಗಳಿಂದಷ್ಟೇ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಒಕ್ಕೂಟದ ಮಾ.22ರ ಕರ್ನಾಟಕ ಬಂದ್‌ ಕರೆಗೆ ಹಲವಾರು ಸಂಘಟನೆಗಳು ಬೆಂಬಲಿಸಿದ್ದರೆ ಇನ್ನು ಕೆಲವು ಸಂಘಟನೆಗಳು ನಿರಾಸಕ್ತಿ ತೋರಿವೆ.

ಬೆಂಗಳೂರು : ಮಹದಾಯಿ, ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು. ರಾಜ್ಯದಲ್ಲಿ ಎಂಇಎಸ್‌ ಸಂಘಟನೆ ನಿಷೇಧಿಸಬೇಕು. ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಒಕ್ಕೂಟದ ಮಾ.22ರ ಕರ್ನಾಟಕ ಬಂದ್‌ ಕರೆಗೆ ಹಲವಾರು ಸಂಘಟನೆಗಳು ಬೆಂಬಲಿಸಿದ್ದರೆ ಇನ್ನು ಕೆಲವು ಸಂಘಟನೆಗಳು ನಿರಾಸಕ್ತಿ ತೋರಿವೆ. ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ನಡೆವ ಬಂದ್‌ಗೆ ಬೆಂಬಲಿಸಲು ಮನವಿ ಮಾಡಲಾಗಿದೆ.

ಕರವೇ ಶಿವರಾಮೇಗೌಡ ಬಣ, ಜಯಕರ್ನಾಟಕ, ಕನ್ನಡಸೇನೆ, ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘ, ಖಾಸಗಿ ಸಾರಿಗೆ ಸಂಘಟನೆಗಳ ಬಸ್‌ ಮಾಲೀಕರು, ಕರ್ನಾಟಕ ಚಾಲಕರ ಒಕ್ಕೂಟ, ಖಾಸಗಿ ಸ್ಕೂಲ್‌ ಸಂಘ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಷನ್‌, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ, ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ, ಅಂಬೇಡ್ಕರ್‌ ಆಟೋ ಸೇನೆ ಸೇರಿ ಸುಮಾರು ಸಾವಿರಕ್ಕೂ ಹೆಚ್ಚು ಸಂಘಟನೆಗಳು ಬಂದ್‌ ಬೆಂಬಲಿಸಿವೆ ಎಂದು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಕನ್ನಡಪ್ರಭಕ್ಕೆ ತಿಳಿಸಿದರು.

ಕರವೇ ನಾರಾಯಣಗೌಡರ ಬಣ, ಇಂಡಿಯನ್‌ ವೆಹಿಕಲ್ಸ್‌ ಡ್ರೈವರ್ಸ್‌ ಟ್ರೇಡ್‌ ಯೂನಿಯನ್‌ ಬೆಂಬಲಿಸಿಲ್ಲ. ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ, ಬೆಂಗಳೂರು ಮಹಾನಗರ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಅವರು ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಓಲಾ, ಉಬರ್ ಚಾಲಕರಿಂದ ದ್ವಂದ್ವ ನಿಲುವು ವ್ಯಕ್ತವಾಗಿದೆ.

ಕನ್ನಡ ಚಲನಚಿತ್ರ ರಂಗವು ಮಾರ್ಚ್‌ 20ರಂದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ ಇದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಹುತೇಕ ಬಂದ್‌ಗೆ ಬೆಂಬಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ನಾಳೆ ನಿರ್ಧಾರ

ಮಾ.21 ಮತ್ತು 22ರಂದು ಮಹದಾಯಿ ಹಾಗೂ ಮೇಕೆದಾಟು ಕುಡಿಯುವ ನೀರು ಯೋಜನೆ ಜಾರಿಗೆ ಆಗ್ರಹಿಸಿ ರಾಮನಗರದಿಂದ ಬೆಂಗಳೂರಿನವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಆದರೆ, ಕರ್ನಾಟಕ ಬಂದ್‌ಗೆ ಬೆಂಬಲಿಸುವ ಕುರಿತು ಮಾ.21ರಂದು ತನ್ನ ನಿರ್ಧಾರ ಪ್ರಕಟಿಸುತ್ತೇವೆ.

- ಪ್ರವೀಣ್‌ಕುಮಾರ್‌ ಶೆಟ್ಟಿ, ರಾಜ್ಯಾಧ್ಯಕ್ಷ, ಕರವೇ

ನೈತಿಕ ಬೆಂಬಲ

ಸದ್ಯ ಬೀದಿಬದಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ವ್ಯಾಪಾರ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಂದ್‌ ಮಾಡಿದರೆ ಬಡ ವ್ಯಾಪಾರಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಕನ್ನಡಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ.. ಆದರೆ, ಬಂದ್‌ಗೆ ಅಲ್ಲ.

-ಸಿ.ಈ.ರಂಗಸ್ವಾಮಿ. ರಾಜ್ಯಾಧ್ಯಕ್ಷ, ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ.

ಬಂದ್‌ನಲ್ಲಿ ಭಾಗಿ

ಕರ್ನಾಟಕ ಬಂದ್‌ಗೆ ಸಾರಿಗೆ ನೌಕರರ ಕೂಟ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಫೆಡರೇಷನ್‌ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿವೆ. ಎಲ್ಲ ಸಾರಿಗೆ ನಿಗಮಗಳ ಎಲ್ಲ ನೌಕರರು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ.

-ಎಸ್‌.ನಾಗರಾಜು, ಪ್ರಧಾನ ಕಾರ್ಯದರ್ಶಿ ಕೆಬಿಎನ್‌ಎನ್‌ ವರ್ಕರ್ಸ್‌ ಫೆಡರೇಷನ್‌.