ಸಾರಾಂಶ
ಟಿಡಿಆರ್ ಪರಿಹಾರ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶದಿಂದ ಪಾರಾಗಲು ಅರಮನೆ ಜಾಗವನ್ನು ತೆಗೆದುಕೊಳ್ಳುವುದು, ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ್ದು ಎಂದು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು : ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಜಾಗ ಸ್ವಾಧೀನಕ್ಕೆ ಪಡೆದು ರಸ್ತೆ ಅಗಲೀಕರಣ ಮಾಡುವುದಕ್ಕೆ ಪ್ರತಿಯಾಗಿ ಮೈಸೂರು ರಾಜಮನೆತನದ ವಾರಸುದಾರರಿಗೆ 3014 ಕೋಟಿ ರು. ಟಿಡಿಆರ್ ಪರಿಹಾರ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶದಿಂದ ಪಾರಾಗಲು ಅರಮನೆ ಜಾಗವನ್ನು ತೆಗೆದುಕೊಳ್ಳುವುದು, ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ್ದು ಎಂದು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಜಯಮಹಲ್ ರಸ್ತೆ ಹಾಗೂ ಬಳ್ಳಾರಿ ರಸ್ತೆ ಅಗಲೀಕರಣಕ್ಕಾಗಿ 15.39 ಎಕರೆ ಜಾಗ ಸ್ವಾಧೀನಪಡಿಸಿಕೊಂಡಿರುವ ರಾಜ್ಯ ಸರ್ಕಾರವು ಆರು ವಾರದೊಳಗೆ 3,014 ಕೋಟಿ ರು. ಟಿಡಿಆರ್ ಪರಿಹಾರವನ್ನು ನೀಡಬೇಕು ಎಂದು 2024ರ ಡಿ.10ರಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಟಿಡಿಆರ್ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ರಾಜಮನೆತನದ ವಾರಸುದಾರರು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಅರಮನೆ ಜಾಗವನ್ನು ತೆಗೆದುಕೊಳ್ಳುವುದು, ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ್ದು ಎಂದು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ. ಈ ನಿರ್ಣಯವನ್ನು ರಾಜ್ಯಪಾಲರಿಗೆ ಸಲ್ಲಿಸಲು ನಿರ್ಧರಿಸಲಾಗಿದೆ. ತನ್ಮೂಲಕ ತೀರಾ ಅಗತ್ಯವಾದರೆ ರಸ್ತೆ ಅಗಲೀಕರಣ ಯೋಜನೆಯನ್ನೇ ಕೈಬಿಡಬೇಕು. ಯಾವುದೇ ಕಾರಣಕ್ಕೂ ಟಿಡಿಆರ್ ಪರಿಹಾರ ನೀಡದಿರಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು ಅರಮನೆಯನ್ನು ರಾಜ್ಯ ಸರ್ಕಾರ ವಶಪಡಿಸಿಕೊಂಡಿರುವ 1996ರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗೆ ಪೂರಕವಾಗಿ ಸುಗ್ರೀವಾಜ್ಞೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಸುಗ್ರಿವಾಜ್ಞೆ ಜಾರಿಯಿಂದ ಅಗತ್ಯವಿರುವಷ್ಟು ಜಾಗ ಬಳಸಿಕೊಳ್ಳಲು ಅಥವಾ ಉದ್ದೇಶಿತ ಪ್ರಸ್ತಾವನೆಯನ್ನು ಕೈಬಿಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ದೊರೆಯುತ್ತದೆ. ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಸರ್ಕಾರ ಈ ಮೊದಲು ಕೈಗೊಂಡ ಯಾವುದೇ ತೀರ್ಮಾನದ ಹೊರತಾಗಿಯೂ ಯೋಜನೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಕೈಬಿಡಲು ಈ ಸುಗ್ರಿವಾಜ್ಞೆ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ಮೂಲಗಳ ಪ್ರಕಾರ, ರಾಜ್ಯ ಸರ್ಕಾರ 1996ರಲ್ಲಿ ಬೆಂಗಳೂರು ಅರಮನೆ ಹಾಗೂ ಆಸ್ತಿ ವಶಪಡಿಸಿಕೊಂಡಾಗ 1996ರ ಬೆಂಗಳೂರು ಅರಮನೆ ಸ್ವಾಧೀನ ಮತ್ತು ವರ್ಗಾವಣೆ ಕಾಯಿದೆಯಡಿ ಪ್ರತಿ ಎಕರೆ ಜಮೀನಿಗೆ ತಲಾ 2 ಲಕ್ಷ ರು.ಗಳಂತೆ 472 ಎಕರೆಗೆ 11 ಕೋಟಿ ರು. ಪರಿಹಾರ ನಿಗದಿ ಮಾಡಿತ್ತು. ಈ ಕಾಯಿದೆಯ ಸಿಂಧುತ್ವದ ಕುರಿತ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ. ಹೀಗಾಗಿ ಕಾಯಿದೆಯಡಿ ನಿಗದಿ ಮಾಡಿರುವ ಪರಿಹಾರ ಮೊತ್ತ (ಎಕರೆಗೆ 2 ಲಕ್ಷ ರು.) ಹಾಗೂ ಪ್ರತಿ ವರ್ಷ ಶೇ.18 ರಷ್ಟು ಬಡ್ಡಿ ಸೇರಿಸಿ 15.39 ಎಕರೆಗೆ ಪರಿಹಾರ ಮೊತ್ತ ಪಾವತಿಸಿ ಖರೀದಿಸುವ ಕುರಿತು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ತಿಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದೊಮ್ಮೆ ಅರಮನೆ ವಾರಸುದಾರರು ಹಾಗೂ ಸುಪ್ರೀಂ ಕೋರ್ಟ್ ಇದಕ್ಕೆ ಸಮ್ಮತಿಸದೆ 3,014 ಕೋಟಿ ರು. ಟಿಡಿಆರ್ ಪಾವತಿಸಬೇಕಾದ ಅನಿವಾರ್ಯತೆ ಎದುರಾದರೆ ರಸ್ತೆ ಅಗಲೀಕರಣವನ್ನೇ ಕೈಬಿಡಲು ಸಹ ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಅಭಿವೃದ್ಧಿಗೆ ಗಂಡಾಂತರ- ಎಚ್.ಕೆ. ಪಾಟೀಲ್:
15.37 ಎಕರೆ ಜಾಗಕ್ಕೆ 3,014 ಕೋಟಿ ರು. ಟಿಡಿಆರ್ ಪರಿಹಾರ ನೀಡುವುದು ಅವ್ಯವಹಾರಿಕ. ಎರಡು ಎಕರೆ ರಸ್ತೆ ನಿರ್ಮಾಣಕ್ಕೆ ಮೂರು ಸಾವಿರಕ್ಕೂ ಹೆಚ್ಚು ಕೋಟಿ ಪರಿಹಾರ ನೀಡಿದರೆ ರಾಜ್ಯಕ್ಕೆ ಗಂಡಾಂತರ ಉಂಟಾಗಲಿದೆ. ರಾಜ್ಯದ ಪ್ರಗತಿಗೆ ವಿರುದ್ಧದ ಕ್ರಮವಾಗಲಿದ್ದು, ಎಲ್ಲ ವರ್ಗದ ಜನರ ಹಣ ದುರುಪಯೋಗ ಆಗಲಿದೆ. ಈ ಹಿನ್ನೆಲೆಯಲ್ಲಿ ಇಷ್ಟು ಮೊತ್ತದ ಟಿಡಿಆರ್ ನೀಡದಿರಲು ನಿರ್ಧಾರ ಮಾಡಲಾಗಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದರು.
ಟಿಡಿಆರ್ ನೀಡುವುದಿಲ್ಲ ಎಂದಾದರೆ ರಸ್ತೆ ಅಗಲೀಕರಣ ಕೈಬಿಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಅರಮನೆ ಮೈದಾನದ ಪೂರ್ಣ ಪ್ರಮಾಣದ ಆಸ್ತಿಯನ್ನು ರಾಜ್ಯ ಸರ್ಕಾರ 1996ರಲ್ಲೇ ಕಾಯಿದೆ ರಚಿಸಿ ವಶಕ್ಕೆ ಪಡೆದಿದೆ. ಈ ಕಾಯಿದೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನೂ ನೀಡಿಲ್ಲ. ಜಾಗದ ಮಾಲೀಕತ್ವವೇ ನಿರ್ಧಾರವಾಗದಿದ್ದರೆ 3,011 ಕೋಟಿ ರು. ಪರಿಹಾರ ನೀಡಲು ಸಾಧ್ಯವೇ? ಒಂದೊಮ್ಮೆ ಟಿಡಿಆರ್ ಪರಿಹಾರ ನೀಡಿದರೆ ಅದನ್ನು ವಾಪಸು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಟಿಡಿಆರ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಟಿಡಿಆರ್ ನೀಡದೆ ಹೇಗೆ ಪರಿಹಾರ ನೀಡುತ್ತೀರಿ ಎಂಬ ಪ್ರಶ್ನೆಗೆ, ಎಲ್ಲವನ್ನೂ ಸುಗ್ರೀವಾಜ್ಞೆ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗುವುದು. ಈ ಆದೇಶದೊಂದಿಗೆ ಪ್ರಮಾಣಪತ್ರವನ್ನು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಬೇಕಾಗಿದೆ. ಹೀಗಾಗಿ ತುರ್ತಾಗಿ ನಿರ್ಧಾರ ಮಾಡಿದ್ದೇವೆ. ರಸ್ತೆ ಅಗಲೀಕರಣ ಆಗಲಿದೆಯೋ ಅಥವಾ ಕೈ ಬಿಡುತ್ತೇವೆಯೋ ಎಲ್ಲವನ್ನೂ ಸುಗ್ರೀವಾಜ್ಞೆಯಲ್ಲೇ ತಿಳಿಸಲಾಗುವುದು. ಟಿಡಿಆರ್ ನೀಡದಿರುವುದು ನಮ್ಮ ಮುಖ್ಯ ಉದ್ದೇಶ ಎಂದಷ್ಟೇ ಹೇಳಿದರು.
ಏನಿದು ವಿವಾದ?:
ವಿವಾದದ ಬಗ್ಗೆ ವಿವರಿಸಿದ ಅವರು, ಬೆಂಗಳೂರು ಅರಮನೆ ಮೈದಾನದ ಒಟ್ಟು 472 ಎಕರೆ 16 ಗುಂಟೆ ಜಾಗಕ್ಕೆ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8 ಮತ್ತು 9ರಲ್ಲಿ 11 ಕೋಟಿ ರು. ನಿಗದಿ ಮಾಡಿ ರಾಜ್ಯ ಸರ್ಕಾರದ ಸ್ವಾಧೀನಕ್ಕೆ ಪಡೆಯಲು 1996ರಲ್ಲಿ ಕಾಯಿದೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಅರಮನೆ ವಾರಸುದಾರರು ಹೈಕೋರ್ಟ್‌ಗೆ ಹೋದರೂ ಸದರಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ವಾರಸುದಾರರು ಸುಪ್ರೀಂ ಕೋರ್ಟ್ ಮೊರೆ ಹೋದರು. ಈ ವೇಳೆ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಮಾಲೀಕತ್ವ ರಾಜ್ಯ ಸರ್ಕಾರಕ್ಕೆ ಸೇರಿದ್ದೇ ಅಥವಾ ಅರಮನೆಗೆ ಸೇರಿದ್ದೇ ಎಂಬುದು ತೀರ್ಮಾನವಾಗಿಲ್ಲ.
ಈ ನಡುವೆ ರಸ್ತೆ ಅಗಲೀಕರಣಕ್ಕಾಗಿ ರಾಜ್ಯ ಸರ್ಕಾರ ಬಳಸಿಕೊಂಡಿರುವ 15.37 ಎಕರೆ ಜಮೀನಿಗೆ 3,011 ಕೋಟಿ ರು. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ರಾಜ್ಯದಲ್ಲಿ ಕೇವಲ 2 ಕಿ.ಮೀ ರಸ್ತೆ ಅಭಿವೃದ್ಧಿಗೆ 3014.00 ಕೋಟಿ ಅಂದರೆ ಪ್ರತಿ ಎಕರೆಗೆ 2000 ಕೋಟಿ ನೀಡಿದರೆ ಆರ್ಥಿಕ ಅಧೋಗತಿ ಉಂಟಾಗಲಿದೆ. ಹೀಗಾಗಿ ಟಿಡಿಆರ್ ನೀಡದಿರಲು ಸಂಪುಟ ತೀರ್ಮಾನಿಸಿದ್ದು, ಇದಕ್ಕಾಗಿ 1996ರ ಕಾಯ್ದೆಗೆ ಪೂರಕವಾದ ಈ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ರಾಜ್ಯಪಾಲರಿಗೆ ಮಂಡಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.
ಟಾರ್ಗೆಟ್ ಮಾಡ್ತಿದ್ದಾರೆ, ಹೋರಾಟ ಮಾಡ್ತೀನಿ
ಮೈಸೂರು : ಬೆಂಗಳೂರಿನ ಅರಮನೆ ಮೈದಾನಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನ ಬಳಿ ಇವೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ.
ಅರಮನೆ ಜಾಗವನ್ನು ಸರ್ಕಾರದ ಅಧಿಕಾರ ವ್ಯಾಪ್ತಿಗೆ ತೆಗೆದುಕೊಳ್ಳುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಹೇಳಿಕೆ ನೀಡಿದ ಅವರು, ಈ ಜಾಗಕ್ಕೆ ಸ್ಟೇ ಆರ್ಡರ್ ಇದೆ. ಸ್ಟೇಟಸ್ ಕೋ ಸಹ ಕೊಟ್ಟಿದ್ದಾರೆ. ಅರಮನೆ ಮೈದಾನದಲ್ಲಿ ಇಷ್ಟು ವರ್ಷ ಚಟುವಟಿಕೆಗಳು ಕರ್ನಾಟಕ ಸರ್ಕಾರಕ್ಕೆ ಗೊತ್ತಿಲ್ಲದೆ ನಡೆದಿಲ್ಲ. ಯಾವುದೇ ಕಾರ್ಯಕ್ರಮ ನಡೆದರು ಅದು ಸರ್ಕಾರದ ಗಮನಕ್ಕೆ ಬಂದಿದೆ ಎಂದರು.
2014ರ ತೀರ್ಪಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಐದು ಜನ ಅಕ್ಕ-ತಂಗಿಯರು ಓನರ್ ಎಂದು ಹೇಳಿದೆ. ರಸ್ತೆ ವಿಸ್ತರಣೆಗೆ ನಮ್ಮ ಜಾಗ ಬಳಸಿಕೊಂಡಿದ್ದಾರೆ. ಬಿಬಿಎಂಪಿ ಕಮಿಷನರ್ ಅವರೇ ಆಫರ್ ಕೊಟ್ಟರು. ಟಿಡಿಆರ್ ಅವರೇ ಕೊಟ್ಟರು. 2014ರಲ್ಲಿಯೇ ಟಿಡಿಆರ್ ನಿರ್ಧಾರ ಆಗಿತ್ತು ಎಂದರು.
ಅರಮನೆಯನ್ನು ಟಾರ್ಗೆಟ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನಿಮಗೂ ಗೊತ್ತಿದೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೂ, ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ. ಕಾರಣ ಮಾತ್ರ ಗೊತ್ತಿಲ್ಲ. ಕಾನೂನು ಹೋರಾಟ ಮಾಡುತ್ತೇನೆ. 40 ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ಮೆಟ್ರೋಗೆ ಜಾಗ ಬಳಸಿಕೊಂಡರೆ ಒಂದೂವರೆಯಷ್ಟು ಪರಿಹಾರ ಕೊಡುತ್ತಾರೆ. ನಮ್ಮ ಜಾಗಕ್ಕೆ ಪರಿಹಾರ ಕೊಡುವಾಗ ಮಾತ್ರ ಅಭಿವೃದ್ಧಿ ವಿಚಾರ ನೆನಪಿಗೆ ಬರುತ್ತದೆ ಎಂದು ಸಿದ್ದರಾಮಯ್ಯನವರ ಹೆಸರಳದೆ ಮಾರ್ಮಿಕವಾಗಿ ಉತ್ತರ ನೀಡಿದರು.
ಬೆಂಗಳೂರು ಅರಮನೆ ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ. ಆ ಜಾಗ ಶ್ರೀಕಂಠದತ್ತ ಒಡೆಯರ್, ಐವರು ಸೋದರಿಯರಿಗೆ ಸೇರಿದ್ದೆಂದು ತೀರ್ಪು ಬಂದಿದೆ. ಬಿಬಿಎಂಪಿ ಆಯುಕ್ತರೇ ರಸ್ತೆ ವಿಸ್ತರಣೆಗೆ ಜಾಗ ಬಳಸಿಕೊಳ್ಳುವ ಆಫರ್ ಕೊಟ್ಟು, ಟಿಡಿಆರ್ ನೀಡಿದ್ದರು. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ನಮ್ಮನ್ನು ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ನಾನು ಕಾನೂನು ಹೋರಾಟ ಮಾಡುತ್ತೇನೆ.
- ಪ್ರಮೋದಾದೇವಿ ಒಡೆಯರ್, ರಾಜವಂಶಸ್ಥೆ