ಸಾರಾಂಶ
ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಪಟಾಕಿ ಹಂಚಲು ಪಟಾಕಿ ದಾಸ್ತಾನು ಮಾಡಿದ್ದ ಕಚೇರಿಗೆ ಪೊಲೀಸರು ಬೀಗ ಹಾಕಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಹೈಡ್ರಾಮವೇ ನಡೆಯಿತು.
ಬೆಂಗಳೂರು : ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಪಟಾಕಿ ಹಂಚಲು ಪಟಾಕಿ ದಾಸ್ತಾನು ಮಾಡಿದ್ದ ಕಚೇರಿಗೆ ಪೊಲೀಸರು ಬೀಗ ಹಾಕಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಹೈಡ್ರಾಮವೇ ನಡೆಯಿತು.
ಲಕ್ಷ್ಮೀದೇವಿ ನಗರ ವಾರ್ಡ್‌ನ ಶಾಸಕರ ಕಚೇರಿಯಲ್ಲಿ ಪಟಾಕಿ ದಾಸ್ತಾನು ಇರುವ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕಚೇರಿ ಪ್ರವೇಶಿಸಲು ಮುಂದಾದರು. ಈ ವೇಳೆ ಶಾಸಕ ಮುನಿರತ್ನ, ಅವರ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಹಂಚಲು ಕಾನೂನಿನಲ್ಲಿ ಅವಕಾಶವಿಲ್ಲ. ಲೈಸೆನ್ಸ್ ಇರಬೇಕು. ಕೆಲ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುಖಾಸುಮ್ಮನೆ ಪಟಾಕಿ ಹಂಚಲು ಅವಕಾಶವಿಲ್ಲ ಎಂದ ಪೊಲೀಸರು, ಮುನಿರತ್ನ ಅವರ ಭಾರೀ ವಿರೋಧದ ನಡುವೆ ಪಟಾಕಿ ದಾಸ್ತಾನ ಇದ್ದ ಕಚೇರಿಗೆ ಬೀಗ ಹಾಕಿದರು.
ನಾನು ಅಕ್ರಮವಾಗಿ ಪಟಾಕಿ ತಂದಿಲ್ಲ. ಕಾನೂನು ಬದ್ಧವಾಗಿ ಪಟಾಕಿ ಖರೀದಿಸಿದ್ದೇನೆ. ಜಿಎಸ್‌ಟಿ ಬಿಲ್ ಇದೆ. ಕ್ಷೇತ್ರದ ಬಡವರು, ಗಾರ್ಮೆಂಟ್ಸ್ ಕೆಲಸಗಾರರು, ಕೂಲಿ ಕಾರ್ಮಿಕರಿಗೆ ನೀಡುವ ಉದ್ದೇಶದಿಂದ ಪಟಾಕಿ ತಂದಿದ್ದೇವೆ. ಇದರಲ್ಲಿ ತ್ಪಪೇನು ಎಂದು ಶಾಸಕ ಮುನಿರತ್ನ ಪ್ರಶ್ನಿಸಿದರು. ಈ ವೇಳೆ ಕೆಲ ಮಹಿಳೆಯರು ಸಹ ಸ್ಥಳಕ್ಕೆ ಬಂದು ನಮಗೆ ಪಟಾಕಿ ಬೇಕು. ನಾವು ಬಡವರು. ನಮ್ಮ ಮಕ್ಕಳು ಪಟಾಕಿ ಸಿಡಿಸಬೇಕು. ಪಟಾಕಿ ಹಂಚಲು ಅವಕಾಶ ಕೊಡಿ ಎಂದು ಪೊಲೀಸರ ಎದುರು ಮನವಿ ಮಾಡಿದರು. ಇದ್ಯಾವುದಕ್ಕೂ ಸೊಪ್ಪು ಹಾಕದ ಪೊಲೀಸರು, ಪಟಾಕಿ ದಾಸ್ತಾನಿದ್ದ ಶಾಸಕರ ಕಚೇರಿಗೆ ಬೀಗ ಜಡಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಹೈಡ್ರಾಮವೇ ನಡೆಯಿತು.