ರಾಜ್ಯದಲ್ಲಿ ಇನ್ನೂ ಎರಡು ದಿನ ಪೂರ್ವ ಮುಂಗಾರು ಅಬ್ಬರ - 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯಲಿದೆ ಮಳೆ

| N/A | Published : Mar 24 2025, 09:00 AM IST

Rain Alert On 22 march

ಸಾರಾಂಶ

ರಾಜ್ಯದಲ್ಲಿ ಇನ್ನೂ ಎರಡು ದಿನ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

 ಬೆಂಗಳೂರು : ರಾಜ್ಯದಲ್ಲಿ ಇನ್ನೂ ಎರಡು ದಿನ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಕಳೆದ ಎರಡು ದಿನ ರಾಜಧಾನಿ ಬೆಂಗಳೂರುಸೇರಿ ದಕ್ಷಿಣ ಒಳನಾಡಿನ ವಿವಿಧ ಭಾಗದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸಿದ್ದು, ಸೋಮವಾರ ಹಾಗೂ ಮಂಗಳವಾರ ಸಹ ಮಳೆಯ ಅಬ್ಬರ ಮುಂದುವರೆಯಲಿದೆ. ಬಳಿಕ ಕ್ರಮೇಣ ಮಳೆ ಪ್ರಮಾಣ ಕಡಿಮೆಯಾಗಲಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉಳಿದಂತೆ ಉತ್ತರ ಒಳನಾಡಿನ ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಗದಗ ಹಾಗೂ ಬೀದರ್‌, ಕರಾವಳಿಯ ದಕ್ಷಿಣ ಕನ್ನಡದಲ್ಲೂ ಮಳೆಯಾಗಲಿದೆ. ಮಳೆಯೊಂದಿಗೆ ಪ್ರಬಲ ಗಾಳಿ ಹಾಗೂ ಗುಡುಗು, ಮಿಂಚಿನ ಆರ್ಭಟ ಸಹ ಕಂಡು ಬರಲಿದೆ. ಕೆಲ ಸ್ಥಳದಲ್ಲಿ ಗಾಳಿ ವೇಗ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ.

ಭಾನುವಾರ ಬೆಳಗ್ಗೆ ಅಂತ್ಯಗೊಂಡಿರುವ ಹವಾಮಾನ ಇಲಾಖೆ ವರದಿ ಪ್ರಕಾರ, ಮಂಡ್ಯದ ಮದ್ದೂರಿನಲ್ಲಿ ಹಾಗೂ ಬೆಂಗಳೂರಿನ ಯಲಹಂಕದ ಎಐಎಫ್‌ನಲ್ಲಿ ಅತಿ ಹೆಚ್ಚು ತಲಾ 6 ಸೆಂ.ಮೀ. ಮಳೆಯಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೊಸಕೋಟೆಯಲ್ಲಿ ತಲಾ 5, ಮಾಗಡಿಯಲ್ಲಿ 3, ರಾಯಲ್ಪಾಡ್‌, ಬೇಲೂರು, ಚಿಂತಾಮಣಿ, ಸರಗೂರು, ನಾಗಮಂಗಲ, ಟಿ.ಜಿ.ಹಳ್ಳಿ, ಜಿಕೆವಿಕೆಯಲ್ಲಿ ತಲಾ 2, ಎಂ.ಎಂ.ಹಿಲ್ಸ್‌, ಬೆಂಗಳೂರು ನಗರ, ಹುಣಸೂರು, ಕನಕಪುರ, ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣ, ಹೆಸರಘಟ್ಟ ಹಾಗೂ ಕೊಡಗಿನ ನಾಪೋಕ್ಲುವಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಿಕ್ಕಮಗಳೂರಲ್ಲಿ ಸಿಡಿಲಿಗೆ ಮಹಿಳೆ ಬಲಿ । ಕೆಲವೆಡೆ ಮರಗಳು ಧರೆಗೆ, ವಿದ್ಯುತ್‌ ವ್ಯತ್ಯಯ

 ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿದಿದ್ದು, ಭಾನುವಾರ ಕೊಡಗು ಸೇರಿ ರಾಜ್ಯದ 5 ಜಿಲ್ಲೆಗಳಲ್ಲಿ ಮಳೆಯಾಗಿದೆ. ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆ ಕುರುಬರಹಳ್ಳಿಯಲ್ಲಿ ಶುಂಠಿ ನಾಟಿ ಮಾಡುವ ವೇಳೆ ಸಿಡಿಲು ಬಡಿದು ನಾಗಮ್ಮ (65) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಭಾನುವಾರ ಮಧ್ಯಾಹ್ನ 1.30ಕ್ಕೆ ಆರಂಭವಾದ ಆಲಿಕಲ್ಲು ಸಹಿತ ಮಳೆ ಸಂಜೆವರೆಗೂ ಸುರಿಯಿತು. ಈ ವೇಳೆ, ಕುರುಬರಹಳ್ಳಿಯಲ್ಲಿ ಮಳೆಯಲ್ಲೇ ಶುಂಠಿ ನಾಟಿ ಮಾಡುತ್ತಿದ್ದ ನಾಗಮ್ಮ ಎಂಬುವರು ಸಿಡಿಲು ಬಡಿದು ಸ್ಥಳದಲ್ಲೇ ಅಸುನೀಗಿದ್ದಾರೆ. ಮಳೆ ಜೊತೆ ಬಲವಾಗಿ ಬೀಸಿದ ಗಾಳಿಗೆ ಕೆಲವೆಡೆ ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಇದೇ ವೇಳೆ, ವಿರಾಜಪೇಟೆ, ಬೇಗೂರು, ಕೊಡಗರಹಳ್ಳಿ, ಮತ್ತಿಕಾಡು, ಕೆದಮಳ್ಳೂರು, ನಾಪೋಕ್ಲು ಬೇತು, ಶ್ರೀಮಂಗಲ, ಕೋತೂರು, ಕುಮಟೂರು ಸೇರಿ ಕೊಡಗಿನ ಹಲವು ಕಡೆ ಗುಡುಗು ಸಹಿತ ಮಳೆಯಾಗಿದೆ.

ಗಣಿನಾಡು ಸಂಡೂರಿನಲ್ಲಿ ಭಾನುವಾರ ವರ್ಷದ ಮೊದಲ ಮಳೆಯ ಸಿಂಚನವಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾದವು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಬೀದರ್‌ನಲ್ಲಿ ಭಾನುವಾರ ಸಾಯಂಕಾಲದ ವೇಳೆ ಗುಡುಗು ಸಹಿತ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತವಾದವು. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಮಾಪೂರ ಗ್ರಾಮದಲ್ಲಿ ಸಿಡಿಲಿನ ಅಬ್ಬರಕ್ಕೆ ಆಕಳೊಂದು ಸಾವನಪ್ಪಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ, ಕೇಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸಾಯಂಕಾಲ ಗಾಳಿ, ಸಿಡಿಲು, ಗುಡುಗು ಸಹಿತ ಸುಮಾರು ಒಂದು ತಾಸು ಉತ್ತಮ ಮಳೆ ಸುರಿಯಿತು. ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ಕೇಸೂರು ಗ್ರಾಮದಲ್ಲಿ ಮನೆಯೊಂದು ಹಾನಿಗೊಳಗಾಗಿದೆ. ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.