ಭವಿಷ್ಯದ ದೃಷ್ಟಿಯಿಂದ ಬೆಂಗ್ಳೂರು ಸಜ್ಜುಗೊಳಿಸಿ: ಮೋದಿ

| N/A | Published : Aug 11 2025, 08:48 AM IST

Modi dk

ಸಾರಾಂಶ

ಜಾಗತಿಕ ಪ್ರಮುಖ ನಗರಗಳೊಂದಿಗೆ ಹೋಲಿಕೆಯಾಗುವ ಬೆಂಗಳೂರು ನಗರವನ್ನು ನಗರ ಯೋಜನೆ, ಮೂಲಸೌಕರ್ಯಗಳ ಮೂಲಕ ಭವಿಷ್ಯದ ದೃಷ್ಟಿಯಿಂದ ಸಜ್ಜುಗೊಳಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಬೆಂಗಳೂರು : ಜಾಗತಿಕ ಪ್ರಮುಖ ನಗರಗಳೊಂದಿಗೆ ಹೋಲಿಕೆಯಾಗುವ ಬೆಂಗಳೂರು ನಗರವನ್ನು ನಗರ ಯೋಜನೆ, ಮೂಲಸೌಕರ್ಯಗಳ ಮೂಲಕ ಭವಿಷ್ಯದ ದೃಷ್ಟಿಯಿಂದ ಸಜ್ಜುಗೊಳಿಸಬೇಕಿದೆ ಎಂದು  ಮೋದಿ ಹೇಳಿದ್ದಾರೆ.

ಭಾನುವಾರ ನಗರದ ಮಹತ್ವದ ಯೋಜನೆ ಎನ್ನಿಸಿರುವ ₹ 15,611 ಕೋಟಿ ಮೊತ್ತದ 44.65 ಕಿ.ಮೀ ಉದ್ದದ ಮೆಟ್ರೋ ಮೂರನೇ ಹಂತದ ಯೋಜನೆಗೆ ಅವರು ರಿಮೋಟ್‌ ಬಟನ್‌ ಒತ್ತುವ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬೆಂಗಳೂರಿನ ಆತ್ಮದಲ್ಲಿ ತತ್ವಜ್ಞಾನವಿದ್ದರೆ, ಕಾರ್ಯವಿಧಾನದಲ್ಲಿ ಟೆಕ್‌ ಜ್ಞಾನವಿದೆ. ಜಾಗತಿಕ ಐಟಿ ನಕಾಶೆಯಲ್ಲಿ ಭಾರತದ ಧ್ವಜ ಹಾರಿಸುತ್ತಿದೆ. ಜಾಗತಿಕ ಪ್ರಮುಖ ನಗರಗಳ ಜತೆಗೆ ಬೆಂಗಳೂರಿನ ತುಲನೆ ಮಾಡಲಾಗುತ್ತಿದೆ. ನಮ್ಮ ನಗರಗಳು ಸ್ಮಾರ್ಟ್‌, ವೇಗ, ಸಮರ್ಥವಿದ್ದರೆ ಮಾತ್ರ ನಮಗೆ ಜಾಗತಿಕ ಸ್ಪರ್ಧೆ ಮಾಡಲು ಸಾಧ್ಯ ಹಾಗೂ ಜಗತ್ತನ್ನು ಮುನ್ನಡೆಸುವ ಹೊಣೆ ನಿಭಾಯಿಸಲು ಸಾಧ್ಯ. 21 ನೇ ಶತಮಾನದಲ್ಲಿ ನಗರ ಯೋಜನೆ, ನಗರ ಮೂಲಸೌಕರ್ಯ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಭವಿಷ್ಯದ ದೃಷ್ಟಿಯಿಂದಲೂ ಬೆಂಗಳೂರನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು.

ಬೆಂಗಳೂರು ಹಳದಿ ಮೆಟ್ರೋ ಮಾರ್ಗದ ಆರಂಭವಾಗಿದೆ, 3ನೇ ಹಂತದ ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದೇ ವೇಳೆ ಬೆಂಗಳೂರು, ಬೆಳಗಾವಿ ನಡುವಿನ ವಂದೇ ಭಾರತ್‌ ರೈಲಿನಿಂದಾಗಿ ವಾಣಿಜ್ಯ ವ್ಯವಹಾರ ಸೇರಿ ಲಕ್ಷಾಂತರ ಜನರಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದರು. ಜತೆಗೆ ಅಮೃತ್‍ಸರ್-ಶ್ರೀ ಮಾತಾ ವೈಷ್ಣೋದೇವಿ ಮತ್ತು ನಾಗಪುರ್-ಪುಣೆ ವಂದೇ ಭಾರತ್ ರೈಲುಗಳಿಗೆ ಅವರು ಆನ್‍ಲೈನ್ ಮೂಲಕ ಚಾಲನೆ ನೀಡಿದ್ದು, ಇದರಿಂದಲೂ ಪ್ರವಾಸೋದ್ಯಮ, ವಹಿವಾಟು ಬೆಳೆಯಲಿದೆ ಎಂದರು.

ಬೆಂಗಳೂರಿನಲ್ಲಿ ಆರಂಭವಾದ ಹಳದಿ ಮಾರ್ಗ ಬಸವನಗುಡಿಯಿಂದ ಹಿಡಿದು ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕ ಸಮಯ ಉಳಿಸಲಿದೆ. ಇದರಿಂದ ಲಕ್ಷಾಂತರ ಜನರ ಜೀವನ ಸರಳಗೊಳಿಸಲಿದೆ, ಕೆಲಸ ಕಾರ್ಯ ಸುಗಮಗೊಳಿಸಲಿದೆ ಎಂದರು.

ಮೆಟ್ರೋದ ಮೂರನೇ ಹಂತದ ಕಿತ್ತಳೆ ಮಾರ್ಗಕ್ಕೂ ಚಾಲನೆ ನೀಡಲಾಗಿದ್ದು, ಹಳದಿ ಮಾರ್ಗದ ಜೊತೆಗೆ ಈ ಕಿತ್ತಳೆ ಮಾರ್ಗ ಆರಂಭವಾದ ಬಳಿಕ ಪ್ರತಿದಿನ 25ಲಕ್ಷ ಜನ ಸಂಚರಿಸಲು ಅನುಕೂಲ ಆಗಲಿದೆ. ಬೆಂಗಳೂರಿನ ಸಾರಿಗೆ ಸಂಪರ್ಕ ಜಾಲವನ್ನು ಇದು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಬೆಂಗಳೂರು ಮೆಟ್ರೋ ವ್ಯವಸ್ಥೆ ದೇಶದ ಸಾರ್ವಜನಿಕ ಮೂಲಸೌಕರ್ಯ ವಿಚಾರದಲ್ಲಿ ಉತ್ತಮ ಮಾದರಿಯಾಗಿ ಕಾಣಿಸಿಕೊಳ್ಳುತ್ತಿದೆ.

ಸಿಎಸ್‌ಆರ್‌ ನಿಧಿಯಡಿ ಕಾರ್ಪೊರೆಟ್‌ ವಲಯದ ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ನಂತಹ ಕಂಪನಿಗಳು ಮೆಟ್ರೋ ನಿಲ್ದಾಣಗಳಿಗೆ ನಿಧಿ ಒದಗಿಸಿದ್ದು ಇದು ಪ್ರೇರಣಾದಾಯಕ ಎಂದರು.

ಬೆಂಗಳೂರಿನ ಯಶಸ್ಸಿನ ಕತೆಯ ಹಿಂದೆ ಯಾರಾದರೂ ಇದ್ದರೆ ಇಲ್ಲಿನ ಜನರ ಶ್ರಮ, ಪ್ರತಿಭೆಯೇ ಕಾರಣ. ಭಾರತ ಸರ್ಕಾರದ ವತಿಯಿಂದ ಸಾವಿರಾರು ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ ಎಂದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ಅಶ್ವಿನಿ ವೈಷ್ಣವ್, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಸಂಸದ ಡಾ.ಸಿ.ಎನ್‌. ಮಂಜುನಾಥ್‌, ತೇಜಸ್ವಿ ಸೂರ್ಯ ವೇದಿಕೆಯಲ್ಲಿದ್ದರು.

ಅಣ್ಣಮ್ಮ ದೇವಿ, ಕೆಂಪೇಗೌಡರ ಸ್ಮರಣೆ

ಆಪರೇಷನ್ ಸಿಂದೂರ ಆದ ಮೇಲೆ ಇದೇ ಮೊದಲ ಬಾರಿಗೆ ನಾನು ಬೆಂಗಳೂರಿಗೆ ಬಂದಿದ್ದೇನೆ. ಕರ್ನಾಟಕ್ಕೆ ಕಾಲಿಡುತ್ತಲೆ ನಮ್ಮತನ ಎನ್ನುವುದು ಅನುಭವ ಆಗುತ್ತದೆ. ಇಲ್ಲಿನ ಸಂಸ್ಕೃತಿ, ಜನರ ಪ್ರೀತಿ, ಕನ್ನಡದ ಸೊಗಡು ಹೃದಯ ಸ್ಪರ್ಶಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬೆಂಗಳೂರು ನಗರದ ಆತ್ಮೀಯ ಬಂದು ಬಗಿನಿಯರೇ ನಿಮಗೆಲ್ಲ ನನ್ನ ನಮಸ್ಕಾರ... ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಅವರು, ಅಣ್ಣಮ್ಮ ದೇವಿ ಸ್ಮರಿಸಿಕೊಂಡರು. ನಾಡಪ್ರಭು ಕೆಂಪೇಗೌಡ ಅವರು ನಮ್ಮ ಪರಂಪರೆ, ಪ್ರಗತಿಯ ದೃಷ್ಟಿಕೋನದೊಂದಿಗೆ ಬೆಂಗಳೂರು ನಿರ್ಮಾಣಕ್ಕೆ ಮುಂದಾಗಿದ್ದರು. ಬೆಂಗಳೂರು ಅಂದಿನಿಂದ ಇಂದಿನವರೆಗೆ ಅದೇ ಸ್ಫೂರ್ತಿಯಲ್ಲಿ ಮುಂದುವರಿಯುತ್ತಿದೆ. ಕೆಂಪೇಗೌಡರ ಕನಸನ್ನು ಬೆಂಗಳೂರು ಸಾಕಾರ ಮಾಡುತ್ತಿದೆ. ಬೆಂಗಳೂರು ಬೆಳೆಯುತ್ತಿರುವ ಆಧುನಿಕ ಭಾರತದ ಚಿಹ್ನೆಯಾಗಿ ಕಾಣುತ್ತಿದೆ ಎಂದು ಬಣ್ಣಿಸಿದರು.

ಆಪರೇಷನ್‌ ಸಿಂದೂರದಲ್ಲಿ

ಬೆಂಗಳೂರು ಯುವಕರ ಕೊಡುಗೆ

ಆಪರೇಷನ್‌ ಸಿಂದೂರದ ಯಶಸ್ಸಿನ ಹಿಂದೆ ನಮ್ಮ ತಂತ್ರಜ್ಞಾನ, ರಕ್ಷಣಾ ವಲಯದಲ್ಲಿನ ಮೇಕ್‌ ಇನ್‌ ಇಂಡಿಯಾದ ತಾಕತ್ತಿದೆ. ಇದರಲ್ಲಿ ಕರ್ನಾಟಕ ಬೆಂಗಳೂರಿನ ಯುವಕರ ಕೊಡುಗೆಯೂ ಸಾಕಷ್ಟಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾರತದ ಸೇನೆ ಸಫಲತೆ ಸಾಧಿಸಿದೆ. ಗಡಿ ಮೀರಿ ಸಾಕಷ್ಟು ಕಿಲೋಮೀಟರ್‌ ದಾಟಿ ಆತಂಕವಾದಿಗಳ ಶಿಬಿರವನ್ನು ನೆಲಸಮ ಮಾಡಿದೆ. ಆತಂಕವಾದಿಗಳನ್ನು ರಕ್ಷಿಸಲು ಮುಂದಾಗುವ ಪಾಕಿಸ್ತಾನವನ್ನು ಕೆಲವೇ ಗಂಟೆಗಳಲ್ಲಿ ಮಂಡಿಯೂರುವಂತೆ ಮಾಡಿತು. ಇಡೀ ಜಗತ್ತು ನಮ್ಮ ಸೇನೆಯ ಸಾಮರ್ಥ್ಯವನ್ನು ನಿಬ್ಬೆರಗಾಗಿ ನೋಡಿದ್ದಷ್ಟೇ ಅಲ್ಲ, ಹೊಸ ಭಾರತದ ದರ್ಶನ ಮಾಡಿದೆ ಎಂದು ಹೇಳಿದರು.

Read more Articles on