ಸಾರಾಂಶ
ರಸ್ತೆ ಗುಂಡಿಗಳಿಗೆ ಟಾರು ಹಾಕಿ ‘ರೋಲರ್’ ಹರಿಸುವ ಬದಲು ಬರೀ ‘ತೇಪೆ’ ಕಾಮಗಾರಿ ನಡೆಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಗುಂಡಿ ಮುಚ್ಚುವ ಕಾರ್ಯಕ್ಕೆ ಸಾರ್ವಜನಿಕರು ತೀವ್ರ ಟೀಕೆ . ನೀವು ಹೀಗೆ ಗುಂಡಿ ಮುಚ್ಚುವ ಬದಲು ಅವುಗಳನ್ನು ಹಾಗೆಯೇ ಬಿಟ್ಟು ಬಿಟ್ಟರು ತೊಂದರೆ ಇಲ್ಲ ಎಂದು ಟೀಕಿಸಿದ್ದಾರೆ.
ಬೆಂಗಳೂರು : ರಸ್ತೆ ಗುಂಡಿಗಳಿಗೆ ಟಾರು ಹಾಕಿ ‘ರೋಲರ್’ ಹರಿಸುವ ಬದಲು ಬರೀ ‘ತೇಪೆ’ ಕಾಮಗಾರಿ ನಡೆಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಗುಂಡಿ ಮುಚ್ಚುವ ಕಾರ್ಯಕ್ಕೆ ಸಾರ್ವಜನಿಕರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನೀವು ಹೀಗೆ ಗುಂಡಿ ಮುಚ್ಚುವ ಬದಲು ಅವುಗಳನ್ನು ಹಾಗೆಯೇ ಬಿಟ್ಟು ಬಿಟ್ಟರು ತೊಂದರೆ ಇಲ್ಲ ಎಂದು ಟೀಕಿಸಿದ್ದಾರೆ.
ಗುಂಡಿಗಳಿಗೆ ಟಾರು ಸುರಿದು ತೇಪೆ ಕೆಲಸ ಮಾಡುವ (ಮೇಸನರಿ ಟ್ರೋವಲ್) ಸಾಧನ ಬಳಸಿ ಟಾರಿನ ಮೇಲ್ಭಾಗ ಸವರುತ್ತಿರುವ ಫೋಟೋಗಳನ್ನು ಜಿಬಿಎ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಗುಣಮಟ್ಟವಿಲ್ಲದ ಕಳಪೆ ಕಾಮಗಾರಿ ಮಾಡಿರುವ ಫೋಟೋವನ್ನು ದೊಡ್ಡ ಸಾಧನೆ ಎನ್ನುವಂತೆ ಪೋಸ್ಟ್ ಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಅನೇಕರು ಟೀಕಿಸಿದ್ದಾರೆ.
ಗುರಪ್ಪನಪಾಳ್ಯದ ಕೆಇಬಿ ಕಾಲೋನಿಯಲ್ಲಿ ಗುಂಡಿಗಳಿಗೆ ಎಕೋ ಫಿಕ್ಸ್ ಕೋಲ್ಡ್ ಮಿಕ್ಸ್ ಹಾಕುವ ಮೂಲಕ ಗುಂಡಿ ಮುಚ್ಚಿದ್ದೇವೆ. ಸುಗಮ ಸಂಚಾರ ಸಾಧ್ಯವಾಗುತ್ತದೆ ಎಂದು ಫೋಟೋ ಪೋಸ್ಟ್ ಮಾಡಲಾಗಿದ್ದು, ಫೋಟೋದಲ್ಲಿ ಕಾರ್ಮಿಕರು ಟಾರು ಹಾಕಿ ತೇಪೆ ಕೆಲಸ ಮಾಡುತ್ತಿದ್ದಾರೆ. ಇನ್ನೂ ಜಿಬಿಎಗಿಂತಲೂ ಅಫಘಾನಿಸ್ತಾನದಲ್ಲೇ ಗುಂಡಿಗಳನ್ನು ಚೆನ್ನಾಗಿ ಮುಚ್ಚಲಾಗುತ್ತಿದೆ ಎಂದು ಬಾಸ್ಕರ್ ನಾಯ್ಕ್ ಎಂಬುವರು ಅಫ್ಘಾನಿಸ್ತಾನದ ವಿಡಿಯೋವೊಂದನ್ನು ಹಂಚಿಕೊಂಡು ಟೀಕಿಸಿದ್ದಾರೆ.
ರೋಡ್ ರೋಲರ್ ಬಳಸದಿದ್ದರೂ ಕನಿಷ್ಟ ಕಂಪ್ರೆಷನ್ ಟೂಲ್ ಆದರೂ ಬಳಸಬಹುದಿತ್ತು. ಬೆಂಗಳೂರಿನಲ್ಲಿ ಗುಂಡಿ ಮುಚ್ಚುವುದು ಜೋಕ್ ಆಗಿದೆ ಎಂದು ಯಶ್ ಸುಗಂಧಿ ಎಂಬುವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ವಿಜಯಾ ಬ್ಯಾಂಕ್ ಲೇಔಟ್‌ನಲ್ಲಿನ ರಸ್ತೆ ಗುಂಡಿಯನ್ನು ಮುಚ್ಚಿರುವುದಾಗಿ ಮೊದಲು ಮತ್ತು ನಂತರದ ಫೋಟೋವನ್ನು ಜಿಬಿಎ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಅತ್ಯಂತ ದುರಾದೃಷ್ಟಕರ ಕಾಮಗಾರಿ ಎಂದು ಟೀಕಿಸಿರುವ ರವೀಂದರ್, ಗುಂಡಿ ಮುಚ್ಚುವಾಗ ಕನಿಷ್ಟ ಒಂದು ‘ಆಯತ’ಕಾರದಲ್ಲಿ ಶಿಸ್ತುಬದ್ಧವಾಗಿ ಕಾಮಗಾರಿ ನಡೆಸಲಾಗದವರು, ಇದನ್ನು ವಿಶ್ವದರ್ಜೆ ಎನ್ನುವಂತೆ ಪೋಸ್ಟ್ ಮಾಡಿರುವುದು ಬೇಸರದ ಸಂಗತಿ ಎಂದಿದ್ದಾರೆ.
ದಿನಕ್ಕೆ 200 ಕಿ.ಮೀ ರೌಂಡ್ಸ್‌ಗೆ ಮಹೇಶ್ವರ್ ರಾವ್ ಸೂಚನೆ
ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಮತ್ತು ಗುಣಮಟ್ಟ ಪರಿಶೀಲನೆ ನಡೆಸಲು ಪ್ರತಿ ನಿತ್ಯ 200 ಕಿ.ಮೀ ರೌಂಡ್ಸ್ ಮಾಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮುಖ್ಯ ಎಂಜಿನಿಯರ್‌ಗಳು ಹಾಗೂ ಅಧೀಕ್ಷಕ ಎಂಜಿನಿಯರ್‌ಗಳಿಗೆ ಸೂಚಿಸಿದ್ದಾರೆ. ಹೆಬ್ಬಾಳ ಫ್ಲೈಓವರ್ ಬಳಿ ದೊಡ್ಡ ರಸ್ತೆ ಗುಂಡಿಯನ್ನು ಸ್ವತಃ ಕಂಡು ಸಿಡಿಮಿಡಿಗೊಂಡಿರುವ ಆಯುಕ್ತರು, ರಸ್ತೆ ಗುಂಡಿ ಮುಚ್ಚುವ ಕಾರ್ಯ ಹೇಗೆ ನಡೆಯುತ್ತಿದೆ? ದಸರಾ ಹಿನ್ನೆಲೆಯಲ್ಲಿ ನಿಂತಿದೆಯೇ? ಅಥವಾ ಪುನಾರಂಭಗೊಂಡಿದೆಯೇ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಮುಖ್ಯ ಎಂಜಿನಿಯರ್‌ಗಳು ಹಾಗೂ ಅಧೀಕ್ಷಕ ಎಂಜಿನಿಯರ್‌ಗಳು ಮುಂದಿನ 5 ದಿನಗಳ ಕಾಲ ಪ್ರತಿನಿತ್ಯ 200 ಕಿ.ಮೀ ನಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಬೇಕು. ರಸ್ತೆ ಗುಂಡಿ ಮುಚ್ಚಲಾಗಿದೆಯೇ? ಹಾಗೇ ಬಿಡಲಾಗಿದೆಯೇ? ಗುಣಮಟ್ಟ ಹೇಗಿದೆ? ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆಯೇ? ಮುಚ್ಚದಿದ್ದರೆ ಕಾರಣಗಳು ಏನು? ಎಂಬುದನ್ನು ಪರಿಶೀಲಿಶಬೇಕು ಎಂದು ಸೂಚಿಸಿದ್ದಾರೆ.
ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ನಗರದ ಎಲ್ಲಾ ರಸ್ತೆಗಳನ್ನು ಗುಂಡಿ ಮುಕ್ತ ರಸ್ತೆಗಳಾಗಿ ಪರಿವರ್ತಿಸಬೇಕು ಎಂದು ಆಯುಕ್ತ ಮಹೇಶ್ವರ್ ರಾವ್ ಖಡಕ್ ಸೂಚನೆ ನೀಡಿದ್ದಾರೆ.