ಸಾರಾಂಶ
ಬೀದಿ ನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರು : ಬೀದಿ ನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸಿಎಂ ಕುರ್ಚಿಯ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಊಟ ನೀಡುವ ಯೋಜನೆ ತರಲಾಗಿದೆ ಎಂದು ಕಿಡಿಕಾರಿದ್ದಾರೆ.
ಬೀದಿನಾಯಿಗಳ ಉಪಟಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಅದಕ್ಕಾಗಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ಈಗಾಗಲೇ ಬಿಬಿಎಂಪಿಯಲ್ಲಿ ಯೋಜನೆಯಿದೆ. ಜನರು ಹಾಗೂ ಸಂಘಟನೆಗಳು ಈಗಾಗಲೇ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಈಗ ಬೌ ಬೌ ಬಿರಿಯಾನಿ ಹಾಕುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಪ್ರತಿ ಬೀದಿಗಳಲ್ಲಿ ಜನರು ಬೀದಿನಾಯಿಗಳಿಗೆ ಊಟ ಹಾಕುವುದು ಸಾಮಾನ್ಯವಾಗಿದೆ. ಈಗ ಹಣ ಲೂಟಿ ಮಾಡಲು ಇಂತಹ ಯೋಜನೆ ತರಲಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ. ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಂಬಳ ಕೊಡಲು ಹಣವಿಲ್ಲ. ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಯಾವುದಕ್ಕೂ ಹಣ ಇಲ್ಲದಿರುವಾಗ ಬೀದಿನಾಯಿಗಳಿಗೆ ಬಿರಿಯಾನಿ ನೀಡಿ, ಅದರಲ್ಲಿ ಹಣ ಕೊಳ್ಳೆ ಹೊಡೆಯುವ ಸ್ಕೀಮ್ ತರಲಾಗಿದೆ ಎಂದು ಕಿಡಿಕಾರಿದರು.
ಬೆಕ್ಕು, ಹೆಗ್ಗಣಗಳಿಗೂ ಊಟ ನೀಡಬಹುದು: ವ್ಯಂಗ್ಯ
ಬೀದಿನಾಯಿಗಳ ಆರೋಗ್ಯದ ಆರೈಕೆಗೆ ಪಶು ಆಸ್ಪತ್ರೆ ನಿರ್ಮಿಸಬಹುದಿತ್ತು. ಬೀದಿ ಬದಿಯಲ್ಲಿ ಬಿದ್ದಿರುವ ನಾಯಿ ಅಥವಾ ಅಪಘಾತಕ್ಕೊಳಗಾದ ನಾಯಿಗಳನ್ನು ತಂದು ಚಿಕಿತ್ಸೆ ನೀಡಬಹುದು. ಅದನ್ನು ಬಿಟ್ಟು ಆಹಾರ ನೀಡುವ ಯೋಜನೆ ತಂದಿರುವುದು ಸರಿಯಲ್ಲ. ಬೀದಿನಾಯಿಗಳಿಗೆ ಮಾಂಸ ನೀಡುವುದರಿಂದ ಅವು ಕ್ರೂರವಾಗಿ ವರ್ತಿಸಬಹುದು. ಈಗಾಗಲೇ ನಮ್ಮ ಸಾಮಾನ್ಯ ಆಹಾರಕ್ಕೆ ಹೊಂದಿಕೊಂಡಿರುವ ಅವುಗಳಿಗೆ ಇಂತಹ ಆಹಾರ ನೀಡುವುದರಿಂದ ಸಮಸ್ಯೆ ಉಂಟಾಗಬಹುದು. ಬಿಬಿಎಂಪಿಯ ಹಣವನ್ನು ತಿನ್ನಲು ದಾರಿ ಹುಡುಕಿಕೊಂಡಿದ್ದಾರೆ. ಬೆಕ್ಕು, ಹೆಗ್ಗಣಗಳಿಗೂ ಊಟ ನೀಡಬಹುದು ಎಂದು ವ್ಯಂಗ್ಯವಾಡಿದರು.
ಈ ಯೋಜನೆಯಲ್ಲಿ ಇನ್ನು ಮುಂದೆ ಹಗರಣವಾಗಲಿದೆ. ಆಗ ಯಾವುದೋ ತನಿಖಾ ಸಮಿತಿಯನ್ನು ನೇಮಿಸುತ್ತಾರೆ. ಕೊನೆಗೆ ವರದಿ ಮುಚ್ಚಿ ಹೋಗುತ್ತದೆ. ಇಂತಹ ಅಕ್ರಮಗಳಿಗೆ ಇದು ಕಾರಣವಾಗಲಿದೆ ಎಂದು ಆರ್.ಅಶೋಕ್ ಕಿಡಿಕಾರಿದರು.
ನಾಯಿಗಳಿಗೆ ಚಿಕನ್ ಹಾಕುವುದು
ಸರಿಯಲ್ಲ: ಡಾ.ಸಿ.ಎನ್.ಮಂಜುನಾಥ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ರಾಜ್ಯ ಸರ್ಕಾರದ ಯೋಜನೆ ಸಮಂಜಸವಾದುದ್ದಲ್ಲ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಎಷ್ಟೋ ಕಡೆ ಮಕ್ಕಳನ್ನು ಕಿತ್ತು ತಿನ್ನುವುದನ್ನು ನೋಡಿದ್ದೇವೆ. ಮನುಷ್ಯ ಮನುಷ್ಯನನ್ನು ಸಾಯಿಸಿದರೆ ಜೈಲು ಶಿಕ್ಷೆ ಇದೆ. ನಾಯಿ ಸಾಯಿಸಿದರೆ ಅದಕ್ಕೆ ಏನು ಇಲ್ಲ. ಹಾಗಾಗಿ ಈ ಕಾನೂನು ದೇಶದಲ್ಲಿಯೇ ತಿದ್ದುಪಡಿ ಆಗಬೇಕಿದೆ. ದೊಡ್ಡ ನಗರಗಳಲ್ಲಿ ನಾಯಿಗಳಿಗಾಗಿ ದೊಡ್ಡ ಜೈಲು ಮಾಡಬೇಕು ಎಂದರು.
ಪ್ರತ್ಯೇಕ ಸ್ಥಳ ಮಾಡಿ ಆಹಾರ ಕೊಡಿ:
ಬೀದಿ ನಾಯಿಗಳ ಮೇಲೆ ಸರ್ಕಾರಕ್ಕೆ ಅಷ್ಟೊಂದು ಕರುಣೆ ಇದ್ದರೆ ಅವುಗಳಿಗೆ ಪ್ರತ್ಯೇಕ ಪಾರ್ಕ್, ನಾಯಿ ಶಾಲೆ ಅಂತ ಮಾಡಿ ಚಿಕನ್ ಕೊಡಬೇಕು. ಈ ಯೋಜನೆಯನ್ನು ಹೇಗೆ ಜಾರಿ ಮಾಡಲು ಸಾಧ್ಯ ಹೇಳಿ ಬೀದಿ-ಬೀದಿಗೆ ಹೋಗಿ ಕೊಡ್ತೀರಾ? ಹತ್ತು ಬೀದಿಗಳಲ್ಲಿ ಊಟವನ್ನು ಎಲ್ಲಿ ಇಡುತ್ತೀರಾ? ಎಂದು ಪ್ರಶ್ನಿಸಿದರು.