ಖ್ಯಾತ ಪತ್ರಕರ್ತ ಟಿ.ಜೆ.ಎಸ್‌.ಜಾರ್ಜ್‌ ಇನ್ನಿಲ್ಲ

| N/A | Published : Oct 04 2025, 06:12 AM IST

TJS George passes away

ಸಾರಾಂಶ

ಖ್ಯಾತ ಪತ್ರಕರ್ತ, ಲೇಖಕ ಹಾಗೂ ‘ಕನ್ನಡಪ್ರಭ’ ಪತ್ರಿಕೆ ಅಂಕಣಕಾರರಾಗಿದ್ದ ಪದ್ಮಭೂಷಣ ಟಿ.ಜೆ.ಎಸ್.ಜಾರ್ಜ್ (97) ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದ್ದಾರೆ.

  ಬೆಂಗಳೂರು :  ಖ್ಯಾತ ಪತ್ರಕರ್ತ, ಲೇಖಕ ಹಾಗೂ ‘ಕನ್ನಡಪ್ರಭ’ ಪತ್ರಿಕೆ ಅಂಕಣಕಾರರಾಗಿದ್ದ ಪದ್ಮಭೂಷಣ ಟಿ.ಜೆ.ಎಸ್.ಜಾರ್ಜ್ (97) ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದ್ದಾರೆ.

ತಯ್ಯಿಲ್ ಜೇಕಬ್ ಸೋನಿ ಜಾರ್ಜ್ (ಟಿಜೆಎಸ್‌ ಜಾರ್ಜ್) ಅವರು 1928ರ ಮೇ 7 ರಂದು ಕೇರಳದಲ್ಲಿ ಜನಿಸಿದ್ದರು. ಕಳೆದ ಏಳೂವರೆ ದಶಕಗಳಿಂದ ಪತ್ರಿಕೋದ್ಯಮ, ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದ್ದರು. ಈ ಸೇವೆಗೆ ಕೇಂದ್ರ ಸರ್ಕಾರ 2011ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಜಾರ್ಜ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಚಿವರು, ಹಿರಿಯ ಪತ್ರಕರ್ತರು, ಸಾಹಿತಿಗಳು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ಜಾರ್ಜ್‌ ತಮ್ಮ ದಿಟ್ಟ ಬರವಣಿಗೆ ಮತ್ತು ರಾಜಿಯಾಗದ ಧ್ವನಿಯಿಂದ ಏಳೂವರೆ ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದರು. ಅವರ ಬರಹಗಳು ಓದುಗರನ್ನು ಯೋಚಿಸುವಂತೆ, ಪ್ರಶ್ನಿಸುವಂತೆ ಮತ್ತು ಸಮಾಜದಲ್ಲಿನ ಸಮಕಾಲೀನ ಬೆಳವಣಿಗೆಗಳ ಜತೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದವು.

ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ಅವರು ನಂತರ 1950ರಲ್ಲಿ ಮುಂಬೈನ ಫ್ರೀ ಪ್ರೆಸ್ ಜರ್ನಲ್‌ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಇಂಟರ್‌ನ್ಯಾಷನಲ್‌ ಪ್ರೆಸ್‌ ಇನ್‌ಸ್ಟಿಟ್ಯೂಟ್‌ ಸೇರಿ ಹಲವು ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಸಂಪಾದಕೀಯ ಸಲಹೆಗಾರರೂ ಆಗಿದ್ದ ಅವರು ‘ಪಾಯಿಂಟ್ ಆಫ್ ವ್ಯೂ‘ ಹೆಸರಿನಲ್ಲಿ 25 ವರ್ಷಗಳ ಕಾಲ ಅಂಕಣ ಬರೆದಿದ್ದರು. ಜಾರ್ಜ್‌ ಅವರ ಪಾಯಿಂಟ್‌ ಆಫ್‌ ವ್ಯೂ ಕನ್ನಡಪ್ರಭ ಪತ್ರಿಕೆಯಲ್ಲಿ ʼನೇರಮಾತುʼ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು.

1,300 ವಾರಗಳ ಕಾಲ ನಿರಂತರ ಅಂಕಣ ಬರೆದಿದ್ದ ಟಿಜೆಎಸ್‌ ಜಾರ್ಜ್‌ ಅವರು ನೂರಾರು ಪತ್ರಕರ್ತರಿಗೆ ಪ್ರೇರಣೆ ನೀಡಿದ್ದರು. ಪದ್ಮಭೂಷಣ ಪುರಸ್ಕಾರದ ಜತೆಗೆ ಕೇರಳ ಪತ್ರಿಕೋದ್ಯಮದ ಅತ್ಯುನ್ನತ ಪುರಸ್ಕಾರ ಸ್ವದೇಶಾಭಿಮಾನಿ ಕೇಸರಿ ಪ್ರಶಸ್ತಿ, ಬಶೀರ್‌ ಪುರಸ್ಕಾರ, ಕಮಲಾ ಸೂರ್ಯ ಪ್ರಶಸ್ತಿ, ಕೇಸರಿ ಮೀಡಿಯಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

 ಜಾರ್ಜ್‌ ಅವರು ತಮ್ಮ ಹರಿತವಾದ ಲೇಖನಿ ಮತ್ತು ರಾಜಿಯಾಗದ ಧ್ವನಿಯಿಂದ ಸುದೀರ್ಘ ಕಾಲ ಭಾರತೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ್ದರು. ಅವರು ಬರಹಗಳ ಮೂಲಕ ನಿಜವಾದ ಬುದ್ಧಿಜೀವಿಯಾಗಿದ್ದರು. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Read more Articles on