ಸಾರಾಂಶ
ನೇರಮಾತು, ನಿಷ್ಠುರ ದನಿ, ಪ್ರಖರ ಚಿಂತನೆ, ಸ್ಪಷ್ಟ ರಾಜಕೀಯ ನಿಲುವು ಮತ್ತು ಪ್ರಜಾಪ್ರಭುತ್ವದ ಮೇಲೆ ಗಾಢ ನಂಬಿಕೆ ಇಟ್ಟಿದ್ದ ಪತ್ರಕರ್ತ, ಸಂಪಾದಕ, ಲೇಖಕ, ಜೀವನಚರಿತ್ರಕಾರ, ಪ್ರಬಂಧಕಾರ ಟಿಜೆಎಸ್ ಜಾರ್ಜ್ ಬರೆವಣಿಗೆ ನಿಲ್ಲಿಸಿದ್ದಾರೆ.
- ಜೋಗಿ
- 7.5.1928 - 3.10.2025
ನೇರಮಾತು, ನಿಷ್ಠುರ ದನಿ, ಪ್ರಖರ ಚಿಂತನೆ, ಸ್ಪಷ್ಟ ರಾಜಕೀಯ ನಿಲುವು ಮತ್ತು ಪ್ರಜಾಪ್ರಭುತ್ವದ ಮೇಲೆ ಗಾಢ ನಂಬಿಕೆ ಇಟ್ಟಿದ್ದ ಪತ್ರಕರ್ತ, ಸಂಪಾದಕ, ಲೇಖಕ, ಜೀವನಚರಿತ್ರಕಾರ, ಪ್ರಬಂಧಕಾರ ಟಿಜೆಎಸ್ ಜಾರ್ಜ್ ಬರೆವಣಿಗೆ ನಿಲ್ಲಿಸಿದ್ದಾರೆ. ಆಧುನಿಕ ಪತ್ರಿಕೋದ್ಯಮದ ಹರಿಕಾರ ಎಂದೇ ಹೆಸರಾಗಿದ್ದ ಅವರು ತಮ್ಮ ಅಂಕಣಗಳಿಂದ ಭ್ರಷ್ಟರಾಜಕಾರಣಿಗಳು ಬೆಚ್ಚಿ ಬೀಳುವಂತೆ ಮಾಡುತ್ತಿದ್ದವರು. ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತಿದ್ದಾಗೆಲ್ಲ, ತಮ್ಮ ಬರಹಗಳಿಂದ ಎಚ್ಚರಿಸುತ್ತಿದ್ದ ಟಿಜೆಎಸ್ ಜಾರ್ಜ್ ಬರೆಯುತ್ತಿದ್ದ ಪಾಯಿಂಟ್ ಆಫ್ ವ್ಯೂ ಅಂಕಣಕ್ಕಾಗಿ ಲಕ್ಷಾಂತರ ಮಂದಿ ಓದುಗರು ಕಾಯುತ್ತಿದ್ದರು. ಅವರ ಬರಹದ ಚಾಟಿಯೇಟು ತಮ್ಮ ಕಡೆಗೆ ತಿರುಗದಂತೆ ಅವರ ಕಾಲದ ರಾಜಕಾರಣಿಗಳು ಎಚ್ಚರ ವಹಿಸುತ್ತಿದ್ದರು.
ತಾಯಿಲ್ ಜೇಕಬ್ ಸೋನಿ ಜಾರ್ಜ್ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಂತರ ಟಿಜೆಎಸ್ ಜಾರ್ಜ್ ಆದರು. ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ಅವರು ಭಾರತದ ಸಾಕ್ಷಿಪ್ರಜ್ಞೆಯಂತಿದ್ದರು. ರಾಮನಾಥ ಗೋಯೆಂಕಾ ಅವರಿಗೆ ಅತ್ಯಂತ ಆಪ್ತರಾಗಿದ್ದ ಟಿಜೆಎಸ್, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ, ಪತ್ರಿಕೋದ್ಯಮದ ಮೂಲಪಾಠಗಳ ಜತೆಗೇ, ಪತ್ರಕರ್ತರಿಗೆ ಇರಬೇಕಾದ ಶಿಸ್ತು, ಸಂಯಮವನ್ನು ತಮ್ಮ ನಡೆನುಡಿಯ ಮೂಲಕ ತೋರಿಸಿಕೊಟ್ಟವರು. ಪತ್ರಿಕಾ ಜಗತ್ತಿಗೇ ಮಾದರಿಯಾದವರು.
ಟಿಜೆಎಸ್ ತಮ್ಮ ಪತ್ರಿಕಾ ಪಯಣ ಆರಂಭಿಸಿದ್ದು 1950ರಲ್ಲಿ ಫ್ರೀ ಪ್ರೆಸ್ ಜರ್ನಲ್ ಮೂಲಕ. 22ರ ತರುಣ ಜಾರ್ಜ್ ಪತ್ರಿಕೆ ಸೇರಿದಾಗ ಅವರಿಗೆ ಸಂಪಾದಕರಾಗಿ ಸಿಕ್ಕವರು ಸ್ವಾಮಿನಾಥನ್ ಸದಾನಂದ. ಒಂದು ಮಳೆಗಾಲದ ಸಂಜೆ, ಸರಿಯಾದ ಸಮಯಕ್ಕೆ ಪತ್ರಿಕಾ ಕಚೇರಿ ಸೇರಲಾಗದ ಸದಾನಂದ, ಇವತ್ತಿನ ಪತ್ರಿಕೆಯ ಹೊಣೆ ನಿನ್ನದು ಎಂದು ಹೇಳಿ, ಇಡೀ ಸಂಚಿಕೆಯ ಜವಾಬ್ದಾರಿಯನ್ನು ಆಗಷ್ಟೇ ಕೆಲಸಕ್ಕೇ ಸೇರಿದ್ದ ಜಾರ್ಜ್ ಅವರಿಗೆ ವಹಿಸುತ್ತಾರೆ. ಜಾರ್ಜ್ ಅವರ ನಂಬಿಕೆ ಹುಸಿಮಾಡದೇ, ಅಚ್ಚುಕಟ್ಟಾಗಿ ಪತ್ರಿಕೆ ಹೊರತರುತ್ತಾರೆ. ಹೀಗೆ ಪತ್ರಿಕೋದ್ಯಮ ಎಂಬ ಸಾಗರಕ್ಕೆ ಏಕಾಏಕಿ ಎಸೆಯಲ್ಪಟ್ಟವರು ಟಿಜೆಎಸ್. ಅದಾದ ಸ್ಪಲ್ಪ ವರ್ಷಕ್ಕೇ ಅವರು ಇಂಟರ್‌ನ್ಯಾಷನಲ್ ಪ್ರೆಸ್ ಇನ್‌ಸ್ಟಿಟ್ಯೂಟ್, ದಿ ಸರ್ಚ್ ಲೈಟ್, ಫಾರ್ ಈಸ್ಟರ್ನ್ ಇಕನಾಮಿಕ್ ರಿವ್ಯೂಗಳಲ್ಲಿ ಕೆಲಸ ಮಾಡಿ, ನಂತರ ಹಾಂಕಾಂಗಿನಲ್ಲಿ ಏಷಿಯಾವೀಕ್ ಪತ್ರಿಕೆಯನ್ನು ಆರಂಭಿಸಿ, ಅದರ ಸಂಸ್ಥಾಪಕ ಸಂಪಾದಕರಾಗುತ್ತಾರೆ. ತನ್ನ ಕಾಲದ ಬಹುಮುಖ್ಯ ರಾಜಕೀಯ ವಿಶ್ಲೇಷಕ ಎಂದು ಹೆಸರಾಗುತ್ತಾರೆ. ಪೌರ್ವಾತ್ಯ ದೇಶಗಳ ಆರ್ಥಿಕ ಮತ್ತು ರಾಜಕೀಯ ಸಂಗತಿಗಳ ಕುರಿತು ಅಧಿಕೃತ ಭಾತ್ಮೀದಾರರೆಂದು ಹೆಸರಾಗುತ್ತಾರೆ.
ಮುಂಬಯಿಯಲ್ಲಿದ್ದ ದಿನಗಳಲ್ಲಿ ಬಾಳಾ ಠಾಕ್ರೆಯಂಥವರ ಒಡನಾಟದಲ್ಲಿ ಇದ್ದವರು ಜಾರ್ಜ್. ಅವರ ರಾಜಕೀಯ ಸಂವೇದನೆಯನ್ನು ರೂಪಿಸಿದ ದಿನಗಳು ಅವು. ಮುಂದೆ ಅವರು ಎಷ್ಟು ಸಮರ್ಥವಾಗಿ, ನಿಷ್ಪಕ್ಷಪಾತವಾಗಿ ರಾಜಕೀಯ ವಿಶ್ಲೇಷಣೆ ಮಾಡುತ್ತಿದ್ದರು ಎಂದರೆ ಮಾಧ್ಯಮಗಳನ್ನು ಕಂಡರೆ ಉರಿದುಬೀಳುತ್ತಿದ್ದ ಜಯಲಲಿತಾ ಕೂಡ ಅವರ ಅಂಕಣಗಳನ್ನು ಮೆಚ್ಚಿಕೊಂಡು ಜಾರ್ಜ್ ಅವರನ್ನು ಅಭಿನಂದಿಸುತ್ತಿದ್ದರು. ಸತತವಾಗಿ 25 ವರ್ಷಗಳ ಕಾಲ ಪಾಯಿಂಟ್ ಆಫ್ ವ್ಯೂ ಅಂಕಣ ಬರೆದ ಜಾರ್ಜ್, 2022ರ ಜೂನ್ ತಿಂಗಳಲ್ಲಿ ಕೊನೆಯ ಅಂಕಣ ಬರೆದು ಪೆನ್ನು ಕೆಳಗಿಡುತ್ತಾರೆ. ಆ ನಂತರ ಅವರು ಯಾವುದೇ ಪತ್ರಿಕೆಗೆ ಬರೆಯಲಿಲ್ಲ. ಹಾಗಿದ್ದೂ ದಿನಕ್ಕೆ ಸುಮಾರು ಒಂದು ಗಂಟೆಗಳ ಕಾಲ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು ಅವರು. ಓದು ಅವರ ಬದುಕಿನ ದಿನಚರಿಯಲ್ಲಿ ಸೇರಿಹೋಗಿತ್ತು.
ಮೇ, 7 1928ರಲ್ಲಿ ಕೇರಳದಲ್ಲಿ ಜನಿಸಿದ ಜಾರ್ಜ್ ತಮ್ಮ ಬದುಕಿನ ಬಹುಭಾಗವನ್ನು ಬೆಂಗಳೂರಲ್ಲಿ ಕಳೆದರು. ಕನ್ನಡಪ್ರಭ ಸಂಪಾದಕರಾಗಿದ್ದ ವೈಎನ್‌ಕೆ ಅವರಿಗೆ ಆಪ್ತರಾಗಿದ್ದ ಟಿಜೆಎಸ್ ಕರ್ನಾಟಕದ ಸಾಹಿತ್ಯ, ಸಂಗೀತ, ರಂಗಭೂಮಿಯ ಕುರಿತು ತೀವ್ರ ಆಸಕ್ತಿ ಹೊಂದಿದವರು. ಇಳಿವಯಸ್ಸಿನಲ್ಲೂ ತಾವೇ ತಮ್ಮ ಕಾರು ಓಡಿಸಿಕೊಂಡು ತಮ್ಮಿಷ್ಟ ಬಂದ ನಾಟಕಗಳಿಗೆ, ಊರುಗಳಿಗೆ ಹೋಗುತ್ತಿದ್ದ ಜಾರ್ಜ್ ಸಂಗೀತದಲ್ಲಿ ಮಹಾನ್ ಆಸಕ್ತಿ ಹೊಂದಿದ್ದರು. ಸಂಗೀತ ಕಚೇರಿಗಳನ್ನು ಸಾಮಾನ್ಯವಾಗಿ ತಪ್ಪಿಸುತ್ತಿರಲಿಲ್ಲ.
ಪತ್ರಕರ್ತರಾಗಿ ಜಾರ್ಜ್ ಎಷ್ಟು ಪ್ರಸಿದ್ಧರೋ ಲೇಖಕರಾಗಿಯೂ ಅವರು ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಜೀವನ ಚರಿತ್ರೆಗಳನ್ನು ಬರೆಯುವುದರಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಟಿಜೆಎಸ್ ಅವರು ಬರೆದಿರುವ ಜೀವನ ಚರಿತ್ರೆಗಳ ಪೈಕಿ ಎಂ.ಎಸ್ ಸುಬ್ಬುಲಕ್ಷ್ಮೀ, ಪೊತನ್ ಜೋಸೆಫ್ ನರ್ಗಿಸ್ ಮತ್ತು ಕೃಷ್ಣ ಮೆನನ್ ಅಪಾರ ಜನಪ್ರಿಯತೆ ಕಂಡಿವೆ. ಬೆಂಗಳೂರಿನಲ್ಲಿ ನಲವತ್ತು ವರ್ಷಗಳನ್ನು ಕಳೆದಿರುವ ಜಾರ್ಜ್ ಅವರು ಬೆಂಗಳೂರಿನ ಕುರಿತು ಬರೆದಿರುವ ಆಸ್ಕ್ಯೂ ಪುಸ್ತಕ ಅವರ ಬೆಂಗಳೂರು ಪ್ರೇಮವನ್ನು ತೋರುತ್ತದೆ. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಅವರು ಬರೆಯುತ್ತಿದ್ದ ಅಂಕಣ ಕೊನೆಯ ದಿನಗಳ ತನಕವೂ ಜನಪ್ರಿಯವಾಗಿತ್ತು. ಟಿಜೆಎಸ್ ಜಾರ್ಜ್ ಅವರು ಹೇಳಬೇಕಾದ ವಿಚಾರವನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ದಿಟ್ಟತನದಿಂದ ಹೇಳಬಲ್ಲ ಕೆಲವೇ ಪತ್ರಕರ್ತರ ಪೈಕಿ ಅವರು ಮುಂಚೂಣಿಯಲ್ಲಿದ್ದರು. ಕೊನೆಯ ತನಕವೂ ಅವರ ತನ್ನ ನಿಷ್ಠುರ ನಿಲುವನ್ನು ಬಿಟ್ಟುಕೊಟ್ಟಿರಲಿಲ್ಲ. ಪತ್ರಿಕೋದ್ಯಮ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದ ದಿನಗಳಲ್ಲಿ, ಮಾಧ್ಯಮದ ಮೌಲ್ಯ ಕುಸಿಯದಂತೆ ಪತ್ರಿಕೆಯನ್ನು ಲಾಭದಾಯಕ ಆಗಿಸುವ ಸಲಹೆಗಳನ್ನು ನೀಡಿದವರು ಅವರು.
ಪತ್ರಿಕೋದ್ಯಮದ ಮೊದಲ ಪಠ್ಯ ಪುಸ್ತಕ ಎಡಿಟಿಂಗ್-ಎ ಹ್ಯಾಂಡ್ ಬುಕ್ ಫಾರ್ ಜರ್ನಲಿಸ್ಟ್ ಬರೆದು ಪ್ರಕಟಿಸಿದ ಟಿಜೆಎಸ್ ಜಾರ್ಜ್ ಅವರು, ಪೋತನ್ ಜೋಸೆಫ್ ಕುರಿತು ಲೆಸನ್ಸ್ ಇನ್ ಜರ್ನಲಿಸಂ ಎಂಬ ಕೃತಿ ರಚಿಸಿದ್ದಾರೆ. ಆಧುನಿಕ ರಾಜಕೀಯದ ಕುರಿತಾಗಿ ಅವರು ಬರೆದಿರುವ ದಿ ಫಸ್ಟ್ ರೆಪ್ಯೂಜ್ ಆಫ್ ಸ್ಕೌಂಡ್ರಲ್ಸ್: ಪೊಲಿಟಿಕ್ಸ್ ಇನ್ ಮಾಡರ್ನ್ ಇಂಡಿಯಾ ಅವರ ಬಹು ಜನಪ್ರಿಯ ಕೃತಿ ಮತ್ತು ರಾಜಕೀಯ ಕೈಪಿಡಿ.
ಕಮಲಾ ಸುರಯ್ಯ ಪುರಸ್ಕಾರಂ, ಬಶೀರ್ ಪುರಸ್ಕಾರಂ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಹಮ್ಮದ್ ಕೋಯಾ ಪತ್ರಿಕೋದ್ಯಮ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಅಜೀಕೋಡು ಪ್ರಶಸ್ತಿ- ಹೀಗೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.
ಎಲ್ಲೂ ಕೆಲಸ ಮಾಡುವುದಿಲ್ಲ ಎಂದು ಸ್ವಯಂ ನಿವೃತ್ತಿ ಘೋಷಿಸಿದ್ದ ವೈಎನ್‌ಕೆ ಅವರನ್ನು ಮನವೊಲಿಸಿ ಕನ್ನಡಪ್ರಭಕ್ಕೆ ಕರೆತಂದವರು. ಪತ್ರಿಕೋದ್ಯಮದ ಬಹುತೇಕ ಏಕಲವ್ಯರಿಗೆ ಅವರು ಇವತ್ತಿಗೂ ಗುರು ಸಮಾನ ದ್ರೋಣಾಚಾರ್ಯರು. ಪತ್ರಕರ್ತರಿಗಾಗಿಯೇ ಅವರು ಆರಂಭಿಸಿದ್ದ ಏಷಿಯನ್ ಸ್ಕೂಲ್ ಆಫ್ ಜರ್ನಲಿಸಮ್ ಹಲವಾರು ಪ್ರತಿಭಾವಂತ ಪತ್ರಕರ್ತರನ್ನು ಸೃಷ್ಟಿಸಿದೆ.
ಇಂಗ್ಲಿಷ್ ಪತ್ರಕರ್ತರಾಗಿದ್ದರೂ ಕನ್ನಡ ಪತ್ರಿಕೋದ್ಯಮದ ಜತೆ ನಂಟು ಮತ್ತು ಪ್ರತಿಭಾವಂತರ ಮೇಲೊಂದು ಕಣ್ಣು ಇಟ್ಟಿದ್ದವರು ಟಿಜೆಎಸ್. ಅವರ ಮಾರ್ಗದರ್ಶನ ಪಡೆದ ಅನೇಕರು ಇವತ್ತು ಪ್ರಮುಖ ಪತ್ರಿಕೆಗಳ ಸಂಪಾದಕರಾಗಿದ್ದಾರೆ. ವಿಶ್ವೇಶ್ವರ ಭಟ್, ಎಚ್ ಆರ್ ರಂಗನಾಥ್, ರವಿ ಹೆಗಡೆ, ಬಾಲಸುಬ್ರಹ್ಮಣ್ಯಂ, ಎಸ್.ಕೆ. ಶಾಮಸುಂದರ್, ಸುಧಾಕರ ದರ್ಬೆ, ನಾನು ಮತ್ತು ಇನ್ನೂ ಅನೇಕರು ಪತ್ರಿಕೋದ್ಯಮದಲ್ಲಿ ಟಿಜೆಎಸ್ ಜಾರ್ಜ್ ಮಾರ್ಗದರ್ಶನ ಪಡೆದವರು.
ಟಿಜೆಎಸ್ ಜಾರ್ಜ್ ಅವರ ಪುತ್ರಿ ಶೀಬಾ ತಾಯಿಲ್ ಪತ್ರಕರ್ತರಾಗಿದ್ದರು. ಅವರ ಮಗ ಜೀತ್ ತಾಯಿಲ್ ಪ್ರಸಿದ್ಧ ಕಾದಂಬರಿಕಾರ.