ಸಾರಾಂಶ
-ಮೈಕ್ರೋಫೈನಾನ್ಸ್ ವ್ಯವಹಾರದಲ್ಲಿ ರಿಸ್ಕ್ ಜಾಸ್ತಿ । ಇಲ್ಲಿ ‘ನಂಬಿಕೆ ಮತ್ತು ವಿಶ್ವಾಸ’ವೇ ಸಾಲಕ್ಕೆ ಆಧಾರ । ಹೀಗಾಗಿ ಇಲ್ಲಿ ನಿಯಮಗಳು ಕಾಗದಕ್ಕಷ್ಟೇ ಸೀಮಿತ । ಸಾಲ ವಸೂಲಿಗೆ ರೌಡಿಗಳ ಬಳಕೆ ಸಲ್ಲ । ಇದರ ವಿರುದ್ಧ ಪೊಲೀಸರಿಗೆ ದೂರು ಕೊಡಲು ಅವಕಾಶ । ಲೇವಾದೇವಿದಾರರ ಸಂಘ ಅಧ್ಯಕ್ಷ ಜಯರಾಮ ಸೂಡ
-ಮೈಕ್ರೋಫೈನಾನ್ಸ್ ವ್ಯವಹಾರದಲ್ಲಿ ರಿಸ್ಕ್ ಜಾಸ್ತಿ । ಇಲ್ಲಿ ‘ನಂಬಿಕೆ ಮತ್ತು ವಿಶ್ವಾಸ’ವೇ ಸಾಲಕ್ಕೆ ಆಧಾರ । ಹೀಗಾಗಿ ಇಲ್ಲಿ ನಿಯಮಗಳು ಕಾಗದಕ್ಕಷ್ಟೇ ಸೀಮಿತ । ಸಾಲ ವಸೂಲಿಗೆ ರೌಡಿಗಳ ಬಳಕೆ ಸಲ್ಲ । ಇದರ ವಿರುದ್ಧ ಪೊಲೀಸರಿಗೆ ದೂರು ಕೊಡಲು ಅವಕಾಶ । ಲೇವಾದೇವಿದಾರರ ಸಂಘ ಅಧ್ಯಕ್ಷ ಜಯರಾಮ ಸೂಡ
- ಮಂಜುನಾಥ ನಾಗಲೀಕರ್
ಮೈಕ್ರೋ ಫೈನಾನ್ಸ್! ಇದು ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳಿಂದ ಸಾಲ ಪಡೆಯಲು ಆಗದೇ ಇರುವವರಿಗೆ ಸಣ್ಣ ಪುಟ್ಟ ಉದ್ಯಮ, ಸ್ವ ಉದ್ಯೋಗ ಸೇರಿ ವಿವಿಧ ಉದ್ದೇಶಗಳಿಗೆ ಸಾಲ ನೀಡುವ ಅತಿ ದೊಡ್ಡ ಉದ್ಯಮ. ರಾಜ್ಯದಲ್ಲಿ 78 ಮೈಕ್ರೋ ಫೈನಾನ್ಸ್ ಕಂಪನಿಗಳು ಒಂದು ಕೋಟಿಗೂ ಹೆಚ್ಚು ಜನರಿಗೆ 42,265 ಕೋಟಿ ರು.ಗೂ ಹೆಚ್ಚು ಸಾಲ ನೀಡಿವೆ ಎಂದರೆ ಇದರ ಗಾತ್ರ, ಮಹತ್ವ ಅರಿವಾಗಬಹುದು. ಆದರೆ, ಈ ಉದ್ಯಮಕ್ಕೆ ಮತ್ತೊಂದು ಮುಖವೂ ಇದೆ. ಆ ಕರಾಳ ಮುಖ ಇದೀಗ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಪ್ರಕಟವಾಗುತ್ತಿದೆ. ಈ ಕಂಪನಿಗಳ ದೌರ್ಜನ್ಯಕ್ಕೆ ಸಾಲ ಪಡೆದವರು ಕಂಗಾಲಾಗಿದ್ದು, ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ನೂರಾರು ಮಂದಿ ಈಗಾಗಲೇ ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದೆಲ್ಲ ಯಾಕೆ ಆಗುತ್ತಿದೆ? ಈ ಹಣಕಾಸು ಸಂಸ್ಥೆ ನಿಜ ಮುಖವೇನು? ಸಾಲ ನೀಡುವಲ್ಲಿ ನಿಯಮ ಪಾಲನೆ ಆಗುತ್ತಿಲ್ಲವೇ? ಬೇಕಾಬಿಟ್ಟಿ ಬಡ್ಡಿ, ಚಕ್ರಬಡ್ಡಿ ವಿಧಿಸಲಾಗುತ್ತಿದೆಯೇ? ಸಾಲ ವಸೂಲಿಗೆ ನಿಯಮಗಳ ಉಲ್ಲಂಘನೆ ಆಗುತ್ತಿದೆಯೇ? ಇವುಗಳನ್ನು ಹೇಗೆ ನಿಯಂತ್ರಿಸಬೇಕು. ಈ ದಿಸೆಯಲ್ಲಿ ಸಮಾಜ ಹಾಗೂ ಸರ್ಕಾರದ ಪಾತ್ರವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಬ್ಯಾಂಕಿಂಗ್, ಫೈನಾನ್ಸ್, ಮೈಕ್ರೋ ಫೈನಾನ್ಸ್ ಮತ್ತು ಲೇವಾದೇವಿ ಕ್ಷೇತ್ರದಲ್ಲಿ 38 ವರ್ಷಗಳ ಅನುಭವ ಹೊಂದಿರುವ ಕರ್ನಾಟಕ ಖಾಸಗಿ ಲೇವಾದೇವಿಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಜಯರಾಮ್ ಸೂಡ ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ.
-ದಶಕಗಳಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ವ್ಯವಹಾರ ನಡೆಯುತ್ತಿದೆ. ಈಗ ಇದ್ದಕ್ಕಿದಂತೆ ಈ ಸಂಸ್ಥೆಗಳ ವಿರುದ್ಧ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆಯಲ್ಲ ಏಕೆ?
ಸಾಲ ವ್ಯವಹಾರ ಎಂದರೆ ಸಮಸ್ಯೆ ಇದ್ದದ್ದೆ. ಮರುಪಾವತಿಯಲ್ಲಿ ಶೇ.10ರಿಂದ 20ರಷ್ಟು ಸಮಸ್ಯೆಗಳು ಇರುತ್ತವೆ. ಈ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗಿರಬಹುದು. ಸಮಸ್ಯೆಗಳು ಮೊದಲಿನಿಂದಲೂ ಇವೆ. ಮುಂದೆಯೂ ಇರುತ್ತವೆ. ಸಾಲ ಕೊಟ್ಟವರು ಮತ್ತು ಸಾಲ ಪಡೆದವರು ಜೀವ ತೊರೆದಿರುವ ಘಟನೆಗಳನ್ನು ನೋಡಿದ್ದೇವೆ. ಜನ ಯಾವ ಉದ್ದೇಶಕ್ಕೆ ಸಾಲ ಪಡೆದಿರುತ್ತಾರೋ ಆ ಉದ್ದೇಶ ಈಡೇರದೇ ಇರಬಹುದು. ಕೃಷಿ, ತೋಟಗಾರಿಕೆ, ಪಶುಪಾಲನೆ ಕೈಕೊಟ್ಟಿರಬಹುದು. ವ್ಯಾಪಾರ, ಉದ್ಯಮ ಕೈ ಹಿಡಿಯದಿರಬಹುದು. ಇದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದಿರುವುದು ಹಾಗೂ ಆರ್ಥಿಕ ಅಶಿಸ್ತುಗಳು ಸಮಸ್ಯೆಗಳಿಗೆ ಕಾರಣವಾಗಿರಬಹುದು. ಸಾಲ ಮರುಪಾವತಿಗೆ ಮುಂದಾದಾಗ ಈ ಸಮಸ್ಯೆ ಉದ್ಭವವಾಗಿದೆ.
-ಸಾಲ ಮರುಪಾವತಿ ವಿಳಂಬವಾದರೆ ಸ್ವತ್ತುಗಳ ಮುಟ್ಟುಗೋಲಿಗೆ ನಿಯಮಗಳಲ್ಲಿ ಅವಕಾಶವಿದೆಯೇ?
ಅಡಮಾನ ಸಾಲಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಆದರೆ, ಇದು ಆರ್‌ಬಿಐ ನಿಯಮಗಳ ಅನುಸಾರ, ನ್ಯಾಯಾಲಯದ ಆದೇಶಗಳ ಅನುಸಾರ ಆಗಬೇಕು. ಸಾಲ ಮರುಪಾವತಿ ಮಾಡಿಲ್ಲವೆಂದು ಫೈನಾನ್ಸರ್‌ಗಳು ಬೀಗ ಹಾಕಲು, ಜಪ್ತಿ ಮಾಡಲು ಅವಕಾಶವಿಲ್ಲ.
-ಸಾಲ ವಸೂಲಾತಿಗೆ ರೌಡಿಗಳು, ಗೂಂಡಾಗಳನ್ನು ಬಳಸಲಾಗುತ್ತದೆಯಂತೆ?
ಸಾಲ ವಸೂಲಿಗೆ ಬ್ಯಾಂಕಿಂಗ್, ಫೈನಾನ್ಸ್ ಕಂಪನಿಗಳಿಗೆ ತನ್ನದೇ ಆದ ವ್ಯವಸ್ಥೆ ಇರುತ್ತದೆ. ಗೂಂಡಾಗಳು, ರೌಡಿಗಳನ್ನು ಬಳಸಿಕೊಂಡು ಸಾಲ ವಸೂಲಿ ಮಾಡಲು ಯಾವುದೇ ಅಧಿಕಾರ ಇರುವುದಿಲ್ಲ. ಹಾಗೇ ಮಾಡಬಾರದು. ಕಿರುಕುಳ ನೀಡುವವರ ವಿರುದ್ಧ ಬಾಧಿತರು ಆರ್‌ಬಿಐ, ಪೊಲೀಸ್ ಠಾಣೆಗೆ ದೂರು ನೀಡಬೇಕು.
-ಸಾಲ ವಸೂಲಿಗೆ ಕಿರುಕುಳ, ಬೆದರಿಕೆ ಹಾಕುವುದು ಏಕೆ? ವಸೂಲಿಗೆ ನ್ಯಾಯ ಮಾರ್ಗವಿಲ್ಲವೇ?
ಸಾಲ ವಸೂಲಿಗೆ ಕಿರುಕುಳ ನೀಡುವುದು ತಪ್ಪು. ಹೀಗಾಗಿ, ಸಾಲ ನೀಡುವ ವೇಳೆ ಆಧಾರವಾಗಿಟ್ಟುಕೊಂಡ ಚೆಕ್, ಒಪ್ಪಂದ ಅಥವಾ ಸ್ವತ್ತಿನ ದಾಖಲೆಗಳ ಆಧಾರದ ಮೇಲೆ ಫೈನಾನ್ಸ್ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಬೇಕು. ವಕೀಲರಿಗೆ ಶುಲ್ಕ ಪಾವತಿಸಬೇಕು. ನ್ಯಾಯಾಲಯಗಳಲ್ಲಿ ಪ್ರಕರಣಗಳು ಇತ್ಯರ್ಥವಾಗಲು ಅನೇಕ ವರ್ಷ ತೆಗೆದುಕೊಳ್ಳುತ್ತವೆ. ಇಷ್ಟೆಲ್ಲ ಖರ್ಚು ಏಕೆ ಎಂದು ಸಾಲ ವಸೂಲಿಗೆ ವಾಮಮಾರ್ಗ ಅನುಸರಿಸಲಾಗುತ್ತದೆ. ಅದು ಸಂಪೂರ್ಣ ತಪ್ಪು. ಸಾಲ ಪಡೆದವರೂ ಸಾಲ ಮರುಪಾವತಿ ವಿಳಂಬವಾದರೂ ಮನವಿ ಮಾಡಿಕೊಂಡು ಬಡ್ಡಿ ಪಾವತಿಸಿಕೊಂಡು ಹೋದರೆ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ.
-ಸಾಲ ಕೊಡುವ ಕಂಪನಿಗಳು ಆರ್‌ಬಿಐ ನಿರ್ದೇಶನಗಳು, ನಿಯಮ ಪಾಲಿಸುವುದಿಲ್ಲ ಎನ್ನುವ ಆರೋಪಗಳು ಇವೆ?
ಸಾಲ ಕೊಡುವವರು ನಿಯಮಗಳನ್ನು ಪಾಲಿಸುವುದಿಲ್ಲ ಎನ್ನುವುದರಲ್ಲಿ ಸತ್ಯವಿದೆ. ಆದರೆ, ಸಾಲ ಕೊಡುವವರು ಜನರ ಮನೆಗೆ ಹೋಗಿ ಬಲವಂತವಾಗಿ ಸಾಲ ತೆಗೆದುಕೊಳ್ಳಿ ಎನ್ನುವುದಿಲ್ಲ. ಅವರೇ ಬಂದು ಸಾಲ ಪಡೆಯುತ್ತಾರೆ. ಸಾಮಾನ್ಯವಾಗಿ ಬಲವಾದ ಅಡಮಾನವನ್ನು ಇಟ್ಟುಕೊಳ್ಳುವುದಿಲ್ಲ. ಇಂಥ ವ್ಯವಹಾರದಲ್ಲಿ ಹೆಚ್ಚಿನ ರಿಸ್ಕ್ ಇರುವ ಕಾರಣ ಎರಡೂ ಕಡೆಯ ಒಪ್ಪಿಗೆ ಮೇಲೆ ವ್ಯವಹಾರ ನಡೆಯುತ್ತವೆ. ಹೀಗಾಗಿ, ನಿಯಮಗಳು ಕೇವಲ ಕಾಗದಕ್ಕೆ ಸೀಮಿತ. ಅವುಗಳನ್ನು ಸಾಲಗಾರರು ಮತ್ತು ಸಾಲ ಪಡೆಯುವವರು ಯೋಚಿಸುವುದಿಲ್ಲ. ಸಾಲ ವಸೂಲಿ ಸಂದರ್ಭದಲ್ಲಿ ನಿಯಮಗಳು ಪಾಲನೆಯಾಗುವುದಿಲ್ಲ ಎನ್ನುವುದು ತಕ್ಕಮಟ್ಟಿಗೆ ಸತ್ಯ.
-ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು ಇದ್ದರೂ ಜನ ಮೈಕ್ರೋ ಫೈನಾನ್ಸ್ ಅವಲಂಬನೆಗೆ ಕಾರಣವೇನು?
ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಕೊಡಲು ತಿಂಗಳುಗಟ್ಟಲೇ ಅಲೆದಾಡಿಸುತ್ತವೆ. ಹತ್ತಾರು ನಿಯಮಗಳು ಇರುತ್ತವೆ. ಅದರಲ್ಲೂ ಬಡವರು, ಸಣ್ಣ ವ್ಯಾಪಾರಿಗಳು, ಕೂಲಿಯವರಿಗೆ, ಆರ್ಥಿಕ ಹಿನ್ನೆಲೆ ಇಲ್ಲದವರಿಗೆ ಸಾಲ ಸಿಗುವುದು ಕನಸಿನ ಮಾತು. ಹೀಗಾಗಿ, ಇದ್ಯಾವುದನ್ನು ನೋಡದೆ ಸರಳವಾಗಿ ಮೈಕ್ರೋಫೈನಾನ್ಸ್ ಮತ್ತು ಲೇವಾದೇವಿಗಾರರು ಸಾಲ ಕೊಡುತ್ತಾರೆ. ಪ್ರತಿನಿತ್ಯ ಪಿಗ್ಮಿ ಮಾದರಿಯಲ್ಲಿ ಹಣ ಸಂಗ್ರಹಿಸಿ ಅದನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಾರೆ. ಇದರಿಂದ ಸಾಲ ಪಡೆದವರಿಗೆ ಹೊರೆಯಾಗುವುದಿಲ್ಲ.
-ಮೈಕ್ರೋಫೈನಾನ್ಸ್ ಕಂಪನಿಗಳು ಯಾವ ಉದ್ದೇಶಕ್ಕೆ ಸಾಲ ನೀಡುತ್ತವೆ?
ಮೈಕ್ರೋ ಫೈನಾನ್ಸ್ ಆಗಲಿ, ಖಾಸಗಿ ಲೇವಾದೇವಿಗಾರರಾಗಲಿ ಬಹುತೇಕ ಸಾಲವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು ಮತ್ತು ಪಟ್ಟಣ, ನಗರ ಪ್ರದೇಶಗಳಲ್ಲಿ ಸಣ್ಣ ವ್ಯಾಪಾರ ಉದ್ದೇಶ, ಉದ್ಯಮ ಚಟುವಟಿಕೆಗಳಿಗೆ ಸಾಲ ನೀಡುತ್ತಾರೆ. ಇಲ್ಲಿ 10 ಸಾವಿರ ರು.ಯಿಂದ 10 ಲಕ್ಷ ರು.ವರೆಗೂ ಸಾಲ ನೀಡಲಾಗುತ್ತದೆ. ಈ ಸಾಲಗಳಿಗೆ ಸಹಕಾರ ತತ್ವದಂತೆ ‘ನಂಬಿಕೆ ಮತ್ತು ವಿಶ್ವಾಸ’ವೇ ಆಧಾರ. ಹೆಚ್ಚೆಂದರೆ ಚೆಕ್, ಸ್ವತ್ತುಗಳ ದಾಖಲೆಗಳನ್ನು ಇರಿಸಲಾಗುತ್ತದೆ. ಅತ್ಯಂತ ನಂಬಿಕಸ್ಥರು ಮತ್ತು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ ಹಿನ್ನೆಲೆ ಇರುವವರಾದರೆ ಕೋಟಿ ರು.ವರೆಗೂ ಸಾಲ ನೀಡಿದ ಉದಾಹರಣೆ ಇವೆ.
-ಮೈಕ್ರೋಫೈನಾನ್ಸ್‌ಗಳಲ್ಲಿ ಬಡ್ಡಿದರ ಏನಿದೆ?
ಮೈಕ್ರೋ ಫೈನಾನ್ಸ್‌ಗಳು ಗರಿಷ್ಠ ವಾರ್ಷಿಕ ಶೇ.28ರ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಆದರೂ ಗರಿಷ್ಠ ವಾರ್ಷಿಕ ಬಡ್ಡಿದರ ಶೇ.24 ದಾಟಬಾರದು. ಮರುಪಾವತಿ ಮಾಡದೇ ಇದ್ದಾಗ ಅವರ ಇತಿಮಿತಿಗಳ ಒಳಗೆ ಬಡ್ಡಿಗೆ ಬಡ್ಡಿ ಸೇರಿಸುವ ಕಾರಣ ಬಡ್ಡಿ ದುಬಾರಿ ಎನಿಸುತ್ತದೆ. ಸಾಕಷ್ಟು ಬಾರಿ ವ್ಯವಹಾರಗಳು ನಿಯಮಗಳ ವ್ಯಾಪ್ತಿಯಿಂದ ಆಚೆ ಪರಸ್ಪರ ಒಪ್ಪಿಗೆ ಮೇಲೆ ನಡೆಯುತ್ತವೆ. ಜನರಿಗೆ ಎಷ್ಟು ಹಣ ಮತ್ತು ಎಷ್ಟು ಬೇಗ ಬೇಕು? ಹಾಗೂ ಮರುಪಾವತಿ ಅವಧಿ ಮೇಲೆ ಅದು ನಿರ್ಧಾರಿತವಾಗುತ್ತದೆ.
-ಸಾಲ ನೀಡುವಾಗ ಹಿನ್ನೆಲೆ ಪರಿಶೀಲನೆ ನಡೆಯುವುದೇ? ಏನನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ?
ಸಾಲ ಪಡೆಯುವವರ ಬಗ್ಗೆ ಮತ್ತೊಬ್ಬರಿಂದ ಶಿಫಾರಸ್ಸು, ಅವರ ಉದ್ದೇಶಗಳು ಹಾಗೂ ನಂಬಿಕೆಯೇ ಆಧಾರ. ಇದೇ ಆಧಾರದ ಮೇಲೆ ಕೊಟ್ಯಂತರ ರು. ವ್ಯವಹಾರ ನಡೆಯುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳಂತೆ ಇಲ್ಲಿ ಕಾಯಿಸುವುದಿಲ್ಲ. ಸಾಲದ ಹಣದಿಂದ ಅನೇಕರ ಜೀವನ ಸುಧಾರಣೆಯಾಗಿ, ಆರ್ಥಿಕತೆ ಉತ್ತಮವಾಗಿದೆ. ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಲೇವಾದೇವಿಗಾರರು ಲಕ್ಷಾಂತರ ಜನರ ಜೀವನವನ್ನೇ ಬದಲಿಸಿದ್ದಾರೆ.
-ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ದೂರು ನೀಡುವ, ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಇದೆಯೇ?
ಆರ್‌ಬಿಐ ಅನುಮತಿ ನೀಡುವ ಕಾರಣ ಮೈಕ್ರೋಫೈನಾನ್ಸ್‌ಗಳ ವಿರುದ್ಧ ಆರ್‌ಬಿಐನಲ್ಲೇ ದೂರು ನೀಡಬೇಕು. ಆರ್‌ಬಿಐನವರೇ ಫೈನಾನ್ಸ್ ಕಂಪನಿಗಳ ಮೇಲ್ವಿಚಾರಣೆ ಮಾಡಬೇಕು. ಕಂಪನಿಗಳ ವಿರುದ್ಧ ಆನ್‌ಲೈನ್, ಇ ಮೇಲ್ ಮತ್ತು ಖುದ್ದಾಗಿ ಕಚೇರಿಗೆ ತೆರಳಿ ದೂರು ನೀಡಲು ಅವಕಾಶವಿದೆ. ಆದರೆ, ಸಾಲ ಪಡೆದವರಿಗೆ ಅದರ ಬಗ್ಗೆ ಅರಿವು ಇರುವುದಿಲ್ಲ. ಸಾಲ ಮರುಪಾವತಿ ಮಾಡದ ಕಾರಣ ಅವರಿಗೂ ಸ್ವಲ್ಪ ಹಿಂಜರಿಕೆ ಇರುತ್ತದೆ. ಹೀಗಾಗಿ, ವ್ಯವಸ್ಥೆ ಇದ್ದೂ ಇಲ್ಲದಂತಾಗುತ್ತದೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಫಲಕಗಳು ಎಲ್ಲಿಯೂ ಕಾಣ ಸಿಗುವುವುದಿಲ್ಲ. ಅವರು ಆರ್‌ಬಿಐನಿಂದ ಅನುಮತಿ ಪಡೆದು ವಹಿವಾಟು ನಡೆಸುತ್ತಾರೆ. ರಾಜ್ಯ ಸರ್ಕಾರಗಳಿಗೂ ಅವರ ಮೇಲೆ ನಿಯಂತ್ರಣ ಇರುವುದಿಲ್ಲ.