ಕೃಷ್ಣ, ಭದ್ರಾ ಮೇಲ್ಡಂಡೆ, ಮೇಕೆದಾಟುಗೆ ಒಪ್ಪಿಗೆ ನೀಡಿ ಕರುಣೆ ತೋರಿಸಿ : ಸಿಎಂ ಸಿದ್ದರಾಮಯ್ಯ ಬೇಡಿಕೆ

| N/A | Published : Jan 30 2025, 11:43 AM IST

Siddaramaiah and DK Shivakumar

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತ ನ್ಯಾಯಾಧಿಕರಣದ ಅಂತಿಮ ಆದೇಶ ಹೊರಡಿಸಿ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವುದು ಹಾಗೂ ಮೇಕೆದಾಟು ಸಮಗ್ರ ಯೋಜನಾ ವರದಿ, ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ ಕೊಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದ್ದಾರೆ.

 ಬೆಂಗಳೂರು : ಕೇಂದ್ರ ಸರ್ಕಾರವು ಫೆ.1ರಂದು ಮಂಡನೆ ಮಾಡಲಿರುವ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ, ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತ ನ್ಯಾಯಾಧಿಕರಣದ ಅಂತಿಮ ಆದೇಶ ಹೊರಡಿಸಿ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವುದು ಹಾಗೂ ಮೇಕೆದಾಟು ಸಮಗ್ರ ಯೋಜನಾ ವರದಿ, ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ ಕೊಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸರ್ಕಾರದ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಡಿಕೆಗಳನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಕೇಂದ್ರಕ್ಕೆ ಮಂಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಡಿಕೆ ಪಟ್ಟಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳಿಗೆ ಇರುವ ಅಡ್ಡಿ ನಿವಾರಣೆ ಮಾಡುವಂತೆ ಕೋರಿದ್ದಾರೆ.

15ನೇ ಹಣಕಾಸು ಆಯೋಗದ ವರದಿ ಅನ್ವಯ ಬಾಕಿ ಇರುವ 5,495 ಕೋಟಿ ರು. ವಿಶೇಷ ಅನುದಾನ ಹಾಗೂ 6,000 ಕೋಟಿ ರು. ಅನುದಾನ ಸೇರಿ 11,495 ಕೋಟಿ ರು. ಅನುದಾನ ಕೂಡಲೇ ಬಿಡುಗಡೆ ಮಾಡಬೇಕು ಎಂದೂ ಹೇಳಿದ್ದಾರೆ.

ಪಿಎಂಎವೈ ಸಹಾಯ ಹೆಚ್ಚಳ ಮಾಡಿ: ಪ್ರಧಾನಮಂತ್ರಿ ಆವಾಸ್‌ ಯೋಜನೆ (ನಗರ) ಅಡಿ ಕೇವಲ 1.50 ಲಕ್ಷ ರು. ಹಾಗೂ ರಾಜ್ಯ ಸರ್ಕಾರ 1.80 ಲಕ್ಷ ರು, ಸೇರಿ 3.30 ಲಕ್ಷ ರು. ಮಾತ್ರ ನೀಡುತ್ತಿದ್ದು, ಮನೆ ನಿರ್ಮಾಣಕ್ಕೆ ಸಾಕಾಗುವುದಿಲ್ಲ. 1 ಬಿಎಚ್‌ಕೆ ಮನೆ ನಿರ್ಮಾಣಕ್ಕೆ ಕನಿಷ್ಠ 10 ಲಕ್ಷ ವೆಚ್ಚ ಆಗುತ್ತಿದೆ. ಹೀಗಾಗಿ ಕೇಂದ್ರದ ಪಾಲನ್ನು 5 ಲಕ್ಷ ರು.ಗೆ ಹೆಚ್ಚಳ ಮಾಡಬೇಕು.

ರೀತಿ ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 72 ಸಾವಿರ ರು. ಹಾಗೂ ರಾಜ್ಯ ಸರ್ಕಾರದಿಂದ 42 ಸಾವಿರ ರು. ನೀಡುತ್ತಿದ್ದು, ಕೇಂದ್ರದ ಪಾಲನ್ನು 3 ಲಕ್ಷ ರು. ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಇನ್ನು ಆಯುಷ್ಮಾನ್‌ ಭಾರತ್‌ ಯೋಜನೆ ಹಾಗೂ ಪಿಂಚಣಿ ಯೋಜನೆಯಲ್ಲಿ ರಾಜ್ಯದ ಫಲಾನುಭವಿಗಳಿಗೂ ಕೇಂದ್ರ ಅಂಕಿ-ಅಂಶಗಳಿಗೂ ತಾಳೆ ಆಗುತ್ತಿಲ್ಲ. ರಾಜ್ಯದಲ್ಲಿರುವ ಫಲಾನುಭವಿಗಳ ಶೇ.60 ರಷ್ಟು ಮಂದಿಗೆ ಮಾತ್ರ ಕೇಂದ್ರ ನೆರವು ನೀಡುತ್ತಿದೆ. ಇದನ್ನು ಪುನರ್‌ ಪರಿಶೀಲಿಸಿ ಎಲ್ಲರಿಗೂ ನೆರವು ನೀಡಬೇಕು.

ಇನ್ನು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರ ಗೌರವ ಧನ ಹೆಚ್ಚಳ ಮಾಡಬೇಕು. ಇದಕ್ಕಾಗಿ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪಾಲು 2,700 ರು. ಗಳಿಂದ 5,000 ರು.ಗಳಿಗೆ ಏರಿಕಸಬೇಕು, ಅಂಗನವಾಡಿ ಕಾರ್ಯಕರ್ತರಿಗೆ 600 ರು. ಬದಲಿಗೆ 3,100 ರು.ಗೆ ಹೆಚ್ಚಿಸಬೇಕು, ವೃತ್ತಿಪರ ತೆರಿಗೆಯನ್ನು 2,500 ರು. ಗಳಿಂದ 6,000 ರು.ಗೆ ಹೆಚ್ಚಳ ಮಾಡಬೇಕು. ಎಸ್ಕಾಂಗಳಿಗೆ ಸಾಲ ಬಾಧೆಯಿಂದ ಪಾರಾಗಲು ಬಡ್ಡಿ ರಹಿತ ಸಾಲ ನೀಡಬೇಕು ಎಂದೂ ಹೇಳಿದ್ದಾರೆ.

ಪಶ್ಚಿಮ ಘಟ್ಟಗಳಿಗೆ 10 ಸಾವಿರ ಕೋಟಿ ರು.: ಪಶ್ಚಿಮ ಘಟ್ಟಗಳ ಭಾಗದ ಅಭಿವೃದ್ಧಿಗೆ ಮುಂದಿನ 5 ವರ್ಷಗಳಿಗೆ 10,000 ಕೋಟಿ ರು. ಅನುದಾನ, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ವಿಶೇಷ ಉತ್ತೇಜನ ನೀಡಬೇಕು. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳಲ್ಲಿ ಪ್ರಸ್ತುತ ಶೇ.100 ರಷ್ಟು ಭೂ ಸ್ವಾಧೀನ ವೆಚ್ಚ ಹಾಗೂ ಶೇ.50 ರಷ್ಟು ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಇದನ್ನು ಶೇ.50 ರಷ್ಟು ಭೂಸ್ವಾಧೀನ ವೆಚ್ಚ ಹಾಗೂ ಶೇ.100 ರಷ್ಟು ನಿರ್ಮಾಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಎಂದು ಮನವಿ ಮಾಡಿದ್ದಾರೆ.