ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಮುಂದೆ ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ನಿಗೂಢವಾಗಿ ಅಜ್ಞಾತವಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಗುರುವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ

ಬೆಂಗಳೂರು : ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಮುಂದೆ ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ನಿಗೂಢವಾಗಿ ಅಜ್ಞಾತವಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಗುರುವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ನೋಟಿಸ್ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳಿಗೆ ಅಜ್ಞಾತ ಸ್ಥಳದಿಂದಲೇ ಕರೆ ಮಾಡಿ ತಾವು ಬೆಳಗ್ಗೆ 11ಕ್ಕೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವುದಾಗಿ ಪ್ರತ್ಯೇಕವಾಗಿ ಇಬ್ಬರೂ ಹೇಳಿದ್ದಾರೆ. ಅಲ್ಲದೆ ತಮ್ಮ ಸಂಪರ್ಕಕ್ಕೆ ಶಿವಶಂಕರಪ್ಪ ಹಾಗೂ ಜ್ಞಾನೇಂದ್ರ ಬಂದಿರುವುದನ್ನು ಸಿಐಡಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿವೆ.

‘ನಾವು ತನಿಖೆಗೆ ಮುಕ್ತವಾಗಿ ಸ್ಪಂದಿಸುತ್ತೇವೆ. ಕಾನೂನು ಪ್ರಕಾರವೇ ನೇಮಕಾತಿ ನಡೆದಿದ್ದು, ನಾವು ಯಾವುದೇ ತಪ್ಪು ಮಾಡಿಲ್ಲ. ವೈಯಕ್ತಿಕ ಕಾರಣ ನಿಮಿತ್ತ ನಾನು ಊರಿಗೆ ಹೋಗಿದ್ದೆ. ಹಾಗಾಗಿ ಮನೆಯಲ್ಲಿ ಇಲ್ಲದ ಕಾರಣ ನೋಟಿಸ್ ಸ್ವೀಕರಿಸಲು ಸಾಧ್ಯವಾಗಿಲ್ಲ. ಆದರೆ ವಾಟ್ಸಪ್ ಮೂಲಕ ಕಳುಹಿಸಿದ್ದ ನೋಟಿಸ್ ಬಂದಿದ್ದು, ಅದರನ್ವಯ ಬೆಳಗ್ಗೆ ವಿಚಾರಣೆಗೆ ಬರುವುದಾಗಿ ಜ್ಞಾನೇಂದ್ರ ಹೇಳಿದ್ದಾರೆ. ಅದೇ ರೀತಿ ಶಿವಶಂಕರಪ್ಪ ಸಹ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ. ನಾವು ಅವರ ಮಾತು ನಂಬಿದ್ದೇವೆ. ವಿಚಾರಣೆಗೆ ಇಬ್ಬರೂ ಹಾಜರಾಗುವ ನಿರೀಕ್ಷೆ ಇದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಆರೋಪ ಬಳಿಕ ಐಎಎಸ್ ಅಧಿಕಾರಿ ಜ್ಞಾನೇಂದ್ರ ಹಾಗೂ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಜ್ಞಾತವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಮಧ್ಯೆ ಆ ಇಬ್ಬರಿಗೂ ಸಿಐಡಿ ವಿಚಾರಣೆಗೆ ಕರೆದಿರುವುದು ಕುತೂಹಲ ಮೂಡಿಸಿದೆ.

ಬ್ಯಾಕ್ಅಫ್ ಇಲ್ಲದ ಸಿಸಿಟಿವಿ ದೃಶ್ಯ ಅಳಿದಿದೆ

ಕೆಪಿಎಸ್‌ಸಿಯ ಸ್ಟ್ರಾಂಗ್ ರೂಮ್ ಸೇರಿ ಇತರೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಹಳೇ ‘ದತ್ತಾಂಶ’ ಅಳಿಸಿ ಹೋಗಿರುವುದು ಸಿಐಡಿ ಅಧಿಕಾರಿಗಳಿಗೆ ತಲೆನೋವು ತಂದಿದೆ ಎಂದು ತಿಳಿದು ಬಂದಿದೆ.

ಕೆಪಿಎಸ್‌ಸಿ ಕಚೇರಿ ಮೇಲೆ ದಾಳಿ ವೇಳೆ ಸ್ಟ್ರಾಂಗ್ ರೂಮ್ ಸೇರಿ ಇತರೆಡೆ ಅಳವಡಿಸಲಾಗಿದ್ದ ಸಿಸಿಟಿವಿಗಳನ್ನು ಜಪ್ತಿ ಮಾಡಲಾಗಿತ್ತು. ಆದರೆ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ನಡೆದು ಆರು ತಿಂಗಳು ಕಳೆದಿವೆ. ಇನ್ನು ಆ ಕ್ಯಾಮೆರಾಗಳ ದತ್ತಾಂಶ ಸಂಗ್ರಹ ಸಾಮರ್ಥ್ಯ ಮೂರು ತಿಂಗಳು ಮಾತ್ರ ಇದೆ. ಹೀಗಾಗಿ ಆರು ತಿಂಗಳ ಹಿಂದೆ ಸ್ಟ್ರಾಂಗ್ ರೂಮ್‌ನಲ್ಲಿ ಅಕ್ರಮ ನಡೆದಿರುವುದಕ್ಕೆ ಸಿಸಿಟಿವಿಯಲ್ಲಿ ಪುರಾವೆ ಸಿಗುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಕೆಪಿಎಸ್ಸಿ ಸ್ಟ್ರಾಂಗ್‌ ರೂಂ ಸಿಸಿಟೀವಿಯಲ್ಲಿ ಹಳೆ ದೃಶ್ಯಗಳೇ ಡಿಲೀಟ್‌!

ಬೆಂಗಳೂರು: ಕೆಪಿಎಸ್‌ಸಿಯ ಸ್ಟ್ರಾಂಗ್ ರೂಮ್ ಸೇರಿ ಇತರೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಹಳೇ ‘ದತ್ತಾಂಶ’ ಅಳಿಸಿ ಹೋಗಿರುವುದು ಸಿಐಡಿ ಅಧಿಕಾರಿಗಳಿಗೆ ತಲೆನೋವು ತಂದಿದೆ ಎಂದು ತಿಳಿದು ಬಂದಿದೆ. ಕ್ಯಾಮೆರಾಗಳ ದತ್ತಾಂಶ ಸಂಗ್ರಹ ಸಾಮರ್ಥ್ಯ ಮೂರು ತಿಂಗಳು ಮಾತ್ರ ಇದೆ. ಹೀಗಾಗಿ ಆರು ತಿಂಗಳ ಹಿಂದೆ ಸ್ಟ್ರಾಂಗ್ ರೂಮ್‌ನಲ್ಲಿ ಅಕ್ರಮ ನಡೆದಿರುವುದಕ್ಕೆ ಸಿಸಿಟಿವಿಯಲ್ಲಿ ಪುರಾವೆ ಸಿಗುತ್ತಿಲ್ಲ ಎಂದು ಮೂಲಗಳು ಹೇಳಿವೆ.