ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ವಿಧಿವಶ, ಹೃದಯಸ್ತಂಭನದಿಂದ ನಿಧನ : ಇಂದು ಅಂತ್ಯಕ್ರಿಯೆ

| N/A | Published : Apr 15 2025, 07:13 AM IST

 shamasundar

ಸಾರಾಂಶ

ಹಿರಿಯ ಪತ್ರಕರ್ತ ಎಸ್.ಕೆ.ಶ್ಯಾಮಸುಂದರ್ ಸೋಮವಾರ ರಾತ್ರಿ 9.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಅವರು ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಬೆಂಗಳೂರು : ಹಿರಿಯ ಪತ್ರಕರ್ತ ಎಸ್.ಕೆ.ಶ್ಯಾಮಸುಂದರ್ ಸೋಮವಾರ ರಾತ್ರಿ 9.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಅವರು ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಕನ್ನಡಪ್ರಭ ಪುರವಣಿ ಸಂಪಾದಕರಾಗಿ, ಏಷಿಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ವಿಭಾಗದ ಮುಖ್ಯಸ್ಥರಾಗಿ ಶ್ಯಾಮಸುಂದರ್ ಹಲವಾರು ವರ್ಷ ಕೆಲಸ ಮಾಡಿದ್ದರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ವೃತ್ತಿ ಜೀವನ ಆರಂಭಿಸಿದ ಶ್ಯಾಮಸುಂದರ್ ಕಸ್ತೂರಿ ಮಾಸಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಸಿನಿಮಾ ವರದಿಗಾರರಾಗಿ ಕೂಡ ಶ್ಯಾಮ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಭಾಷೆಗಳನ್ನು ಲೀಲಾಜಾಲವಾಗಿ ಮಾತಾಡುತ್ತಿದ್ದ ಶ್ಯಾಮ್ ಸುಂದರ್ ಹಲವು ಹೊಸತನಗಳ ಹರಿಕಾರರೂ ಆಗಿದ್ದರು. ಕೆಲಕಾಲ ಏಷಿಯನ್ ಪತ್ರಿಕೋದ್ಯಮ ಕಾಲೇಜಿಗೆ ಅತಿಥಿ ಪ್ರಾಧ್ಯಾಪಕರೂ ಆಗಿದ್ದರು. ಅವರ ಗರಡಿಯಿಂದ ಅನೇಕ ಪತ್ರಕರ್ತರು ಹೊರಬಂದಿದ್ದಾರೆ.

ಕನ್ನಡಪ್ರಭದಲ್ಲಿ ಹದಿನೇಳು ವರ್ಷಗಳ ಸೇವೆ ಸಲ್ಲಿಸಿದ ನಂತರ ಡಿಜಿಟಲ್ ಮಾಧ್ಯಮಕ್ಕೆ ಹೊರಳಿದ ಶ್ಯಾಮಸುಂದರ್ ಅನೇಕ ವೆಬ್ ಪೋರ್ಟಲ್‌ಗಳ ಸಂಪಾದಕರಾಗಿ ಕೆಲಸ ಮಾಡಿದ್ದರು. ಟೆಲಿವಿಷನ್ ಮಾಧ್ಯಮದಲ್ಲೂ ಸೇವೆ ಸಲ್ಲಿಸಿದ್ದರು. ಆಕರ್ಷಕ ಬರವಣಿಗೆ ಮತ್ತು ಮಾತುಗಾರಿಕೆಯಿಂದ ಹೆಸರಾಗಿದ್ದ ಶ್ಯಾಮ್ ಕ್ರೀಡೆ, ರಾಜಕಾರಣ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮೇಲೆ ಪ್ರಭುತ್ವ ಹೊಂದಿದ್ದರು. ಚುನಾವಣೆ ಮತ್ತು ಕ್ರಿಕೆಟ್ ಫಲಿತಾಂಶಗಳ ವಿಶ್ಲೇಷಕರಾಗಿಯೂ ಕೆಲಸ ಮಾಡಿದ್ದರು.

ಮೂಲತಃ ಚಿತ್ರದುರ್ಗದವರಾದ ಶ್ಯಾಮ್ ಸುಂದರ್ ಅವಿವಾಹಿತರಾಗಿಯೇ ಉಳಿದವರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಏಪ್ರಿಲ್ 3ರಂದು ರಕ್ತದೊತ್ತಡ ಹೆಚ್ಚಾಗಿ ಮೆದುಳಿನ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ಯಾಮಸುಂದರ್, ಕೊನೆಯುಸಿರೆಳೆಯುವ ತನಕವೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

ಶ್ಯಾಮ್ ಅಂತ್ಯಕ್ರಿಯೆಯನ್ನು ಮಂಗಳವಾರ ಅವರ ಸಹೋದರ ಮತ್ತು ಸಹೋದರಿ ನೆರವೇರಿಸಲಿದ್ದಾರೆ.