ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಪೊಲೀಸರಿಗೆ ಸೋಮವಾರ ಮತ್ತೊಂದು ದೂರು ನೀಡಿದ್ದಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಪೊಲೀಸರಿಗೆ ಸೋಮವಾರ ಮತ್ತೊಂದು ದೂರು ನೀಡಿದ್ದಾರೆ.
ಮುಡಾ ಹಗರಣ ಸಂಬಂಧ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಸ್ನೇಹಮಯಿ ಕೃಷ್ಣ ಅವರು ಈ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಏನಿದೆ?:
ಮೈಸೂರು ತಾಲೂಕು ಆಲನಹಳ್ಳಿ ಗ್ರಾಮದ ಸರ್ವೇ ನಂ.113/4ರಲ್ಲಿ 1 ಎಕರೆ ಭೂಮಿಯನ್ನು ಸಿದ್ದರಾಮಯ್ಯ ಅವರ ಬಾಮೈದ ಬಿ.ಎಂ. ಮಲ್ಲಿಕಾರ್ಜುನಸ್ವಾಮಿ ಅವರು 1983ರಲ್ಲಿ ಖರೀದಿಸಿದ್ದರು. 1996ರಲ್ಲಿ ಇದೇ ಜಮೀನನ್ನು ಮುಡಾ ಭೂಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದರೆ, 2006ರಲ್ಲಿ ಈ ಜಮೀನಿಗೆ ಮಲ್ಲಿಕಾರ್ಜುನಸ್ವಾಮಿ ಹೆಸರಿನಲ್ಲಿ ಅನ್ಯಕ್ರಾಂತ ಆದೇಶ ಹೊರಡಿಸಲಾಗಿದೆ.
ಅದೇ ಭೂಮಿಯನ್ನು ಅವರು 2010ರ ಅ.20 ರಂದು ಸಹೋದರಿ, ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ದಾನಪತ್ರವಾಗಿ ನೋಂದಣಿ ಮಾಡಿದ್ದಾರೆ. 2010ರಲ್ಲಿ ಪಾರ್ವತಿ ಅವರು ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ದಾನವಾಗಿ ಇದನ್ನು ಕೊಟ್ಟಿದ್ದಾರೆ. 2011ರಲ್ಲಿ ಡಾ.ಯತೀಂದ್ರ ಬೇರೊಬ್ಬರಿಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ.
1996ರಲ್ಲೇ ಅಂತಿಮ ಅಧಿಸೂಚನೆ ಹೊರಡಿಸಿದ್ದರೂ ಯಾವ ಕಾರಣದಿಂದ ಈ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲಾಯಿತು. ಇದಕ್ಕೆ ಪ್ರಭಾವ ಬೀರಿದ್ದು ಯಾರು? ಕೆಸರೆ ಗ್ರಾಮದ ಜಮೀನಿನ ದಾನ ಪತ್ರದ ಕುರಿತು ಹೇಳುವಾಗ ಈ ವಿಚಾರವನ್ನು ಮುಚ್ಚಿಟ್ಟಿದ್ದು ಏಕೆ? ಮಲ್ಲಿಕಾರ್ಜುನಸ್ವಾಮಿ ಅವರು ಈವರೆಗೆ ಈ ರೀತಿ ಎಷ್ಟು ಜಮೀನನ್ನು ಖರೀದಿಸಿ, ಪಾರ್ವತಿ ಅವರ ಹೆಸರಿಗೆ ವರ್ಗಾಯಿಸಿದ್ದಾರೆ ಎಂಬ ಅಂಶಗಳ ಕುರಿತು ತನಿಖೆ ನಡೆಸಬೇಕು ಎಂದು ಸ್ನೇಹಮಯಿ ಕೃಷ್ಣ ದೂರಿದ್ದಾರೆ.
ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನಸ್ವಾಮಿ ಹೆಸರಿನಲ್ಲಿ ಬೇನಾಮಿ ಆಸ್ತಿ ಸಂಪಾದನೆ ಮಾಡಿರುವ ಅನುಮಾನ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಅಧಿಕಾರಿಗಳು ವಿಳಂಬ ನೀತಿ ತೋರಿಸಿದರೆ ಕಾನೂನು ಹೋರಾಟ ಮುಂದುವರಿಸುವುದಾಗಿ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.