ಸಾರಾಂಶ
ಸಿಎಂ ಸಿದ್ದರಾಮಯ್ಯಗೆ ಯಾಕೆ ಇಂತಹ ದುರ್ಬುದ್ಧಿ ಬಂದಿದೆಯೋ ಗೊತ್ತಿಲ್ಲ. ಕಾಂಗ್ರೆಸ್‌ನವರು ರಾಜ್ಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಜನರೇ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಶಿವಮೊಗ್ಗ : ಸಿಎಂ ಸಿದ್ದರಾಮಯ್ಯಗೆ ಯಾಕೆ ಇಂತಹ ದುರ್ಬುದ್ಧಿ ಬಂದಿದೆಯೋ ಗೊತ್ತಿಲ್ಲ. ಕಾಂಗ್ರೆಸ್‌ನವರು ರಾಜ್ಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಜನರೇ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡುವ ಅಧಿಕಾರ ಇಲ್ಲ. ಆದರೂ ಜಾತಿ ಗಣತಿಗೆ ಮುಂದಾಗಿದೆ. ಪ್ರಜಾಪ್ರಭುತ್ವ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ಗೌರವಿಸುವುದಾಗಿ ಹೇಳಿ ಮಣ್ಣು ತಿನ್ನೋ ಕೆಲಸಕ್ಕೆ ಕೈ ಹಾಕಿದ್ದಾರೆ. ಇವರೆಂತಹ ದುಷ್ಟರು ಎಂದರೆ 47 ಹೊಸ ಜಾತಿಗಳನ್ನು ಹುಟ್ಟುಹಾಕಲು ಹೊರಟಿದ್ದರು. ಸಿದ್ದರಾಮಯ್ಯ ಸರ್ಕಾರಕ್ಕೆ ಯಾರು ಈ ಅಧಿಕಾರ ಕೊಟ್ಟಿದ್ದಾರೆ. ಇಂತಹ ನೀಚ ಸರ್ಕಾರಕ್ಕೆ ಬುದ್ಧಿ ಕಲಿಸಲು ರಾಜ್ಯ ಜನ ಬೀದಿಗೀಳಿದು ಹೋರಾಟ ಮಾಡಬೇಕಿದೆ ಎಂದರು.
ಬ್ರಿಟಿಷ್ ಆಳ್ವಿಕೆ, ಟಿಪ್ಪು ಆಳ್ವಿಕೆ, ನಿಜಾಮರ ಆಳ್ವಿಕೆ ನಾಚಿಸುವಂತೆ ಸಿದ್ದರಾಮಯ್ಯ ಆಳ್ವಿಕೆ ನಡೆಸುತ್ತಿದ್ದಾರೆ. ಸರ್ಕಾರ ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದೆ. ಧರ್ಮಸ್ಥಳದ ವಿಚಾರದಲ್ಲಿ ಮಂಜುನಾಥ ದೇವರ ಕೋಟ್ಯಾಂತರ ಭಕ್ತರ ಭಕ್ತಿ ಮತ್ತು ಶ್ರದ್ಧೆಗೆ ಕೊಡಲಿ ಪೆಟ್ಟು ಕೊಡುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿತು. ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಷಯದಲ್ಲೂ ಗೊಂದಲವನ್ನು ಸೃಷ್ಟಿ ಮಾಡುವ ಕೆಲಸ ಮಾಡಿದರು. ಹಿಂದುಗಳಿಗೆ ಅವಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಗಣಪತಿ ಹಬ್ಬಕ್ಕೂ ಕೂಡ ಕಡಿವಾಣ ಹಾಕಿ ಕಾನೂನುಗಳನ್ನು ಸೃಷ್ಟಿ ಮಾಡಿ ವಿಸರ್ಜನ ಮೆರವಣಿಗೆ ಮಾಡುವುದಕ್ಕೂ ಕಲ್ಲು ಹಾಕುತ್ತಿದೆ. ಇದನ್ನು ದುರ್ಬುದ್ಧಿ ಎನ್ನದೆ ಬೇರೆ ಏನು ಹೇಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಗಣತಿಗೆ ಅಧಿಕೃತ
ಮಾನ್ಯತೆಯಿಲ್ಲ: ಜೋಶಿ ಕಿಡಿ
ಹುಬ್ಬಳ್ಳಿ : ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ-ಜನಗಣತಿ ಸಮೀಕ್ಷೆಗೆ ಯಾವುದೇ ಅಧಿಕೃತ ಮಾನ್ಯತೆಯಿಲ್ಲ, ಅರ್ಥವೂ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ. ಆ ಅಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ. ರಾಜ್ಯ ಸರ್ಕಾರ ನಡೆಸುತ್ತಿರುವುದು ಸಮೀಕ್ಷೆಯಷ್ಟೇ. ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಸಮಾಜ ದ್ರೋಹಿಗಳಿಗೆ, ಸಮಾಜದಲ್ಲಿ ಸೌಹಾರ್ದತೆ ಕೆಡಿಸುವವರಿಗೆ, ಮತೀಯ ಭಾವನೆ ಕೆರಳಿಸುವವರಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ಮತ್ತು ಕುಮ್ಮಕ್ಕು ನೀಡುತ್ತಿದೆ. ಈಗ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲೂ ಇದರ ಪರಿಣಾಮ ಕಾಣುತ್ತಿದೆ ಎಂದು ತೀವ್ರವಾಗಿ ಖಂಡಿಸಿದರು.
ಸಮೀಕ್ಷೆಗೆ ಯಾವ ಆಧಾರ?:
ರಾಜ್ಯದ ಕಾಂಗ್ರೆಸ್ ಸರ್ಕಾರ ಅದ್ಯಾವ ಆಧಾರದ ಮೇಲೆ ಜಾತಿ ಸಮೀಕ್ಷೆ ಮಾಡುತ್ತಿದೆ?. ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂದು ಯಾವ ಆಧಾರದ ಮೇಲೆ ಮಾಡಲು ಹೊರಟಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬ ಅಲ್ಟ್ರಾ ಲೆಫ್ಟಿಸ್ಟ್ ಎಂದು ಕಿಡಿಕಾರಿದರು.
ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಜಾತಿ ಸಮೀಕ್ಷೆ ಮಾಡಿದರೆ ಒಕ್ಕಲಿಗ ಸಮಾಜದಲ್ಲಿ ತಮ್ಮ ನಾಯಕತ್ವ ಹೋಗಲಿದೆ ಎಂಬ ಸತ್ಯ ಡಿಕೆಶಿ ಅರಿವಿಗೆ ಬಂದಿದೆ. ಹಾಗಾಗಿ ಅವರೂ ಸೇರಿದಂತೆ ಕಾಂಗ್ರೆಸ್‌ನ ಸಚಿವರೇ ಇದರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ ಎಂದು ಜೋಶಿ ಪ್ರತಿಕ್ರಿಯಿಸಿದರು.
ಹಿಂದೂ ಸಮಾಜ ಒಡೆಯುವ ಷಡ್ಯಂತ್ರ:
ನಕಲಿ ಗಾಂಧಿಗಳ ಆಣತಿಯಂತೆ ಸಿದ್ದರಾಮಯ್ಯನವರು ಹಿಂದೂ ಸಮಾಜ ಒಡೆಯುವ ಷಡ್ಯಂತ್ರ ನಡೆಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರೇರಣೆ, ಸೂಚನೆಯಂತೆ ನುಸುಳುಕೋರರಿಗೆ ‘ಓಟಿಂಗ್ ಹಕ್ಕುʼ ಕೊಟ್ಟು ದೇಶವನ್ನು ಅಶಕ್ತಗೊಳಿಸುವ ಷಡ್ಯಂತ್ರದ ಭಾಗ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತಾಂತರಿಗಳಿಗೆ ಮೀಸಲಾತಿ?:
ಮತಾಂತರ ಆದವರಿಗೆ ಮೀಸಲಾತಿಯಿಲ್ಲ ಎಂದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಇವರು ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂದು ನಮೂದಿಸಿ ಮೀಸಲಾತಿ ಕೊಡುವ ಹುನ್ನಾರ ನಡೆಸಿದಂತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಧರ್ಮಸ್ಥಳಕ್ಕೆ ಬುಲ್ಡೋಜರ್:
ಧರ್ಮಸ್ಥಳಕ್ಕೆ ಬುಲ್ಡೋಜರ್ ಹಚ್ಚಬೇಕು ಎಂದವರನ್ನು ಬಿಟ್ಟು ‘ಮಸೀದಿಗೆ ಬುಲ್ಡೋಜರ್ ಹಚ್ಚಬೇಕುʼ ಎಂದವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಿ. ಒಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮತಾಂಧರ ಪರವಿರುವ ಕೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್‌ಗೆ ಕಾಮನ್‌ಸೆನ್ಸ್ ಇಲ್ಲ:
ದೇಶದ ಜನರು ತಮಗೆ ಮತ ಹಾಕಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ಬದ್ಧ ಸಂಸ್ಥೆಗಳ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ. ಮತಗಳ್ಳತನ ಮಾಡಲಾಗಿದೆ ಎಂದು ಹೇಳುವ ರಾಹುಲ್ ಗಾಂಧಿಗೆ ಸಾಮಾನ್ಯಜ್ಞಾನ (ಕಾಮನ್‌ಸೆನ್ಸ್) ಇಲ್ಲ ಎಂದು ಜೋಶಿ ಕುಟುಕಿದರು.
ಈಗಾಗಲೇ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ಸ್ಪಷ್ಟೀಕರಣ ನೀಡಿದೆ. ಈಗ ಕಾಂಗ್ರೆಸ್ ಎಸ್‌ಐಟಿ ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಿಲ್ಲ. ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಬಳಸಲು ಸಾಧ್ಯವಿಲ್ಲ. ದೇಶವು ಡಿಜಿಟಲ್ ತಂತ್ರಜ್ಞಾನದಲ್ಲಿ ಮುಂದು ಸಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.
ಸರ್ಕಾರದ ಸಮೀಕ್ಷೆಯಲ್ಲಿ ತಲೆನೂ ಇಲ್ಲ, ಬುಡನೂ ಇಲ್ಲ: ಸೋಮಣ್ಣ
ಉಡುಪಿ: ಜಾತಿ ಗಣತಿ ಹೆಸರಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರ ನಂಬಿಕೆ, ವಿಶ್ವಾಸಗಳ ಹಳಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಜಾತಿ ಗಣತಿಗೆ ತಲೆನೂ ಇಲ್ಲ, ಬುಡನೂ ಇಲ್ಲ. ಕಾಯ್ದೆಯಲ್ಲಿ ಅವಕಾಶನೇ ಇಲ್ಲ, ಆದರೂ ಅದೇನೋ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಂತ ಮಾಡಬಾರದನ್ನು ಮಾಡ್ತಿದ್ದಾರೆ, ಇದೊಂದು ಹಿಟ್ ಆ್ಯಂಡ್ ರನ್ ಸರ್ಕಾರ ಎಂದು ಆರೋಪಿಸಿದರು. ಕೇಂದ್ರ ಸರ್ಕಾರವೇ ದೇಶಾದ್ಯಂತ ಜನ ಗಣತಿ ಮಾಡುತ್ತಿದೆ. ಅಷ್ಟರಲ್ಲಿ ಸಿದ್ದರಾಮಯ್ಯ ಅವರು ಕೂಡ ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇಂತಹ ಸಣ್ಣತನಗಳನ್ನು ಬಿಟ್ಟಿದ್ದರೆ ಹೀರೋ ಆಗುತ್ತಿದ್ದರು ಎಂದರು.
ಸಿದ್ದರಾಮಯ್ಯ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹಳ್ಳಿಗಾಡಿನ ಜನರು ಪರಸ್ಪರ ಜಗಳವಾಡುವಂತೆ ಮಾಡುತ್ತಿದ್ದಾರೆ.