ಸಾರಾಂಶ
ಕೆಂಪೇಗೌಡ ಬಡಾವಣೆಯ ಬಿಡಿಎ ಜಾಗದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು : ಬೆಂಗಳೂರಿನ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರ ಇರಬೇಕು ಎಂಬ ಕಾರಣದ ಹಿನ್ನೆಲೆಯಲ್ಲಿ ಕೆಂಪೇಗೌಡ ಬಡಾವಣೆಯ ಬಿಡಿಎ ಜಾಗದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಕೈಡೆಕ್ ಅನ್ನು ಹೆಮ್ಮಿಗೆಪುರದಲ್ಲಿ ನಿರ್ಮಿಸಲು ತೀರ್ಮಾನಿಸಿದ್ದೆವು. ಆದರೆ ವಿಮಾನ ನಿಲ್ದಾಣದಿಂದ 20 ಕಿ.ಮೀ ದೂರ ಇರಬೇಕು ಎಂಬ ಕಾರಣದಿಂದ ಅಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಇದನ್ನು ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ಜಾಗದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಹಲವು ಸ್ಥಳ ಬದಲಾವಣೆ:
ಬೆಂಗಳೂರಿನ ಸೌಂದರ್ಯವನ್ನು ಆಗಸದೆತ್ತರದ ವೀಕ್ಷಣಾ ಗೋಪುರದಿಂದ ಜನರು ವೀಕ್ಷಿಸಲು ಹಾಗೂ ನಗರಕ್ಕೆ ಒಂದು ಹೆಗ್ಗುರುತನ್ನು ನಿರ್ಮಿಸಲು ರಾಜ್ಯ ಸರ್ಕಾರ ಸುಮಾರು 250 ಮೀ. ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಿತ್ತು. ಈ ಹಿಂದೆ ಬಿಬಿಎಂಪಿ ಅಧಿಕಾರಿಗಳು ಎಚ್‌ಎಎಲ್ ಸಮೀಪದ ಖಾಲಿ ಜಾಗದಲ್ಲಿ ಅತಿ ಎತ್ತರದ ಸ್ಕೈಡೆಕ್ ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಿದ್ದರು. ರಕ್ಷಣಾ ಇಲಾಖೆಯಿಂದ ಅನುಮತಿ ಸಿಗದ ಕಾರಣಕ್ಕೆ ಯೋಜನೆಯು ನಗರದ ಹೊರ ವಲಯಕ್ಕೆ ಹೋಗಿತ್ತು.
ಬಳಿಕ ಬಿಬಿಎಂಪಿ ಅಧಿಕಾರಿಗಳು ಕೊಮ್ಮಘಟ್ಟ, ಜ್ಞಾನ ಭಾರತಿ ಹಾಗೂ ಸೋಮಪುರದ ಬಳಿ ಖಾಲಿ ಜಾಗ ಪರಿಶೀಲನೆ ನಡೆಸಿದ್ದರು. ಆದರೆ, ಅಲ್ಲಿಯೂ ಸ್ಕೈಡೆಕ್ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದು ರಕ್ಷಣಾ ಇಲಾಖೆ ಅಧಿಕಾರಿ ಅಭಿಪ್ರಾಯಪಟ್ಟಿತ್ತು.
ಹೀಗಾಗಿ, ನಗರದ ಕೇಂದ್ರ ಭಾಗದಿಂದ ಮತ್ತಷ್ಟು ದೂರ ಸ್ಕೈಡೆಕ್ ನಿರ್ಮಿಸಲು ಚಿಂತನೆ ನಡೆಸಿ ಮೆಟ್ರೋ ಸೇರಿದಂತೆ ಉತ್ತಮ ಸಾರಿಗೆ ಸಂಪರ್ಕ ಇದೆ ಎಂಬ ಕಾರಣಕ್ಕೆ ಹೆಮ್ಮಿಗೆಪುರವನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಅಲ್ಲೂ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.