ಪದವಿ ಹಾಗೂ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ 58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಮಧು ಬಂಗಾರಪ್ಪ

| N/A | Published : Mar 20 2025, 07:45 AM IST

Madhu bangarappa
ಪದವಿ ಹಾಗೂ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ 58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

6ರಿಂದ 8ನೇ ತರಗತಿ ಬೋಧನೆಯ ಪದವೀಧರ ಶಿಕ್ಷಕ ವೃಂದಕ್ಕೆ ಬಡ್ತಿ ನೀಡುವ ಸಂಬಂಧ 2017ರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (ಸಿಅಂಡ್‌ ಆರ್‌) ಶೀಘ್ರ ತಿದ್ದುಪಡಿ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

 ವಿಧಾನ ಪರಿಷತ್ತು: ಪದವಿ ಹಾಗೂ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಸುಮಾರು 58 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6ರಿಂದ 8ನೇ ತರಗತಿ ಬೋಧನೆಯ ಪದವೀಧರ ಶಿಕ್ಷಕ ವೃಂದಕ್ಕೆ ಬಡ್ತಿ ನೀಡುವ ಸಂಬಂಧ 2017ರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (ಸಿಅಂಡ್‌ ಆರ್‌) ಶೀಘ್ರ ತಿದ್ದುಪಡಿ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಮೇಲ್ಮನೆಯಲ್ಲಿ ನಿಯಮ 330ರಡಿ ಕಾಂಗ್ರೆಸ್‌ ಸದಸ್ಯ ರಾಜೋಜಿಗೌಡ ಅವರು ನೀಡಿದ ಸೂಚನಾ ಪತ್ರಕ್ಕೆ ಬುಧವಾರ ಉತ್ತರ ನೀಡಿದ ಅವರು, ಎನ್‌ಸಿಟಿಇಯು ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 5ನೇ ತರಗತಿ ಶಿಕ್ಷಕರಿಗೆ ಪಿಯುಸಿ, ಟಿಸಿಎಸ್‌/ಡಿಇಡಿ ಮತ್ತು 6ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರಿಗೆ ಪದವಿ ಮತ್ತು ಟಿಸಿಎಸ್‌/ಡಿಇಡಿ ವಿದ್ಯಾರ್ಹತೆ ನಿಗದಿಪಡಿಸಿರುತ್ತದೆ. ಅದರಂತೆ 2027ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಿಅಂಡ್‌ ಆರ್‌ಗೆ ತಿದ್ದುಪಡಿ ತಂದು ಹೊಸ ನಿಯಮ ರಚಿಸಲಾಗಿದೆ. ಈಗ ಪದವೀಧರರಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6ರಿಂದ 8ನೇ ತರಗತಿ ಬೋಧನೆಗೆ ಬಡ್ತಿ ನೀಡಲು ನಿಯಮಗಳನ್ನು ತಿದ್ದುಪಡಿ ಮಾಡಬೇಕು. ಇದು ನನ್ನ ಇಲಾಖೆಗೆ ಮಾತ್ರ ಸಂಬಂಧಿಸಿಲ್ಲ, ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಗೂ ಒಳಪಡುತ್ತದೆ ಎಂದರು.

- 6ರಿಂದ 8ನೇ ತರಗತಿ ಶಿಕ್ಷಕರಿಗೆ ಬಡ್ದಿ ಬೇಡಿಕೆ

- ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ

ಸಿಎಂ ಸೂಚನೆಯಂತೆ ಸಮಿತಿ: ಶಿಕ್ಷಕರ ಸಂಘಟನೆಯ ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿ ಅವರು ಈ ಹಿಂದೆ ಈ ಸಂಬಂಧ ಸಮಿತಿ ರಚಿಸಲು ನಿರ್ದೇಶನ ನೀಡಿದ್ದರು. ಅದರಂತೆ ಸಮಿತಿ ರಚಿಸಲಾಗಿದೆ. ವರದಿ ಬಂದ ಕೂಡಲೇ ಆದಷ್ಟು ಬೇಗ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಈ ಶಿಕ್ಷಕರ ಬಡ್ತಿಗೆ ಕ್ರಮ ವಹಿಸಲಾಗುವುದು ಎಂದರು.

ಇದಕ್ಕೂ ಮುನ್ನ ಮಾತನಾಡಿದ ರಾಜೋಜಿಗೌಡ, ಈ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ 1ರಿಂದ 8ನೇ ತರಗತಿ ಬೋಧನೆಗೆ ಎಂದು ನೇಮಕ ಮಾಡಿಕೊಳ್ಳಲಾಗಿದೆ. ಸರ್ಕಾರ ಹೊಸ ನಿಯಮ ಮಾಡಿದರೂ ಅವರಿಂದಲೇ 6ರಿಂದ 8ನೇ ತರಗತಿ ಪಾಠ ಮಾಡಿಸುತ್ತಿದೆ. ಆದರೆ, ನಿಯಮಾವಳಿ ಬದಲಾವಣೆ ಮಾಡಿ ಅವರಿಗೆ ನ್ಯಾಯ ಒದಗಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪಕ್ಷಾತೀತವಾಗಿ ಹಲವು ಸದಸ್ಯರು ಬೆಂಬಲಿಸಿ ಆ ಶಿಕ್ಷಕರಿಗೆ ನ್ಯಾಯ ಒದಗಿಸಲು ಆಗ್ರಹಿಸಿದರು.