ಪಾಕ್‌ಗೆ ಕಾಶ್ಮೀರ ಸೇರಿಸಿ ಕೈ ಟ್ವೀಟ್‌ ಮಾಡಿ ಯಡವಟ್ಟು: ಸಿಬ್ಬಂದಿ ವಜಾ

| N/A | Published : May 13 2025, 06:27 AM IST

Congress flag
ಪಾಕ್‌ಗೆ ಕಾಶ್ಮೀರ ಸೇರಿಸಿ ಕೈ ಟ್ವೀಟ್‌ ಮಾಡಿ ಯಡವಟ್ಟು: ಸಿಬ್ಬಂದಿ ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಕಿರೀಟ ಕಾಶ್ಮೀರವನ್ನು ಪಾಕಿಸ್ತಾನದ ಭೂಪಟದಲ್ಲಿ ಸೇರಿಸಿ ಟ್ವೀಟ್‌ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್‌ ಎಡವಟ್ಟು ಮಾಡಿದ್ದು, ಬೆನ್ನಲ್ಲೇ ಅದಕ್ಕೆ ಕಾರಣವಾದ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಿಬ್ಬಂದಿಗೆ ಗೇಟ್‌ ಪಾಸ್‌ ನೀಡಲಾಗಿದೆ.

ಬೆಂಗಳೂರು: ಭಾರತದ ಕಿರೀಟ ಕಾಶ್ಮೀರವನ್ನು ಪಾಕಿಸ್ತಾನದ ಭೂಪಟದಲ್ಲಿ ಸೇರಿಸಿ ಟ್ವೀಟ್‌ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್‌ ಎಡವಟ್ಟು ಮಾಡಿದ್ದು, ಬೆನ್ನಲ್ಲೇ ಅದಕ್ಕೆ ಕಾರಣವಾದ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಿಬ್ಬಂದಿಗೆ ಗೇಟ್‌ ಪಾಸ್‌ ನೀಡಲಾಗಿದೆ. 

ಈ ಬಗ್ಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಖಚಿತಪಡಿಸಿದ್ದು, ‘ತಪ್ಪು ಮಾಡಿದ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಬಿಸಾಕಿದ್ದೇವೆ’ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಐಎಂಎಫ್‌ ಸಾಲ ನೀಡಿರುವುದನ್ನು ಟೀಕಿಸಿ ರಾಜ್ಯ ಕಾಂಗ್ರೆಸ್‌ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿತ್ತು. 

ಇದರಲ್ಲಿ ‘ಸ್ವಯಂಘೋಷಿತ ವಿಶ್ವಗುರುವಿಗೆ ಕ್ಯಾರೇ ಎನ್ನದ ಐಎಂಎಫ್. ಭಾರತದ ವಿರೋಧವನ್ನೂ ಲೆಕ್ಕಿಸದೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್‌) ಪಾಕಿಸ್ತಾನಕ್ಕೆ ₹8,500 ಕೋಟಿ ನೀಡಲಾಗಿದೆ’ ಎಂದು ಹೇಳಿತ್ತು. ಈ ಪೋಸ್ಟ್‌ನಲ್ಲಿ ಪಾಕಿಸ್ತಾನ ಭೂಪಟ ಚಿತ್ರವನ್ನೂ ಪ್ರಕಟಿಸಿದ್ದು, ಪಾಕಿಸ್ತಾನ ಭೂಪಟದಲ್ಲಿ ಕಾಶ್ಮೀರವನ್ನು ಸೇರಿಸಲಾಗಿತ್ತು. ಪೋಸ್ಟ್‌ ಬಗ್ಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಕೆಪಿಸಿಸಿ ಟ್ವೀಟ್‌ ಡಿಲೀಟ್‌ ಮಾಡಿತ್ತು.

ಇದಕ್ಕೂ ಮೊದಲು ರಾಜ್ಯ ಕಾಂಗ್ರೆಸ್‌ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ದಿನ ‘ಮನುಕುಲದ ಅತ್ಯಂತ ಶಕ್ತಿಯುತ ಅಸ್ತ್ರ ಎಂದರೆ ಅದು ಶಾಂತಿ’ ಎಂದು ಪೋಸ್ಟ್‌ ಮಾಡಿ ತೀವ್ರ ಟೀಕೆ ವ್ಯಕ್ತವಾದ ಬಳಿಕ ಡಿಲೀಟ್‌ ಮಾಡಿತ್ತು.

ಕೆಲಸದಿಂದ ತೆಗೆದಿದ್ದೇವೆ-ಡಿಕೆಶಿ:

ಮ್ಯಾಪ್ ಎಡವಟ್ಟು ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಸಣ್ಣ ತಪ್ಪು ಇತ್ತು. ಈಗ ಅದನ್ನೆಲ್ಲ ಸರಿಪಡಿಸಿದ್ದೇವೆ. ತಪ್ಪು ಮಾಡಿದವರನ್ನು ತೆಗೆದು ಬಿಸಾಕಿದ್ದೇನೆ’ ಎಂದು ಹೇಳಿದರು.