ಹೈಕಮಾಂಡ್‌ಗೆ ಕೆಪಿಸಿಸಿ ಬದಲಾವಣೆಗೆ ಬೇಡಿಕೆ : ಕಾಂಗ್ರೆಸ್‌ನೊಳಗೆ ಈಗ ಡಿಸೆಂಬರ್‌ ಟೆನ್ಷನ್‌!

| N/A | Published : Apr 06 2025, 10:44 AM IST

Siddaramaiah Rahul

ಸಾರಾಂಶ

ಮೂಲಗಳು ಹೇಳುವ ಪ್ರಕಾರ, ಸಂಪುಟ ಪುನಾರಚನೆ ಮತ್ತು ಹೊಸ ಅಧ್ಯಕ್ಷರ ಆಯ್ಕೆ ಒಂದೇ ಸಮಯಕ್ಕೆ ನಡೆದರೆ ಒಳ್ಳೆಯದು ಎಂಬ ಅಭಿಪ್ರಾಯದಲ್ಲಿ ಹೈಕಮಾಂಡ್‌ ಇದೆ.

ಪ್ರಶಾಂತ್ ನಾತು 

ಏಷಿಯಾನೆಟ್ ಸುವರ್ಣ ನ್ಯೂಸ್

ಮೂಲಗಳು ಹೇಳುವ ಪ್ರಕಾರ, ಸಂಪುಟ ಪುನಾರಚನೆ ಮತ್ತು ಹೊಸ ಅಧ್ಯಕ್ಷರ ಆಯ್ಕೆ ಒಂದೇ ಸಮಯಕ್ಕೆ ನಡೆದರೆ ಒಳ್ಳೆಯದು ಎಂಬ ಅಭಿಪ್ರಾಯದಲ್ಲಿ ಹೈಕಮಾಂಡ್‌ ಇದೆ. ಇದರ ಅರ್ಥ ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿರುವಂತೆ ನಾಯಕತ್ವ ಬದಲಾವಣೆ ಕೂಡ ಅದೇ ಸಮಯಕ್ಕೆ ನಡೆಯುತ್ತಾ ಎಂಬ ಪ್ರಶ್ನೆಗೆ ಸಿಗುವ ಉತ್ತರದಲ್ಲೇ ರಾಜ್ಯ ರಾಜಕಾರಣದ ಭವಿತವ್ಯ ಅಡಗಿದೆ.

7-8 ಸಚಿವರನ್ನು ಕೈಬಿಟ್ಟು ಸಂಪುಟ ಪುನಾರಚನೆ ಮಾಡಬೇಕು ಮತ್ತು ಹೊಸದಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ಸಚಿವರು ನಡೆಸಿದ ಪ್ರಯತ್ನವನ್ನು ಇಡೀ ರಾಜ್ಯ ತೆರೆಯ ಮೇಲೆ ನೋಡಿದೆ. ಮುಖ್ಯಮಂತ್ರಿಯವರಿಗೂ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬದಲಾದರೆ ಆಗಲಿ ಎಂದೇ ಮನಸ್ಸಿನಲ್ಲಿತ್ತು. ಆದರೆ, ಏಳೆಂಟು ಸಚಿವರನ್ನು ಕೈಬಿಡುವುದಾದರೆ ತಮ್ಮ ಕೋಟಾದಲ್ಲಿನ ಸಚಿವರನ್ನೇ ಕೈಬಿಡಬೇಕಾಗುತ್ತದೆ ಎಂಬ ಉಭಯ ಸಂಕಟವೂ ಅವರಿಗಿತ್ತು. ಅದರ ಬದಲು, ಈ ಹಿಂದೆ ವಾಲ್ಮೀಕಿ ಹಗರಣದಲ್ಲಿ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರನ್ನು ಮಾತ್ರ ಈಗ ಸಂಪುಟಕ್ಕೆ ತಗೊಂಡರೆ ಸಾಲದೇ ಎಂಬ ಚಿಂತನೆಯೂ ಅವರಲ್ಲಿತ್ತು. ಈಗ, ದೆಹಲಿಯಲ್ಲಿ ರಾಹುಲ್ ಗಾಂಧಿ ಸ್ಪಷ್ಟ ಶಬ್ದಗಳಲ್ಲಿ ಸಂಪುಟ ಪುನಾರಚನೆ ಈಗ ಬೇಡ ಎಂದು ಹೇಳಿ ಕಳುಹಿಸಿದ್ದಾರೆ. ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾದ ಸಂತೋಷ್ ಲಾಡ್ ಮತ್ತು ಎಂ.ಬಿ.ಪಾಟೀಲ್ ಜೊತೆಗೆ 10 ಜನಪಥಕ್ಕೆ ಸರಿಯಾಗಿ ಬೆಳಗ್ಗೆ 10 ಗಂಟೆಗೆ ಹೋದಾಗ ಬರೀ ಸಿದ್ದರಾಮಯ್ಯ ಒಬ್ಬರನ್ನೇ ಒಳಗೆ ಕರೆದುಕೊಂಡು ಹೋದ ರಾಹುಲ್ ಗಾಂಧಿ ಹೊರಗಡೆ ಬಂದಾಗ 11 ಗಂಟೆ 30 ನಿಮಿಷ ಆಗಿತ್ತು. ಮೂಲಗಳ ಪ್ರಕಾರ, ಸಂಪುಟ ಪುನಾರಚನೆ ಈಗ ಬೇಡ ಎಂದು ಹೇಳಿರುವ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಕೂಡ ಯಾವುದೇ ನಿರ್ದಿಷ್ಟ ಆಶ್ವಾಸನೆ ಕೊಟ್ಟಿಲ್ಲ ಎಂದು ಮೂಲಗಳು ಹೇಳುತ್ತಿವೆ.

ವರ್ಷದ ಅಂತ್ಯ ಅರ್ಥ ಏನು?

2025ರ ನವೆಂಬರ್‌ನಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ 2.5 ವರ್ಷ ಪೂರ್ಣಗೊಳ್ಳುತ್ತದೆ. ದೇವರಾಜ ಅರಸು ಅವರಿಗಿಂತ ಜಾಸ್ತಿ ದಿನ ಅಧಿಕಾರ ನಡೆಸಿದ ದಾಖಲೆ ಕೂಡ ಸಿದ್ದರಾಮಯ್ಯ ಅವರ ಹೆಸರಿಗೆ ಬರುತ್ತದೆ. ಆಗ ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿ ನಾಯಕರಿಗೆ ಹೇಳಿದ್ದು, ಸ್ವತಃ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೊಟ್ಟ ಭರವಸೆಯನ್ನು ಡಿ.ಕೆ.ಶಿವಕುಮಾರ್‌ ದೆಹಲಿ ವರಿಷ್ಠರಿಗೆ ಪ್ರತಿ 15 ದಿನಕ್ಕೊಮ್ಮೆ ಹೋಗಿ ನೆನಪಿಸಿ ಬರುತ್ತಿದ್ದಾರೆ. ಇತ್ತ ತಮ್ಮ ಅಧಿಕಾರ ಅಬಾಧಿತ ಎಂದು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಅಂದುಕೊಂಡಿರುವಾಗ ಹೈಕಮಾಂಡ್ - ನೋಡೋಣ, ಡಿಸೆಂಬರ್‌ವರೆಗೆ ಕಾಯಿರಿ ಎಂದು ಹೇಳಿ ಕಳುಹಿಸಿರುವುದು ಸಿದ್ದರಾಮಯ್ಯ ಕ್ಯಾಂಪ್‌ನಲ್ಲಿ ದುಗುಡಕ್ಕಂತೂ ಕಾರಣವಾಗಿದೆ.

ಒಂದೇ ಸಲಕ್ಕೆ ಆದರೆ ಒಳ್ಳೆಯದು

ಕಳೆದ ತಿಂಗಳು ಡಿ.ಕೆ.ಶಿವಕುಮಾರ್‌ ಅವರನ್ನು ಕೆ.ಸಿ.ವೇಣುಗೋಪಾಲ್‌ ಅವರು ಕರೆದು ‘ಜಿಲ್ಲಾ ಪಂಚಾಯತ್ ಚುನಾವಣೆ ಮುಗಿಯುವವರೆಗೆ ನೀವೇ ಕೆಪಿಸಿಸಿ ಅಧ್ಯಕ್ಷರು’ ಅಂದಾಗ ಡಿ.ಕೆ. ಶಿವಕುಮಾರ್‌, ‘ಭರವಸೆ ಕೊಟ್ಟಂತೆ ನನ್ನನ್ನು ಮುಖ್ಯಮಂತ್ರಿ ಮಾಡಿ. ಆಮೇಲೆ ಯಾರನ್ನು ಬೇಕೋ ಅವರನ್ನು ಅಧ್ಯಕ್ಷ ಮಾಡಿಕೊಳ್ಳಿ, ಈಗ ಮಾತ್ರ ಸುಮ್ಮನಿರಿ’ ಎಂದು ಹೇಳಿ ಬಂದಿದ್ದರು. ಮೂಲಗಳು ಹೇಳುವ ಪ್ರಕಾರ, ಸಂಪುಟ ಪುನಾರಚನೆ ಮತ್ತು ಹೊಸ ಅಧ್ಯಕ್ಷರ ಆಯ್ಕೆ ಒಂದೇ ಸಮಯಕ್ಕೆ ನಡೆದರೆ ಒಳ್ಳೆಯದು ಎಂಬ ಅಭಿಪ್ರಾಯದಲ್ಲಿ ಹೈಕಮಾಂಡ್‌ ಇದೆ. ಇದರ ಅರ್ಥ ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿರುವಂತೆ ನಾಯಕತ್ವ ಬದಲಾವಣೆ ಕೂಡ ಅದೇ ಸಮಯಕ್ಕೆ ನಡೆಯುತ್ತಾ ಎಂಬ ಪ್ರಶ್ನೆಗೆ ಸಿಗುವ ಉತ್ತರದಲ್ಲೇ ರಾಜ್ಯ ರಾಜಕಾರಣದ ಭವಿತವ್ಯ ಅಡಗಿದೆ.

ಡಿಕೆಶಿ ಹೇಳಿದರೂ... ಅಸ್ತು ಅಸ್ತು

2013ರಿಂದ 2018 ರವರೆಗೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಹೇಳಿದ್ದಕ್ಕೆ ದೆಹಲಿ ಹೈಕಮಾಂಡ್‌ ಸದಾ ಅಸ್ತು ಅಸ್ತು ಎನ್ನುತ್ತಿತ್ತು. ಖರ್ಗೆ, ಪರಮೇಶ್ವರ್‌ ಕೂಡ ಆ ಪರಿ ಹಠ ಹಿಡಿಯುವ ಮನಸ್ಥಿತಿಯವರು ಆಗಿರಲಿಲ್ಲ. ಆದರೆ 2023ರಲ್ಲಿ ಅಧಿಕಾರಕ್ಕೆ ಬಂದ ನಂತರ ಡಿ.ಕೆ.ಶಿವಕುಮಾರ್‌ ಅವರ ಮಾತಿಗೂ ದೆಹಲಿ ನಾಯಕರು ತಲೆ ಅಲ್ಲಾಡಿಸುತ್ತಿದ್ದಾರೆ.

ಹಾಸನದ ಸಮಾವೇಶದ ಸ್ವರೂಪ ಬದಲಾಗಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದಾಗ ವೇಣುಗೋಪಾಲ ಹೌದು ಎಂದು ಫರ್ಮಾನು ಹೊರಡಿಸಿಯೇ ಬಿಟ್ಟರು. ಅದಾದ ಮೇಲೆ ಜಿ.ಪರಮೇಶ್ವರ್‌ ಮನೆಯಲ್ಲಿ ದಲಿತ ಶಾಸಕರ ಸಭೆ ಆಯೋಜನೆ ಮಾಡಲು ಹೊರಟಾಗ ಡಿ.ಕೆ.ಶಿವಕುಮಾರ್‌ ದಿಲ್ಲಿಗೆ ಹೋದರು. ಪರಿಣಾಮ ಸ್ವತಃ ರಣದೀಪ್‌ ಸುರ್ಜೇವಾಲಾ ಬಹಿರಂಗ ಪತ್ರ ಬರೆದು ಸಭೆ ರದ್ದು ಮಾಡಿ ಎಂದರು. ಜಾತಿಗಣತಿ ವರದಿಯನ್ನು ಕ್ಯಾಬಿನೆಟ್‌ನಲ್ಲಿ ತರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಾದಾಗ, ಡಿ.ಕೆ. ಶಿವಕುಮಾರ್‌ ಹೇಳಿದ ಒಂದು ಮಾತಿಗೆ ದೆಹಲಿ ನಾಯಕರು ಬೇಡ ಬೇಡ ಅಂದರು. ಹನಿಟ್ರ್ಯಾಪ್‌ ವಿಷಯವನ್ನು ಸದನದಲ್ಲಿ ಸಚಿವ ರಾಜಣ್ಣ ಪ್ರಸ್ತಾಪಿಸಿದಾಗ ವೇಣುಗೋಪಾಲ ಮತ್ತು ಸುರ್ಜೇವಾಲಾ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಪಾರ್ಟಿ ಇಮೇಜ್‌ಗೆ ಧಕ್ಕೆ ತಂದಿದ್ದೀರಿ, ಇದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಈಗ ಜಾರಕಿಹೊಳಿ, ರಾಜಣ್ಣ, ಸಂತೋಷ್‌ ಲಾಡ್‌ ಎಲ್ಲರೂ ಸೇರಿಕೊಂಡು ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಎಂದು ಪಟ್ಟು ಹಿಡಿದರು ಕೂಡ ದೆಹಲಿ ನಾಯಕರು ವರ್ಷದ ಅಂತ್ಯಕ್ಕೆ ಬೊಟ್ಟು ಮಾಡುತ್ತಿರುವುದು ಡಿ.ಕೆ.ಶಿವಕುಮಾರ್‌ ಹಾಕಿದ ಷರತ್ತಿಗೆ ಗಾಂಧಿ ಕುಟುಂಬ ಒಪ್ಪಿಕೊಂಡು ಬಿಡ್ತಾ ಎಂಬ ಕುತೂಹಲವನ್ನಂತು ಜಾಸ್ತಿ ಮಾಡಿದೆ.

ಮುಂದೆ ಏನಾಗಬಹುದು?

ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಅಧಿಕಾರ ಬಿಟ್ಟು ಕೊಡದೇ ಇದ್ದಾಗ ಸಚಿನ್ ಪೈಲಟ್ ಏನು ಪಾಠ ಕಲಿತರೋ ಇಲ್ಲವೋ. ಆದರೆ ಡಿ.ಕೆ. ಶಿವಕುಮಾರ್‌ 2023ರ ಫಲಿತಾಂಶ ಬಂದಾಗ ಪೂರ್ವ ಯೋಜನೆ ಮಾಡಿಕೊಂಡೇ ದೆಹಲಿಗೆ ಹೋಗಿದ್ದರು. ಅವರಿಗೂ ಗೊತ್ತಿತ್ತು, ತಾವು ಕೂಡಲೇ ಮುಖ್ಯಮಂತ್ರಿ ಆಗುವುದಿಲ್ಲ ಎಂದು. ಹೀಗಾಗಿ ಉಸ್ತುವಾರಿಗಳಾಗಿದ್ದ ವೇಣುಗೋಪಾಲ್‌ ಮತ್ತು ಸುರ್ಜೇವಾಲಾ ಮಾತಿಗೆ ಸೊಪ್ಪೇ ಹಾಕದ ಡಿ.ಕೆ.ಶಿವಕುಮಾರ್‌ ಖರ್ಗೆ ಹೇಳಿದರೂ ಒಪ್ಪಲಿಲ್ಲ.

ಕೊನೆಗೆ ಶಿಮ್ಲಾದಲ್ಲಿದ್ದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ‘ಫೇಸ್ ಟೈಮ್’ ಆ್ಯಪ್‌ ಮೂಲಕ ವಿಡಿಯೋ ಕಾಲ್ ಮಾಡಿ ನಿಮ್ಮನ್ನು 2.5 ವರ್ಷದ ಬಳಿಕ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ ನಂತರವೇ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಒಪ್ಪಿಕೊಂಡಿದ್ದು. ಹೀಗಾಗಿಯೇ ಈಗ ಡಿ.ಕೆ. ಶಿವಕುಮಾರ್‌ ಹೇಳಿದ್ದಕ್ಕೆ ದೆಹಲಿ ನಾಯಕರು ಓಕೆ ಓಕೆ ಅನ್ನುತ್ತಿದ್ದಾರೆ. ಜೊತೆಗೆ ಸೋನಿಯಾ ಗಾಂಧಿ ಅವರಿಗೆ - ತಮ್ಮ ಕಾರಣದಿಂದ ಡಿ.ಕೆ. ಶಿವಕುಮಾರ್‌ ಜೈಲಿಗೆ ಹೋದರು ಎಂಬ ಅನುಕಂಪವಿದೆಯಂತೆ.

ಆದರೆ ಸಿದ್ದು ಒಬ್ಬ ಮಾಸ್ ಲೀಡರ್. ಅವರನ್ನು ಕೆಳಗಿಳಿಸುವ ನಿರ್ಧಾರ ತೆಗೆದುಕೊಂಡರೆ ಅದರ ತಕ್ಷಣದ ಪರಿಣಾಮಗಳು ಮತ್ತು ದೂರಗಾಮಿ ಪರಿಣಾಮಗಳ ಬಗ್ಗೆ ಗಾಂಧಿ ಕುಟುಂಬಕ್ಕೂ ಒಂದು ಆತಂಕ ಇದೆ. ನೀವು ಇತಿಹಾಸದ ಪುಟ ತಿರುವಿ ಹಾಕಿದರೆ ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ, ಬಿ.ಎಸ್‌.ಯಡಿಯೂರಪ್ಪ ಹೀಗೆ ಯಾವುದೇ ಮಾಸ್ ಲೀಡರ್‌ಗಳನ್ನು ಅಧಿಕಾರದಿಂದ ಕೆಳಗೆ ಇಳಿಸಿದ ನಂತರದ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಹೀನಾಯ ಸೋಲು ಆಗಿಯೇ ಆಗಿದೆ. ಇದು ಮಾತ್ರವೇ ಹೈ ಕಮಾಂಡ್‌ಗೆ ಇರುವ ದೊಡ್ಡ ಆತಂಕ.