ಸಾರಾಂಶ
ನ್ಯಾಯಾಂಗದ ಸ್ವಾತಂತ್ರ್ಯದ ರಕ್ಷಣೆ, ನ್ಯಾಯಾಂಗ ವ್ಯವಸ್ಥೆಯನ್ನು ಬಲಗೊಳಿಸುವ ಬದ್ಧತೆಯೊಂದಿಗೆ ಕೆಲಸ ಮಾಡುವ ಜೊತೆಗೆ ನ್ಯಾಯದಾನದಲ್ಲಿನ ವಿಳಂಬ ಕಡಿಮೆ ಮಾಡಲು ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿ ನಾಗರಿಕರಿಗೆ ಉತ್ತಮ ಸೇವೆ ನೀಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ನ್ಯಾ.ವಿಭು ಬಖ್ರು ಹೇಳಿದರು.
ಬೆಂಗಳೂರು : ನ್ಯಾಯಾಂಗದ ಸ್ವಾತಂತ್ರ್ಯದ ರಕ್ಷಣೆ, ನ್ಯಾಯಾಂಗ ವ್ಯವಸ್ಥೆಯನ್ನು ಬಲಗೊಳಿಸುವ ಬದ್ಧತೆಯೊಂದಿಗೆ ಕೆಲಸ ಮಾಡುವ ಜೊತೆಗೆ ನ್ಯಾಯದಾನದಲ್ಲಿನ ವಿಳಂಬ ಕಡಿಮೆ ಮಾಡಲು ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿ ನಾಗರಿಕರಿಗೆ ಉತ್ತಮ ಸೇವೆ ನೀಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ನ್ಯಾ.ವಿಭು ಬಖ್ರು ಹೇಳಿದರು.
ಶನಿವಾರ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.
ಬಳಿಕ ಹೈಕೋರ್ಟ್‌ನಲ್ಲಿ ಬಾರ್ ಕೌನ್ಸಿಲ್ ಆಫ್ ಕರ್ನಾಟಕದಿಂದ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ನ್ಯಾ. ವಿಭು ಬಖ್ರು, ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿರುವುದು ನನ್ನ ಸೌಭಾಗ್ಯ. ದೇಶದ ಸಂವಿಧಾನ ಮತ್ತು ಕಾನೂನಿನ ಅಭಿವೃದ್ಧಿಯಲ್ಲಿ ಕರ್ನಾಟಕ ಮಹತ್ವದ ಪಾತ್ರ ವಹಿಸಿದೆ. ಮೊದಲಿನಿಂದಲೂ ಶ್ರೇಷ್ಠ ನ್ಯಾಯಾಂಗ ಅಧಿಕಾರಿಗಳು, ವಿಧ್ವಾಂಸರು, ಸುಧಾರಕರನ್ನು ದೇಶಕ್ಕೆ ನೀಡಿದೆ ಎಂದರು.
ನ್ಯಾ.ಎಂ.ವೆಂಕಟಾಚಲಯ್ಯ ಅವರನ್ನು ಹೆಮ್ಮೆಯಿಂದ ನಾವು ಸ್ಮರಿಸುತ್ತೇವೆ. ದೇಶದ ಮುಖ್ಯನ್ಯಾಯಮೂರ್ತಿಯಾಗಿದ್ದ ಅವರು ನ್ಯಾಯಾಂಗಕ್ಕೆ ಚಾತುರ್ಯ, ಗೌರವ, ನಿಷ್ಪಕ್ಷಪಾತತೆ ತಂದುಕೊಟ್ಟರು. ನ್ಯಾಯಾಂಗದ ಸ್ವಾಯತ್ತೆ, ಮಾನವ ಹಕ್ಕುಗಳ ಕುರಿತ ಅವರ ಬದ್ಧತೆ ಅನೇಕ ತಲೆಮಾರುಗಳಿಗೆ ಸ್ಪೂರ್ತಿ ನೀಡುತ್ತದೆ. ಕಾನೂನು ನಮಗೆ ಧರ್ಮ. ಕಾನೂನು ಎತ್ತಿಹಿಡಿಯಲು ಬದ್ಧರಾಗಿರುತ್ತೇವೆ. ನ್ಯಾಯಾಂಗ ಬಲವಾಗಿದ್ದರೆ ಸಂವಿಧಾನ ನೀಡಿರುವ ಸ್ವಾತಂತ್ರ್ಯದ ಹಕ್ಕು ಸುಸ್ಥಿರವಾಗಿರುತ್ತದೆ. ನಿಮಗಿರುವ ನಂಬಿಕೆಯೇ ಈ ಸಂಸ್ಥೆ ಸುಸ್ಥಿರವಾಗಿರಲು ಕಾರಣವಾಗುತ್ತದೆ. ಹೀಗಾಗಿ, ನಿಮ್ಮ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ನ್ಯಾಯಮೂರ್ತಿ ಹೇಳಿದರು.
ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಬೌರ್ ಕೌನ್ಸಿಲ್ ಅಧ್ಯಕ್ಷ ಸಿದ್ದಲಿಂಗಪ್ಪ ಮಿತ್ತಲ್‌ಕೋಡ್ ಸೇರಿದಂತೆ ಹಿರಿಯ ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪರಸ್ಪರ ಸಹಭಾಗಿತ್ವದ ಈ ಪಯಣದಲ್ಲಿ ನಾವು ಕರ್ನಾಟಕದ ಶ್ರೀಮಂತ ತತ್ವಜ್ಞಾನದ ಪರಂಪರೆಯಿಂದಲೂ ಸ್ಪೂರ್ತಿಯನ್ನು ಪಡೆಯಬೇಕಿದೆ. ಸಮಾಜದ ಪ್ರತಿಯೊಬ್ಬರಿಗೂ ಗೌರವ, ಸಮಾನತೆ, ನೈತಿಕ ಸ್ಥೈರ್ಯ ಸಿಗಬೇಕು ಎಂದು ದೂರದೃಷ್ಟಿಯ ಬಸವಣ್ಣನವರು ಹೇಳಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ, ತಳಮಟ್ಟಕ್ಕೆ ನ್ಯಾಯದಾನ ತಲುಪಬೇಕು ಎಂದು ಅವರು ಹೇಳಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳ ಕುರಿತಾದ ಬದ್ಧತೆ ನಮಗೆ ದಾರಿ ದೀಪವಾಗಿದೆ ಎಂದು ನ್ಯಾ. ವಿಭು ಬಖ್ರು ತಿಳಿಸಿದರು.
ಸರ್ಕಾರಿ ಸೇವೆಯಲ್ಲಿರುವ ಎಂಜಿನಿಯರ್, ಆಡಳಿತಗಾರರು, ನ್ಯಾಯಾಂಗ ಅಧಿಕಾರಿಯಾದವರು ಶಿಸ್ತು, ಶ್ರೇಷ್ಠತೆ ಮತ್ತು ಐಕ್ಯತೆಯನ್ನು ಹೊಂದಿರಬೇಕು ಎಂದು ಸರ್.ಎಂ.ವಿಶ್ವೇಶ್ವರಯ್ಯ ಅವರು ಹೇಳಿದ್ದಾರೆ. ತುಳಿತಕ್ಕೊಳಗಾದವರು ಸೇರಿ ಎಲ್ಲರನ್ನು ಒಳಗೊಳ್ಳುವ, ಎಲ್ಲರನ್ನು ಒಳಗೊಂಡ ಸುರಕ್ಷಿತ ವಾತಾವರಣ ಕಲ್ಪಿಸಲು ಕ್ರಮ ವಹಿಸುತ್ತೇವೆ. ಬಾರ್ ಕೌನ್ಸಿಲ್ ಆಫ್ ಕರ್ನಾಟಕದ ಸಹಕಾರದಿಂದ ಇದೆಲ್ಲವೂ ಸಾಧ್ಯವಿದೆ. ನ್ಯಾಯಾಂಗದ ಕುರಿತು ಜನರ ನಂಬಿಕೆ ಉಳಿಸಿಕೊಂಡು ಹೋಗಲು ತಮ್ಮ ಪಾಲುದಾರಿಕೆ, ಸಹಕಾರವನ್ನು ಬಯಸುತ್ತೇನೆ. ಜನರ ವಿಶ್ವಾಸವನ್ನು ಗಳಿಸಲು ಒಟ್ಟಾಗಿ ಪ್ರಯತ್ನಿಸೋಣಾ ಎಂದು ನ್ಯಾಯಮೂರ್ತಿ ಹೇಳಿದರು.
ಬಾರ್ ಮತ್ತು ಬೆಂಚ್ ಒಂದು ನಾಣ್ಯದ ಎರಡು ಮುಖಗಳಲ್ಲ. ಬದಲಾಗಿ, ಸಂವಿಧಾನಿಕ ಉದ್ದೇಶಗಳನ್ನು ಕಾಪಾಡುವ ಉದ್ದೇಶದೊಂದಿಗೆ ಒಂದಾಗಿ ಕೆಲಸ ಮಾಡುವ ಸಹಭಾಗಿಗಳು ಎಂದು ನ್ಯಾ. ವಿಭು ಬಖ್ರು ನುಡಿದರು.