ಸಾರಾಂಶ
ನ್ಯಾಯಾಂಗ ನಿಂದನೆ ಅಪರಾಧದಡಿ ಆರು ತಿಂಗಳು ಜೈಲು ಮತ್ತು ಎರಡು ಸಾವಿರ ದಂಡ ವಿಧಿಸಿರುವ ಹೈಕೋರ್ಟ್, ತನ್ನ ಮುಂದೆಯೂ ದುರ್ನಡತೆ ತೋರಿದ್ದಕ್ಕೆ ಮತ್ತೊಂದು ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ನಿರ್ದೇಶಿಸಿ ಅಪರೂಪದ ತೀರ್ಪು ನೀಡಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು : ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವಿರುದ್ಧ ದುರುದ್ದೇಶಪೂರ್ವಕವಾಗಿ ಸುಳ್ಳು ಆರೋಪ ಮಾಡಿ, ಅಸಭ್ಯ ಭಾಷೆಯಿಂದ ನಿಂದಿಸಿದ ವ್ಯಕ್ತಿಗೆ ನ್ಯಾಯಾಂಗ ನಿಂದನೆ ಅಪರಾಧದಡಿ ಆರು ತಿಂಗಳು ಜೈಲು ಮತ್ತು ಎರಡು ಸಾವಿರ ದಂಡ ವಿಧಿಸಿರುವ ಹೈಕೋರ್ಟ್, ತನ್ನ ಮುಂದೆಯೂ ದುರ್ನಡತೆ ತೋರಿದ್ದಕ್ಕೆ ಮತ್ತೊಂದು ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ನಿರ್ದೇಶಿಸಿ ಅಪರೂಪದ ತೀರ್ಪು ನೀಡಿದೆ.
ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ನ್ಯೂ ಎಕ್ಸ್‌ಟೆನ್ಷನ್ ನಿವಾಸಿ ಆರ್.ಸರ್ವೇಶ್ ಶಿಕ್ಷೆಗೆ ಒಳಗಾದವ. ಸರ್ವೇಶ್ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ 2022ರಲ್ಲಿ ದಾಖಲಿಸಿದ್ದ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ.ಪಾಟೀಲ್ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಖಾಸಗಿ ಕಂಪನಿ ಉದ್ಯೋಗದಿಂದ ವಜಾಗೊಂಡಿದ್ದ ಎಂಬಿಎ ಪದವೀಧರ ಆರ್.ಸರ್ವೇಶ್ ಮೈಸೂರಿನ ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಾಧೀಶರು, ನ್ಯಾಯಾಲಯ ಸಿಬ್ಬಂದಿ ಮತ್ತು ಅಮೈಕಸ್ ಕ್ಯೂರಿ ವಿರುದ್ಧ ಪದೇ ಪದೇ ಸುಳ್ಳು ಆರೋಪ ಮಾಡುತ್ತಿದ್ದ. ಆರೋಪಿ ತನ್ನ ನಡವಳಿಕೆ ಸುಧಾರಿಸಿಕೊಳ್ಳುವ ಯಾವುದೇ ಅವಕಾಶವಿಲ್ಲ ಎನ್ನುವುದು ವಿಚಾರಣೆಯಿಂದ ದೃಢಪಡುತ್ತದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ನ್ಯಾಯಾಧೀಶರ ವಿರುದ್ಧ ವೃಥಾ ಆರೋಪ ಮಾಡುವ ಮೂಲಕ ಸರ್ವೇಶ್ ನ್ಯಾಯದ ಆಡಳಿತದಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾನೆ. ಇದರಿಂದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಾರೆ. ಹೈಕೋರ್ಟ್ ಮುಂದಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲೂ ಆತ ಇದೇ ತಂತ್ರ ಬಳಸಿದ. ಹಾಗಾಗಿ, ಈ ಪ್ರಕರಣದ ವಿಚಾರಣೆ ಮೂರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಅಲ್ಲದೆ ಆತ ತನ್ನ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ಬದಲಾಗಿ ನ್ಯಾಯಾಲಯಕ್ಕೆ ಸವಾಲು ಎಸೆಯುತ್ತಾನೆ. ಆದ್ದರಿಂದ ನ್ಯಾಯಾಲಯ ಮತ್ತು ನ್ಯಾಯದ ಘನತೆ ಕಾಪಾಡಲು, ನ್ಯಾಯಾಂಗ ನಿಂದನೆ ಅಪರಾಧಕ್ಕೆ ನಿಗದಿಯಾಗಿರುವ ಗರಿಷ್ಠ ಆರು ತಿಂಗಳ ಶಿಕ್ಷೆಯನ್ನು ಸರ್ವೇಶ್‌ಗೆ ವಿಧಿಸುವುದೇ ಸೂಕ್ತ ಎಂದು ನ್ಯಾಯಪೀಠ ಕಟುವಾಗಿ ನುಡಿದಿದೆ.
ಪ್ರಕರಣವೇನು?:
‘ಪವರ್ ಸೆಲ್ ಬ್ಯಾಟರಿ ಇಂಡಿಯಾ’ ಕಂಪನಿಯ ಉದ್ಯೋಗದಿಂದ 2009ರಲ್ಲಿ ಆರ್.ಸರ್ವೇಶ್ ವಜಾಗೊಂಡಿದ್ದ. ಆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮೈಸೂರು ಕಾರ್ಮಿಕರ ನ್ಯಾಯಾಲಯ, ಸರ್ವೇಶ್‌ಗೆ ಕೊನೆಯದಾಗಿ ಪಡೆದ ವೇತನ ಪ್ರಮಾಣದಲ್ಲಿ ಶೇ.75ರಷ್ಟು ಭತ್ಯೆ ನೀಡುವಂತೆ ಕಂಪನಿಗೆ ಸೂಚಿಸಿತ್ತು. ಈ ಆದೇಶದ ವಿರುದ್ಧ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಭತ್ಯೆ ಪ್ರಮಾಣವನ್ನು ಶೇ.50ಕ್ಕೆ ಇಳಿಸಿತ್ತು.
ನಂತರ ಪ್ರಕರಣದ ವಿಚಾರಣೆ ಕಾರ್ಮಿಕರ ನ್ಯಾಯಾಲಯದಲ್ಲಿ ಮುಂದುವರಿದಾಗ ಸರ್ವೇಶ್ ತಾನೇ ಸ್ವತಃ ವಾದಿಸುತ್ತಿದ್ದ. 2013ರ ಆ.5ರಂದು ಮೈಸೂರು ಕಾರ್ಮಿಕರ ನ್ಯಾಯಾಲಯದ ಹಿಂದಿನ ನ್ಯಾಯಾಧೀಶರ ವಿರುದ್ಧ ಅಸಭ್ಯ ಭಾಷೆ ಬಳಸಿ ಆರೋಪ ಮಾಡಿದ್ದ. ಇದರಿಂದ 2022ರವರೆಗೆ ವಿಚಾರಣೆ ಪ್ರಗತಿ ಕಂಡಿರಲಿಲ್ಲ. 2022ರಲ್ಲಿ ಅಂದಿನ ಮೈಸೂರು ಕಾರ್ಮಿಕರ ನ್ಯಾಯಾಲಯದ ನ್ಯಾಯಾಧೀಶರು ಬರೆದ ಪತ್ರ ಆಧರಿಸಿ ಸರ್ವೇಶ್ ವಿರುದ್ಧ ಹೈಕೋರ್ಟ್ ನ್ಯಾಯಾಂಗ ನಿಂದನೆ ದಾಖಲಿಸಿತ್ತು. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಪರ ವಾದ ಮಂಡಿಸಿದ್ದ ಸರ್ಕಾರಿ ಅಭಿಯೋಜಕ ಪಿ.ತೇಜೇಶ್, ಆರೋಪಿ ದುಷ್ಕೃತ್ಯವನ್ನು ಸಾಬೀತುಪಡಿಸಿದ್ದರು.
ಹೈಕೋರ್ಟ್ ವಿಚಾರಣೆ ವೇಳೆ ತನ್ನ ಪ್ರಕರಣವನ್ನು ರಾಜ್ಯಪಾಲರ ಕಚೇರಿಗೆ ವರ್ಗಾಯಿಸುವಂತೆ ಸರ್ವೇಶ್ ಕೋರಿದ್ದ. ಪಾಟಿ ಸವಾಲಿಗೆ ಕರೆದರೆ 1471 ಪುಟ ಮತ್ತು 1500 ಪುಟ ದಾಖಲೆ ಸಲ್ಲಿಸಿ, ಅದನ್ನು ತನ್ನ ವಾದಾಂಶವಾಗಿ ಪರಿಗಣಿಸುವಂತೆ ಹೇಳುತ್ತಿದ್ದ. ತನ್ನ ಪರ ನಿಯೋಜಿಸಲಾಗಿದ್ದ ಅಮೈಕಸ್ ಕ್ಯೂರಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್, ಕೋರ್ಟ್ ಸಿಬ್ಬಂದಿ ವಿರುದ್ಧ ಸುಳ್ಳು ಆರೋಪ ಮಾಡಿದ್ದ. ಹೈಕೋರ್ಟ್ ನ್ಯಾಯಮೂರ್ತಿಗಳು ಬಲಪ್ರಯೋಗದಿಂದ ಆದೇಶ ಹಾಳೆಗಳಲ್ಲಿ ತನ್ನ ಸಹಿ ಪಡೆದಿದ್ದಾರೆ ಎಂದು ಆರೋಪಿಸಿದ್ದ.
ಇನ್ನು ತನಗೆ ಶಿಕ್ಷೆಯಾಗುವುದು ಗ್ಯಾರಂಟಿ ಎಂದು ಮೊದಲೇ ಅರಿತಿದ್ದ ಸರ್ವೇಶ್, ಜೈಲಿಗೆ ಹೋಗಲು ಬ್ಯಾಗ್ ಸಮೇತ ಹೈಕೋರ್ಟ್‌ಗೆ ಬಂದಿದ್ದ. ತೀರ್ಪು ಪ್ರಕಟ ನಂತರ ದೋಷಿಯನ್ನು ಜೈಲಿಗೆ ಕಳುಹಿಸಲಾಯಿತು.
6 ತಿಂಗಳು ಜೈಲು ಶಿಕ್ಷೆ
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರೋಪಿ ಕ್ಷಮೆ ಕೋರಿದಾಗ ವಿಚಾರಣೆ ಕೈ ಬಿಡುವುದು, ಆರೋಪ ದೃಢವಾದರೆ ಕೆಲ ದಿನ ಜೈಲಿಗೆ ಕಳುಹಿಸುವುದು ಅಥವಾ ಬೆಳಗ್ಗೆಯಿಂದ ಸಂಜೆಯವರೆಗೆ ಕೋರ್ಟ್‌ನಲ್ಲಿ ಕೂರಿಸುವಂತಹ ಶಿಕ್ಷೆ ವಿಧಿಸುವುದು ಸಾಮಾನ್ಯ. ಆದರೆ, ಗರಿಷ್ಠ ಆರು ತಿಂಗಳು ಶಿಕ್ಷೆ ವಿಧಿಸುವುದು ಅಪರೂಪ. ಅದೂ ಸಹ ಒಂದು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ದಿನವೇ ಮತ್ತೊಂದು ಪ್ರಕರಣ ದಾಖಲಿಸಲು ಆದೇಶಿಸುವುದು ಅತ್ಯಪರೂಪ.