ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ : ಮುಂದುವರಿದ ಭೂ ಕುಸಿತ

| N/A | Published : Jul 06 2025, 11:34 AM IST

Rain Alert In 28 June 2025

ಸಾರಾಂಶ

ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಖಾನಾಪುರ ತಾಲೂಕಿನ ಅನ್ಮೋಡ್‌ನಲ್ಲಿ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ.

  ಬೆಂಗಳೂರು :  ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಖಾನಾಪುರ ತಾಲೂಕಿನ ಅನ್ಮೋಡ್‌ನಲ್ಲಿ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮೂರು ಮನೆಗಳು ಧರೆಗೆ ಉರುಳಿವೆ. ಕಾಕತಿವೇಸ್‌ನಲ್ಲಿರುವ ಮನೆ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿ ಯಾರೂ ಇರದ ಕಾರಣ ಜೀವಹಾನಿ ಸಂಭವಿಸಿಲ್ಲ. ಮನೆಯವರು ಬೀಗ ಹಾಕಿ, ಗೋಕಾಕದ ಲಕ್ಷ್ಮೀ ಜಾತ್ರೆಗೆ ತೆರಳಿದ್ದರು. ಇದೇ ವೇಳೆ, ಬೆಳಗಾವಿ ನಗರದ ಚವ್ಹಾಟಗಲ್ಲಿ, ಪಾಟೀಲ ಮಾಳಾ, ಗ್ಯಾಂಗ್ ವಾಡಿಯಲ್ಲಿ ಮನೆಗಳು ಧರೆಗೆ ಉರುಳಿವೆ. ಖಾನಾಪುರ ತಾಲೂಕಿನ ಅನ್ಮೋಡ ಘಾಟ್‌ನಲ್ಲಿ ಬಿರುಕು ಬಿಟ್ಟು ರಸ್ತೆ ಕುಸಿದಿದ್ದು, ಸಂಚಾರ ದುಸ್ತರವಾಗಿದೆ. ಜೋಯಿಡಾ ತಾಲೂಕಿನಿಂದ ಗೋವಾವನ್ನು ಸಂಪರ್ಕಿಸುವ ಈ ಘಟ್ಟದಲ್ಲಿ ಹೆದ್ದಾರಿಯ ಒಂದು ಪಾರ್ಶ್ವ ಶನಿವಾರ ಕುಸಿತಕ್ಕೊಳಗಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ.ಸಿ.ರೋಡು-ವಿಲ್ಲಾಪುರಂ ರಾಷ್ಟ್ರೀಯ ಹೆದ್ದಾರಿ ಬಂಟ್ವಾಳ ಸಮೀಪದ ಭಂಡಾರಿಬೆಟ್ಟು ಎಂಬಲ್ಲಿ ರಸ್ತೆಯ ಬದಿಯಲ್ಲೇ ಇದ್ದ ಬಂಡೆಕಲ್ಲೊಂದು ಹೆದ್ದಾರಿಗೆ ಉರುಳಿದ್ದು, ರಸ್ತೆ ಸಂಚಾರಕ್ಕೆ ಕೆಲಕಾಲ ತೊಡಕುಂಟಾಗಿತ್ತು.

ಇದೇ ವೇಳೆ, ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವುದರಿಂದ ಆನೆಗೊಂದಿಯ ನಡುಗಡ್ಡೆಯಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಮುಳುಗುವ ಹಂತಕ್ಕೆ ತಲುಪಿದೆ. ನದಿಗೆ ಎರಡು ದಿನದಿಂದ 64 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಆನೆಗೊಂದಿಯ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ನವವೃಂದಾವನಗಡ್ಡೆಯ ಸುತ್ತಲು ನೀರು ತುಂಬಿದ್ದರಿಂದ ಬೋಟ್‌ ಸಂಚಾರ ರದ್ದುಗೊಳಿಸಲಾಗಿದೆ. ನಿತ್ಯ ಮಂತ್ರಾಲಯ ಮಠ ಮತ್ತು ಉತ್ತರಾದಿ ಮಠದ ಅರ್ಚಕರು ಬೋಟ್ ಮೂಲಕ ಸಂಚರಿಸಿ ಪೂಜೆ ಸಲ್ಲಿಸುತ್ತಿದ್ದರು. ಈಗ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಸೂಚನೆ ಮೇರೆಗೆ ಸಂಚಾರ ರದ್ದುಗೊಳಿಸಲಾಗಿದೆ.

Read more Articles on