ಸಾರಾಂಶ
ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿಯಲ್ಲಿ ಮನೆ ಕುಸಿದು ಎರಡು ಆಟೋ, ಒಂದು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಬೆಂಗಳೂರು : ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿಯಲ್ಲಿ ಮನೆ ಕುಸಿದು ಎರಡು ಆಟೋ, ಒಂದು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಶೃಂಗೇರಿ ಸುತ್ತಮುತ್ತ ಮಳೆಯಾಗುತ್ತಿದ್ದು, ನಳಿನಿ, ನಂದಿನಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬಯಲುಸೀಮೆಯ 30ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಬೀರೂರು ತಾಲೂಕಿನ ಮದಗದಕೆರೆಯಲ್ಲಿ ಶುಕ್ರವಾರ ಮಧ್ಯಾಹ್ನದವರೆಗೆ 36 ಅಡಿವರೆಗೆ (ಗರಿಷ್ಠ 64 ಅಡಿ) ನೀರು ಸಂಗ್ರಹವಾಗಿದೆ.
ತುಂಗಾ ಜಲಾಶಯಕ್ಕೆ 56,926 ಕ್ಯುಸೆಕ್ ನೀರು ಹರಿದು ಬರುತ್ತಿದೆ. 68,025 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತುಂಬಿದ ತುಂಗೆಗೆ ಶುಕ್ರವಾರ ಶಿವಮೊಗ್ಗದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು.
ಶಿವಮೊಗ್ಗ ಜಿಲ್ಲೆ ರಿಪ್ಪನ್‍ಪೇಟೆಯಲ್ಲಿ ಜಾನುವಾರು ಕೊಟ್ಟಿಗೆ ಕುಸಿದು ನಂಜುವಳ್ಳಿ ಗ್ರಾಮದ ಇಂದಿರಾ ಎಂಬ ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ವೇಳೆ, ತುಂಗಭದ್ರಾ ಜಲಾಶಯದ ನದಿಗೆ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಹಂಪಿಯ ಪುರಂದರದಾಸರ ಮಂಟಪ ಸೇರಿದಂತೆ ಕೆಲ ಸ್ಮಾರಕಗಳು ಜಲಾವೃತವಾಗಿವೆ.
ಕೊಡಸಳ್ಳಿಯಲ್ಲಿ ಗುಡ್ಡ ಕುಸಿತ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಕದ್ರಾದಿಂದ ಕೊಡಸಳ್ಳಿಗೆ ತೆರಳುವ ರಸ್ತೆಯಲ್ಲಿ ಬಾಳೆಮನೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಗುಡ್ಡ ಕುಸಿತದ ಕೆಳಭಾಗದಲ್ಲಿ ತಾತ್ಕಾಲಿಕವಾಗಿ ಮರದ ದಿಮ್ಮಿ ಬಳಸಿ ಕಾಲ್ನಡಿಗೆಯಲ್ಲಿ ಸಾಗಲು ಅನುಕೂಲ ಕಲ್ಪಿಸಲಾಗಿದೆ. ಈ ಸೇತುವೆಯ ಮೂಲಕ ಶುಕ್ರವಾರ ಕೆಪಿಸಿಯ 5 ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದೆ. ಕೆಪಿಸಿ ಸಿಬ್ಬಂದಿಗೆ ಬೋಟ್ ಮೂಲಕವೇ ಕರ್ತವ್ಯಕ್ಕೆ ಹಾಜರಾಗಲು ವ್ಯವಸ್ಥೆ ಮಾಡಲಾಗಿದೆ.
ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದ ಬಳಿಯೂ ಗುಡ್ಡ ಕುಸಿತ ಉಂಟಾಗಿದೆ. ಬೆಳಗಾವಿಯಲ್ಲಿ ಚವ್ಹಾಟ ಗಲ್ಲಿಯಲ್ಲಿರುವ ಕಲ್ಯಾಣ ಚೌಕ ಹತ್ತಿರ ಮನೆ ಕುಸಿದಿದ್ದು, ಎರಡು ಆಟೋ, ಒಂದು ದ್ವಿಚಕ್ರ ವಾಹನ ಜಖಂಗೊಂಡಿವೆ. ಮನೆಯೊಳಗೆ ಯಾರೂ ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಳಿ-ಮಳೆಯಿಂದಾಗಿ ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ.