ಮುಂದಿನ ವರ್ಷಾಂತ್ಯಕ್ಕೆ ಪೂರ್ಣಗೊಳಿಸುವ ಗುರಿಯೊಂದಿಗೆ ಆರಂಭವಾದ ಬೆಂಗಳೂರು ಉಪನಗರ ರೈಲು ಯೋಜನೆಯ ಹೀಲಲಿಗೆ-ರಾಜಾನುಕುಂಟೆ ಸಂಪರ್ಕಿಸುವ ‘ಕನಕ’ ಕಾರಿಡಾರ್‌ ಕಾಮಗಾರಿ ಕೂಡ ಪ್ರಗತಿ ಕಾಣುತ್ತಿಲ್ಲ.

ಮಯೂರ್ ಹೆಗಡೆ

 ಬೆಂಗಳೂರು : ಮುಂದಿನ ವರ್ಷಾಂತ್ಯಕ್ಕೆ ಪೂರ್ಣಗೊಳಿಸುವ ಗುರಿಯೊಂದಿಗೆ ಆರಂಭವಾದ ಬೆಂಗಳೂರು ಉಪನಗರ ರೈಲು ಯೋಜನೆಯ ಹೀಲಲಿಗೆ-ರಾಜಾನುಕುಂಟೆ ಸಂಪರ್ಕಿಸುವ ‘ಕನಕ’ ಕಾರಿಡಾರ್‌ ಕಾಮಗಾರಿ ಕೂಡ ಪ್ರಗತಿ ಕಾಣುತ್ತಿಲ್ಲ.

ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಅನುಷ್ಠಾನಗೊಳಿಸುತ್ತಿರುವ ಬಿಎಸ್‌ಆರ್‌ಪಿಯ ಬೈಯಪ್ಪನಹಳ್ಳಿ ಚಿಕ್ಕಬಾಣಾವರ ಸಂಪರ್ಕಿಸುವ ‘ಮಲ್ಲಿಗೆ’ ಮಾರ್ಗ ಮಾತ್ರವಲ್ಲ, ಟೆಂಡರ್‌ ಆದ 2ನೇ ಕಾಮಗಾರಿ ‘ಕನಕ’ (4ನೇ ಮಾರ್ಗ) ಕೆಲಸವೂ ವೇಗ ಕಳೆದುಕೊಂಡಿದೆ. ಭೂ ಸ್ವಾಧೀನ ಸಮಸ್ಯೆ ಇತ್ಯರ್ಥ ಆಗದಿರುವುದೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

46.24ಕಿಮೀ ಉದ್ದದ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ಅತೀ ಉದ್ದದ ಮಾರ್ಗ ಎನ್ನಿಸಿದೆ. 2023ರ ಡಿಸೆಂಬರ್‌ ಅಂತ್ಯದಲ್ಲಿ ಈ ಕಾಮಗಾರಿಯನ್ನೂ ಎಲ್‌ ಆ್ಯಂಡ್‌ ಟಿ ಕಂಪನಿಗೆ ₹1040.51 ಕೋಟಿ ಮೊತ್ತದಲ್ಲಿ ಗುತ್ತಿಗೆ ನೀಡಲಾಗಿದೆ. 8.96 ಕಿ.ಮೀ ಎತ್ತರಿಸಿದ (ಎಲಿವೆಟೆಡ್‌) ಹಾಗೂ 37.92 ಕಿ.ಮೀ ನೆಲಮಟ್ಟದ (ಎಟ್‌ ಗ್ರೇಡ್) ಮಾರ್ಗ ಇದಾಗಿದೆ. ಕಾರ್ಯಾದೇಶದ ಬಳಿಕ 30 ತಿಂಗಳಲ್ಲಿ ಕೆಲಸ ಮುಗಿಸುವಂತೆ ಡೆಡ್‌ಲೈನ್‌ ನೀಡಲಾಗಿದೆ. ಆದರೆ, ಕೆಲಸ ನಿಂತಿರುವುದರಿಂದ ನಿಗದಿತ ವೇಳೆಗೆ ಯೋಜನೆ ಪೂರ್ಣಗೊಳ್ಳುವುದಿಲ್ಲ ಎಂದು ಸಾರಿಗೆ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟೂ 160.56 ಎಕರೆ ಅಗತ್ಯ:

‘ಕನಕ’ಮಾರ್ಗಕ್ಕಾಗಿ ಒಟ್ಟೂ 160.56 ಎಕರೆ ಬೇಕು. ಅದರಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯ 115.472 ಎಕರೆ ಜಮೀನು 2024ರ ಏಪ್ರಿಲ್‌ನಲ್ಲಿ ಕೆ-ರೈಡ್‌ಗೆ ಹಸ್ತಾಂತರ ಆಗಿದೆ. ರಾಜ್ಯ ಸರ್ಕಾರದ 4.77 ಎಕರೆ, ಖಾಸಗೀ ಒಡೆತನದ 40.29 ಎಕರೆ ಬೇಕು. ರಾಜಾನುಕುಂಟೆ- ಚನ್ನಸಂದ್ರ ನಡುವಿನ 4.44 ಎಕರೆ, ಚನ್ನಸಂದ್ರ ಯಲಹಂಕ ನಡುವೆ 1.92 ಎಕರೆ, ಹೀಲಲಿಗೆ - ಸಿಲ್ಕ್‌ ಫಾರ್ಮ್‌ ನಡುವೆ 6.05 ಎಕರೆ, ಮತ್ತು ಅಲ್ಲಿಂದ ಬೆಳ್ಳಂದೂರುವರೆಗೆ ಜಾಗಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ನೋಟಿಫಿಕೇಶನ್‌ ಹೊರಡಿಸಲಾಗಿತ್ತು. ಭೂಸ್ವಾಧೀನ ಇನ್ನೂ ಪ್ರಗತಿಯಲ್ಲಿದೆ ಎಂದು ಕೆ-ರೈಡ್‌ ತನ್ನ ಅಂತಿಮ ವರದಿ ‘ಸಂಪರ್ಕ’ದಲ್ಲಿ ಮಾಹಿತಿ ನೀಡಿದೆ. ಶೇ.15ರಷ್ಟು ಭೂಸ್ವಾಧೀನ ಸಮಸ್ಯೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಎಷ್ಟು ಕೆಲಸ:

ಭೂಸ್ವಾಧೀನ ಪೂರ್ಣಗೊಳ್ಳುವ ಮುನ್ನವೇ ಈ ಮಾರ್ಗದ ಕೆಲಸ ಪ್ರಾರಂಭಗೊಂಡಿತ್ತು. ಜಿಯೋಟೆಕ್ನಿಕಲ್‌ ಸರ್ವೇ, ಭೂಮಿ ಸಮತಟ್ಟುಗೊಳಿಸಿಕೊಳ್ಳುವ ಕೆಲಸ, ಭೂಸ್ವಾಧೀನ ಆದಲ್ಲಿ ಮರಗಳ ಕಟಾವು ಆಗಿದೆ. ಬಳಿಕ 16 ಕಿರು ಸೇತುವೆ ಪೂರ್ಣಗೊಂಡಿದೆ. ಭೂಸ್ವಾಧೀನ ಆದೆಡೆ ಮರಗಳ ತೆರವು, ವಿದ್ಯುತ್‌, ಪಿಡಬ್ಲ್ಯುಡಿ, ಜಲಮಂಡಳಿ ಸೌಲಭ್ಯಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಪಿಲ್ಲರ್‌ ಕಾಮಗಾರಿಗಾಗಿ ಪೈಲ್‌ ಲೋಡ್‌ ಪರೀಕ್ಷೆ ನಡೆಯುತ್ತಿದೆ ಎಂದು ಕೆ-ರೈಡ್‌ ತಿಳಿಸಿತ್ತು. ಇದು ಬಿಟ್ಟರೆ ಬೇರೆ ಕಾಮಗಾರಿಗಳು ಆಮೆಗತಿಯಲ್ಲಿವೆ. ಬಹುತೇಕ ಕಡೆಗಳಲ್ಲಿ ಕೆಲಸ ನಿಂತಿದೆ ಎಂದು ಕೆ-ರೈಡ್‌ ಮೂಲಗಳು ತಿಳಿಸಿವೆ. ಅಲ್ಲದೆ, ನಡೆಯುತ್ತಿರುವ ಕೆಲಸದ ಪ್ರಗತಿ ಕುರಿತು ಸಂಸ್ಥೆ ಮಾಹಿತಿ ತಿಳಿಸುತ್ತಿಲ್ಲ.

19 ನಿಲ್ದಾಣಗಳು ನಿರ್ಮಾಣ

ಈ ಮಾರ್ಗದಲ್ಲಿ ಒಟ್ಟೂ 19 ನಿಲ್ದಾಣಗಳು ನಿರ್ಮಾಣ ಆಗಬೇಕು. ರಾಜಾನುಕುಂಟೆ, ಮುದ್ದನಹಳ್ಳಿ, ಯಲಹಂಕ (ಎಲಿವೇಟೆಡ್‌ ಇಂಟರ್‌ಚೇಂಜ್‌), ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ (ಇಂಟರ್‌ಚೇಂಜ್‌), ಕಗ್ಗದಾಸಪುರ, ಮಾರತ್‌ಹಳ್ಳಿ (ಎಲಿವೇಟೆಡ್‌), ಬೆಳ್ಳಂದೂರು ರಸ್ತೆ, ಕಾರ್ಮೆಲ್ಲಾರಾಂ, ಅಂಬೇಡ್ಕರ್‌ ನಗರ, ಹುಸ್ಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮತ್ತು ಹೀಲಲಿಗೆಯಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಸಚಿವರಿಗೆ ಕ್ರಮಕ್ಕೆ ಒತ್ತಾಯ

ಬಿಎಸ್‌ಆರ್‌ಪಿ ‘ಮಲ್ಲಿಗೆ’, ‘ಕನಕ’ ಕಾಮಗಾರಿ ವಿಳಂಬದ ಕುರಿತು ಕ್ರಮ ವಹಿಸುವಂತೆ ಕೋರಿ ಸಿಟಿಜನ್‌ ಫಾರ್‌ ಸಿಟಿಜನ್‌ ಸಂಘಟನೆಯ ರಾಜ್‌ಕುಮಾರ್ ದುಗರ್‌ ಅವರು ಸಚಿವ ಎಂ.ಬಿ.ಪಾಟೀಲ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಕೆಎಸ್‌ಆರ್‌-ದೇವನಹಳ್ಳಿ ಮಾರ್ಗ ಆರಂಭಿಸುವಂತೆಯೂ ಒತ್ತಾಯಿಸಿದ್ದಾರೆ.