ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಘೋಷಣೆಯಾದ ರೈಲ್ವೆ ಯೋಜನೆಯೊಂದು 30 ವರ್ಷದ ಬಳಿಕ ಭಾಗಶಃ ಕಾಮಗಾರಿ ಪೂರ್ಣಗೊಂಡು ಗುರುವಾರದಿಂದ ನಿಗದಿತ ಮಾರ್ಗದಲ್ಲಿ ರೈಲು ಸಂಚರಿಸಲಿದೆ.
ಹೌದು! ಗದಗ-ತಳಕಲ್-ವಾಡಿ ರೈಲ್ವೆ ಯೋಜನೆ ಘೋಷಣೆಯಾದಾಗ ಈ ಯೋಜನೆ ಜಾರಿ ಕುರಿತು ಅಪಹಾಸ್ಯ ಮಾಡಿದವರೇ ಹೆಚ್ಚು. ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆಯೇ ಇನ್ನೂ ಓಡುತ್ತಿಲ್ಲ, ಮತ್ತೊಂದು ರೈಲ್ವೆ ಯೋಜನೆ ಬೇರೆ ಎಂದೆಲ್ಲ ಕಿಚಾಯಿಸಿದ್ದರು. ಆದರೆ, ದೇಶದಲ್ಲಿಯೇ ಅತ್ಯಂತ ವೇಗವಾಗಿ ಭೂ ಸ್ವಾಧೀನ ಪ್ರಕ್ರಿಯೇ ಪೂರ್ಣಗೊಂಡು ತಳಕಲ್‌ನಿಂದ ಕುಷ್ಟಗಿ ವರೆಗೂ ರೈಲ್ವೆ ಮಾರ್ಗ ಪೂರ್ಣಗೊಂಡಿದೆ. ಈಗಾಗಲೇ ಪ್ರಾಯೋಗಿಕವಾಗಿ ರೈಲು ಓಡಿಸಿದ್ದು ಮೇ 15ರಂದು ಅಧಿಕೃತವಾಗಿ ರೈಲು ಓಡಾಟ ಪ್ರಾರಂಭವಾಗಲಿದೆ. ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ.ಕುಕನೂರು, ತಳಕಲ್, ಕುಷ್ಟಗಿ ಸೇರಿದಂತೆ ರೈಲುಗಳನ್ನೇ ಕಾಣದೂರಿನಲ್ಲಿ ಇನ್ಮುಂದೆ ರೈಲು ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ಲಾಟ್ ಪಾರ್ಮ್ 1ರಲ್ಲಿ ಬರಲಿದೆ ಎನ್ನುವ ಶಬ್ದ ನಿತ್ಯವೂ ಮೊಳಗಲಿದೆ.
ರೈಲ್ವೆ ಯೋಜನೆ ಪ್ರಾರಂಭ:ಗದಗ-ವಾಡಿ ರೈಲ್ವೆ ಯೋಜನೆ ಮೊಳಕೆಯೊಡೆದಿದ್ದು 1911ರಲ್ಲಿಯೇ. ನಿಜಾಮ್ ಸರ್ಕಾರ ಮತ್ತು ಬ್ರಿಟಿಷ್ ಸರ್ಕಾರ ಜಂಟಿಯಾಗಿ ಅಂತರಾಜ್ಯ ಸಂಪರ್ಕ ಕಲ್ಪಿಸಲು ರೂಪಿಸಿದ ಯೋಜನೆಯಾಗಿದೆ. ಆದರೆ, ಕಾರ್ಯಗತ ಆಗಲಿಲ್ಲ. ನಂತರ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದರಿಂದ ಯೋಜನೆಯ ಸುಳಿವು ಇಲ್ಲದಂತೆ ಆಯಿತು. 1996ರಲ್ಲಿ ಸಂಸದರಾಗಿ ಆಯ್ಕೆಯಾದ ಬಸವರಾಜ ರಾಯರಡ್ಡಿ ಅವರು ಈ ಯೋಜನೆಯನ್ನು ಹೆಕ್ಕಿ ತೆಗೆದರು. ಬ್ರಿಟಿಷ್ ಕಾಲದಲ್ಲಿಯೇ ರೂಪಗೊಂಡಿದ್ದ ಯೋಜನೆಯ ಮಾರ್ಗ ಬದಲಾಯಿಸಿ ತಮ್ಮೂರು ತಳಕಲ್ ಮೂಲಕವಾಗಿ ಕುಕನೂರು ಮಾರ್ಗವಾಗಿ ಸಂಚರಿಸುವಂತೆ ಮಾಡಿ, ಕೇಂದ್ರದ ರೈಲ್ವೆ ಬಜೆಟ್‌ನಲ್ಲಿ ಸೇರಿಸಿ ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾದರು.
ಈ ರೈಲ್ವೆ ಯೋಜನೆ ಘೋಷಣೆಯಾದಾಗ ಅನೇಕರು ಮೂಗು ಮುರಿದಿದ್ದೇ ಹೆಚ್ಚು. ಇದ್ಯಾವಾಗ ಆಗಬೇಕು. ನಮ್ಮೂರಲ್ಲಿ ರೈಲು ಯಾವಾಗ ಓಡಾಡಬೇಕು ಎಂದೆಲ್ಲ ಆಡಿಕೊಂಡರು. ಆದರೆ ಅಂತೆಯೇ ಆಯಿತು ಯಜನೆ ಘೋಷಣೆಯಾಗಿದ್ದಷ್ಟೇ ಕಾರ್ಯಗತವಾಗಲೇ ಇಲ್ಲ. ಅದಕ್ಕೆ 97 ಕೋಟಿ ನಿಗದಿಪಡಿಸಲಾಗಿತ್ತಾದರೂ ಮುಂದ ಕಾರ್ಯವೇ ನಡೆಯಲಿಲ್ಲ.ನಂತರ ಸಂಗಣ್ಣ ಕರಡಿ ಸಂಸದರಾಗಿದ್ದ ವೇಳೆ, ಬಸವರಾಜ ರಾಯರಡ್ಡಿ ರಾಜ್ಯದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಯೋಜನೆಯ ಭೂಸ್ವಾಧೀನದ ಎಲ್ಲ ಹಣವನ್ನು ರಾಜ್ಯ ಸರ್ಕಾರವೇ ಭರಿಸಿ ಭೂಸ್ವಾಧೀನ ಪ್ರಕ್ರಿಯೆ ವೇಗಗೊಳಿಸಿದರು. ಎನ್‌ಡಿಎ ಸರ್ಕಾರದಲ್ಲಿ ಯೋಜನೆಗೆ ವೇಗ ಪಡೆದುಕೊಂಡಿತು. 2017ರಲ್ಲಿ ಯೋಜನೆಯ ಭೂಮಿಪೂಜೆ ಕಾರ್ಯವೂ ನಡೆಯಿತು. ಇದೀಗ 30 ವರ್ಷಗಳಲ್ಲಿ ಯೋಜನೆಯು ಭಾಗಶಃ ಜಾರಿಗೊಂಡು, ರೈಲು ಓಡಾಟವೂ ಪ್ರಾರಂಭವಾಗುತ್ತಿರುವುದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.
ರೈಲ್ವೆ ಯೋಜನೆ ಉದ್ದ:ಗದಗ-ವಾಡಿ ರೈಲ್ವೆ ಯೋಜನೆ ಮಾರ್ಗವು 257.26 ಕಿಲೋ ಮೀಟರ್ ಹೊಂದಿದ್ದು ನಿಜಾಮ ಕಾಲದಲ್ಲಿ ₹ 1.96 ಕೋಟಿ ವೆಚ್ಚದ ಯೋಜನೆ ಇದಾಗಿತ್ತು. ಇಂದು ಪರಿಷ್ಕೃತಗೊಂಡು ₹ 2841 ಕೋಟಿ ವೆಚ್ಚದ ಯೋಜನೆ ಇದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ಶೇ.50ರಷ್ಟು ಅನುದಾನ ಹಾಗೂ ಭೂ ಸ್ವಾಧೀನ ಹೊಣೆಯನ್ನು ಸಂಪೂರ್ಣ ರಾಜ್ಯ ಸರ್ಕಾರವೇ ವಹಿಸಿಕೊಂಡಿದೆ. ಈಗಾಗಲೇ ಶೇ. 90ರಷ್ಟು ಭೂಸ್ವಾಧೀನವಾಗಿದ್ದು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ.
ಸದ್ಯ ತಳಕಲ್-ಕುಷ್ಟಗಿ ವರೆಗಿನ 56.1 ಕಿ.ಮೀ. ರೈಲ್ವೆ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಕುಷ್ಟಗಿಯಿಂದ ತಳಕಲ್ ಮಾರ್ಗವಾಗಿ ಹುಬ್ಬಳ್ಳಿಗೆ ನಿತ್ಯವೂ ರೈಲ್ವೆ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಅಂತರಾಜ್ಯ ರೈಲ್ವೆ ಮಾರ್ಗ ಇದಾಗಲಿದೆ.ಸ್ಟೇಷನ್ ಇಲ್ಲದೂರಲ್ಲಿ ಜಂಕ್ಷನ್
ರೈಲ್ವೆ ನಿಲ್ದಾಣವೇ ಇಲ್ಲದೂರಿನಲ್ಲಿ ಇದೀಗ ಈ ಯೋಜನೆಯಲ್ಲಿ ಜಂಕ್ಷನ್ ಪ್ರಾರಂಭವಾಗುತ್ತಿದೆ. ಶಾಸಕ ಬಸವರಾಜ ರಾಯರಡ್ಡಿ ತಮ್ಮ ಪ್ರಭಾವ ಬಳಸಿ, ರೈಲ್ವೆ ಮಾರ್ಗವನ್ನು ಬದಲಾಯಿಸುವ ಮೂಲಕ ತಮ್ಮೂರಿನಲ್ಲಿ ಸ್ಟೇಷನ್ ಇಲ್ಲದೆ ಇರುವಲ್ಲಿ ಈ ಯೋಜನೆಯಿಂದ ಜಂಕ್ಷನ್ ಆಗುವಂತೆ ಮಾಡಿದ್ದಾರೆ.ಗದಗ-ವಾಡಿ ರೈಲ್ವೆ ಯೋಜನೆಯಲ್ಲಿ ಕೇಂದ್ರದ ಅರ್ಧ ಪಾಲಿನ ಜತೆಗೆ ರಾಜ್ಯದ ಅರ್ಧಪಾಲು ಮತ್ತು ಭೂ ಸ್ವಾಧೀನದ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರವೇ ಹೊತ್ತಿದೆ. ರೈಲ್ವೆ ಯೋಜನೆ ಜಾರಿಯಾಗಿ ರೈಲು ಓಡುತ್ತಿರುವುದು ಸಂತಸದ ವಿಷಯ.ಬಸವರಾಜ ರಾಯರಡ್ಡಿ, ಸಿಎಂ ಆರ್ಥಿಕ ಸಲಹೆಗಾರರು, ಶಾಸಕಕುಷ್ಟಗಿಗೆ ರೈಲು ಬರಬೇಕು ಎನ್ನುವುದು ನಮ್ಮ ಹಿರಿಯರ ಕನಸಾಗಿತ್ತು. ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದೆವು. ಅಂತೂ ರೈಲು ಪ್ರಾರಂಭವಾಗುತ್ತಿರುವುದು ಖುಷಿ ತಂದಿದೆ.
ದೊಡ್ಡನಗೌಡ ಪಾಟೀಲ್, ಶಾಸಕ, ಕುಷ್ಟಗಿ ಬಸವರಾಜ ರಾಯರಡ್ಡಿ ಅವರ ಪ್ರಯತ್ನದ ಫಲವಾಗಿ ಯೋಜನೆ ಘೋಷಣೆಯಾಯಿತು. ನಂತರ ನಮ್ಮ ಕಾಲದಲ್ಲಿಯೇ ಯೋಜನೆಯ ಜಾರಿಗೆ ಸತತ ಹತ್ತು ವರ್ಷಗಳ ಕಾಲ ನಿರಂತರ ಪ್ರಯತ್ನದ ಫಲವಾಗಿ ಮತ್ತು ಸಂಸದ ರಾಜಶೇಖರ ಹಿಟ್ನಾಳ ಅವರ ಅವಧಿಯಲ್ಲಿ ರೈಲ್ವೆ ಓಡುತ್ತಿರುವುದು ಸಂತೋಷವಾಗಿದೆ. ಇದರ ಜತೆಗೆ ದರೋಜಿ- ಬಾಗಲಕೋಟೆ ಮತ್ತು ಆಲಮಟ್ಟಿ-ಚಿತ್ರದುರ್ಗ ಯೋಜನೆ ಜಾರಿಯಾಗಬೇಕು.ಸಂಗಣ್ಣ ಕರಡಿ, ಮಾಜಿ ಸಂಸದ