ಸಾರಾಂಶ
ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಿ.ಸಂದೀಪ್ ಆಯ್ಕೆಗೆ ಪಕ್ಷದ ವರಿಷ್ಠರು ತಡೆ ನೀಡಿದ್ದಾರೆ.
ಬೆಂಗಳೂರು : ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಿ.ಸಂದೀಪ್ ಆಯ್ಕೆಗೆ ಪಕ್ಷದ ವರಿಷ್ಠರು ತಡೆ ನೀಡಿದ್ದಾರೆ.
ಈ ಸಂಬಂಧ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಪತ್ರ ಬರೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಬಿ.ಸಂದೀಪ್ ಅವರ ಆಯ್ಕೆಯನ್ನು ಮುಂದಿನ ಸೂಚನೆ ಬರುವವರೆಗೂ ತಡೆ ಹಿಡಿಯುವಂತೆ ಪತ್ರದ ಮೂಲಕ ಸೂಚಿಸಿದ್ದಾರೆ.
ಅಂತೆಯೆ ಮುಂಬರುವ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಬಿ.ಸಂದೀಪ್‌ಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಚುನಾಯಿತ ರಾಜ್ಯ ಕೌನ್ಸಿಲ್ ಸದಸ್ಯರೂ ಮತ ಚಲಾಯಿಸಲು ಅರ್ಹರು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿ.ಸಂದೀಪ್ ನೇಮಕವಾದ ಬೆನ್ನಲ್ಲೇ ಸಂಸದ ಡಾ.ಕೆ.ಸುಧಾಕರ್ ಅವರು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆ ಹರಿಹಾಯ್ದಿದ್ದರು. ಆದರೆ, ಇದಕ್ಕೆ ತಿರುಗೇಟು ನೀಡಿದ್ದ ವಿಜಯೇಂದ್ರ ಅವರು ಈ ನೇಮಕದಲ್ಲಿ ತಮ್ಮ ಪಾತ್ರವಿಲ್ಲ. ಚುನಾವಣಾ ವ್ಯವಸ್ಥೆ ಪ್ರಕಾರ ಸುಧಾಕರ್ ಅವರೂ ಸೇರಿ ಸ್ಥಳೀಯ ಎಲ್ಲರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ಚುನಾವಣಾ ವೀಕ್ಷಕರು ನೇಮಕ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ಇದರ ಬೆನ್ನಲ್ಲೇ ದೆಹಲಿಗೆ ತೆರಳಿದ ಸುಧಾಕರ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಜಿಲ್ಲಾಧ್ಯಕ್ಷರ ನೇಮಕದ ಬಗ್ಗೆ ದೂರು ನೀಡಿದ್ದರು. ಇದೀಗ ಸುಧಾಕರ್ ಅವರ ದೂರಿನ ಅನ್ವಯ ಸಂದೀಪ್ ಆಯ್ಕೆಯನ್ನು ತಡೆ ಹಿಡಿಯುವಂತೆ ಹೈಕಮಾಂಡ್‌ನಿಂದ ಸೂಚನೆ ಬಂದಿದೆ.