ಸಸ್ಯಕಾಶಿ ಲಾಲ್‌ಬಾಗ್ ಉದ್ಯಾನವನದಲ್ಲಿ ಸರ್ಕಾರದ ಅನುಮತಿ ಇಲ್ಲದೆ ತೋಟಗಾರಿಕೆ ನಿರ್ದೇಶಕರಿಗೆ ಮೀಸಲಾದ ಸರ್ಕಾರಿ ನಿವಾಸದ ಪಕ್ಕದಲ್ಲಿಯೇ ಟೆನ್ನಿಸ್ ಕೋರ್ಟ್ ಮರು ನಿರ್ಮಾಣ ಚಟುವಟಿಕೆ ಆರಂಭಿಸಲಾಗಿದೆ.

ಉಮಾಶಂಕರ ಕಾರ್ಯ

 ಬೆಂಗಳೂರು : ಸಸ್ಯಕಾಶಿ ಲಾಲ್‌ಬಾಗ್ ಉದ್ಯಾನವನದಲ್ಲಿ ಸರ್ಕಾರದ ಅನುಮತಿ ಇಲ್ಲದೆ ತೋಟಗಾರಿಕೆ ನಿರ್ದೇಶಕರಿಗೆ ಮೀಸಲಾದ ಸರ್ಕಾರಿ ನಿವಾಸದ ಪಕ್ಕದಲ್ಲಿಯೇ ಟೆನ್ನಿಸ್ ಕೋರ್ಟ್ ಮರು ನಿರ್ಮಾಣ ಚಟುವಟಿಕೆ ಆರಂಭಿಸಲಾಗಿದೆ.

ಟೆನ್ನಿಸ್ ಕೋರ್ಟ್‌ಗಾಗಿ ಅಂದಾಜು 100 X 100 ಅಡಿ ಜಾಗದಲ್ಲಿ ಇದ್ದ ಗಿಡಗಳನ್ನು ತೆರವುಗೊಳಿಸಿ ಭೂಮಿ ಮಟ್ಟಸ ಮಾಡಲಾಗಿದೆ. ಈ ಕಾಮಗಾರಿಗೆ ತೋಟಗಾರಿಕಾ ಇಲಾಖೆಯಿಂದ ಲಕ್ಷಾಂತರ ರುಪಾಯಿ ವೆಚ್ಚ ಮಾಡಲಾಗುತ್ತಿದ್ದು, ಟೆನ್ನಿಸ್ ಕೋರ್ಟ್ ಕಾಮಗಾರಿ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಈ ಕಾಮಗಾರಿಗಾಗಿ ಅಮೂಲ್ಯವಾದ ಗಿಡ, ಮರದ ರೆಂಬೆಗಳನ್ನು ತೆರವುಗೊಳಿಸಲಾಗಿದೆ. ಟೆನ್ನಿಸ್ ಕೋರ್ಟ್ ಸುತ್ತ ಹೊಸ ಹಸಿರು ಬಲೆ ಅಳವಡಿಸಲಾಗಿದೆ.

ಈಗಾಗಲೇ ಈ ಟೆನಿಸ್ ಕೋರ್ಟ್ ನಿರ್ಮಾಣ ಅಂತಿಮ ಹಂತದಲ್ಲಿದ್ದು ಮೈದಾನದ ಸುತ್ತ ಗ್ರೀನ್ ನೆಟ್ ಅಳವಡಿಸಲಾಗಿದೆ. ಲಾನ್ ಅಳವಡಿಸಿ ಸುಂದರಗೊಳಿಸಲಾಗಿದೆ. ಲಾಲ್ ಬಾಗ್ ಉತ್ತರ ದ್ವಾರದಲ್ಲಿ ಪ್ರವೇಶಿಸಿದರೆ ಎಡಕ್ಕೆ ತಿರುಗಿದರೆ ಅಲ್ಲಿಯೇ ತೋಟಗಾರಿಕೆ ನಿರ್ದೇಶನಾಲಯ ಹಾಗೂ ತೋಟಗಾರಿಕಾ ಇಲಾಖೆಯ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ಇಬ್ರಾಹಿಂ ಮೈಗೂರು ಅವರಿಗೆ ಮೀಸಲಾದ ಸರ್ಕಾರಿ ನಿವಾಸದ ಪಕ್ಕದಲ್ಲಿಯೇ ಈ ಟೆನ್ನಿಸ್ ಕೋರ್ಟ್ ಮರು ನಿರ್ಮಿಸಲಾಗುತ್ತಿದೆ.

ಲಾಲ್ ಬಾಗ್‌ನಲ್ಲಿ ಯಾವುದೇ ಕಾಮಗಾರಿ ನಿರ್ಮಾಣ ಮಾಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅನುಮತಿ ಕಡ್ಡಾಯ. ಆದರೆ, ಟೆನ್ನಿಸ್ ಕೋರ್ಟ್ ಮರು ನಿರ್ಮಾಣಕ್ಕೆ ಯಾರಿಂದಲೂ ಅನುಮತಿ ಪಡೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ನಲ್ಲಿ ಆಟವಾಡಲು ಸರ್ಕಾರವೇ ನಿಷೇಧ ಹೇರಿದೆ. ಸಾರ್ವಜನಿಕರು ವಾಯುವಿಹಾರ ನಡೆಸಬಹುದು ಆದರೆ, ಆಟವಾಡುವ ಯಾವುದೇ ಕ್ರೀಡಾ ಪರಿಕರ ಕೊಂಡೊಯ್ಯುವಂತಿಲ್ಲ. ಪ್ಲಾಸ್ಟಿಕ್ ನಿಷೇಧವಿರುವ ಈ ಪ್ರದೇಶವನ್ನು ಅತ್ಯಂತ ಸೂಕ್ಷ್ಮವಾಗಿ ಕಾಪಾಡಿಕೊಳ್ಳಲಾಗಿದೆ. ಇಲ್ಲಿನ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿ ಯಾವುದೇ ವಸ್ತುಗಳು ಒಳಹೋಗುವುದನ್ನು ಪಶ್ಚಿಮ ಹಾಗೂ ಉತ್ತರ ದ್ವಾರಗಳಲ್ಲಿಯೇ ನಿರ್ಬಂಧಿಸುತ್ತಾರೆ.

ಲಾಲ್‌ಬಾಗ್ ನಲ್ಲಿ ಟೆನಿಸ್ ಕೋರ್ಟ್ ಮರು ನಿರ್ಮಾಣಕ್ಕೆ ಅಥವಾ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಆ ರೀತಿ ಯಾವುದಾದರೂ ನಿರ್ಮಾಣ ಚಟುವಟಿಕೆ ನಡೆದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

-ಆರ್‌.ಗಿರೀಶ್‌, ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ

1960ರಲ್ಲಿಯೇ ಟೆನ್ನಿಸ್ ಕೋರ್ಟ್ ಇತ್ತು. ಇದನ್ನು ಮರು ನಿರ್ಮಾಣ ಮಾಡುವಂತೆ ನಿರ್ದೇಶಕರಾದ ಇಬ್ರಾಹಿಂ ಹೇಳಿದರು. ಆದರಿಂದ ಹೊಸ ಹಸಿರು ಬಲೆ ಹಾಕಲಾಗಿದೆ. ಇನ್ನೂ ಮರುನಿರ್ಮಾಣ ಕೆಲಸ ನಡೆಯುತ್ತಿದ್ದು, ಪೂರ್ಣಗೊಂಡಿಲ್ಲ. ಕಾಮಗಾರಿಗೆ ಅಧಿಕೃತವಾಗಿ ಸರ್ಕಾರದಿಂದ ಅನುಮತಿ ಪಡೆದುಕೊಂಡಿಲ್ಲ.

-ಬಾಲಕೃಷ್ಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಬೇಲಿಯೇ ಎದ್ದು ಹೊಲ ಮೇಯ್ದಂತೆ

ಇಂದು ಟೆನ್ನಿಸ್ ಕೋರ್ಟ್ ಅಂತಾರೆ, ನಾಳೆ ಸ್ವಿಮ್ಮಿಂಗ್ ಪೂಲ್ ಬೇಕು ಅಂತಾರೆ, ಅಧಿಕಾರಿಗಳಿಗೆ ಪ್ರತ್ಯೇಕವಾದ ಕಾನೂನು ಇಲ್ಲ. ಮೈಸೂರಿನ ಪಾರಂಪರಿಕ ತಾಣದಲ್ಲಿ ರೋಹಿಣಿ ಸಿಂಧೂರಿ ಅವರು ಸ್ವಿಮ್ಮಿಂಗ್ ಪೂಲ್ ಮಾಡಿದಂತೆ ಇಲ್ಲಿ ಟೆನ್ನಿಸ್ ಕೋರ್ಟ್ ಮಾಡುತ್ತಿದ್ದಾರೆ. ಇದು ಬೇಲಿಯೇ ಎದ್ದು ಹೊಲಮೇಯ್ದಂತೆ, ನಾಳೆ ಕ್ರಿಕೆಟ್ ಆಟವಾಡಲು ಜಾಗ ಮಾಡುತ್ತಾರೆ. ಈ ರೀತಿಯಾದರೆ ಲಾಲ್ ಬಾಗ್ ಪರಿಸರ ನಾಶವಾಗುತ್ತಾ ಹೋಗುತ್ತದೆ. ಸರ್ಕಾರವೇ ಇಲ್ಲಿ ಯಾವುದೇ ಆಟಗಳನ್ನು ಆಡುವಂತಿಲ್ಲ, ಲಾನ್ ನಲ್ಲಿ ನಡೆಯುವಂತಿಲ್ಲ ಎಂದು ಆದೇಶ ಮಾಡಿದೆ. ಅಧಿಕಾರಿಗಳು ತಮ್ಮ ಆದೇಶಗಳನ್ನು ತಾವೇ ಉಲ್ಲಂಘನೆ ಮಾಡಿದರೆ ಹೇಗೆ, ಸರ್ಕಾರ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲಾಲ್ ಬಾಗ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.