ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!

| N/A | Published : Aug 23 2025, 11:31 AM IST

Sujatha Bhat copy right image
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಕ್ಷೇತ್ರದಲ್ಲಿ ಅನನ್ಯಾ ಭಟ್‌ ಎಂಬ ಹೆಸರಿನ ವೈದ್ಯ ವಿದ್ಯಾರ್ಥಿನಿ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು, ಸ್ವತಃ ದೂರುದಾರೆ ವೃದ್ಧೆ ಸುಜಾತಾ ಭಟ್‌ ಅವರೇ ಇದೊಂದು ಸುಳ್ಳು ಕಟ್ಟುಕಥೆ ಎಂದು ಒಪ್ಪಿಕೊಂಡಿದ್ದಾರೆ.

  ಬೆಂಗಳೂರು :  ಧರ್ಮಸ್ಥಳ ಕ್ಷೇತ್ರದಲ್ಲಿ ಅನನ್ಯಾ ಭಟ್‌ ಎಂಬ ಹೆಸರಿನ ವೈದ್ಯ ವಿದ್ಯಾರ್ಥಿನಿ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು, ಸ್ವತಃ ದೂರುದಾರೆ ವೃದ್ಧೆ ಸುಜಾತಾ ಭಟ್‌ ಅವರೇ ಇದೊಂದು ಸುಳ್ಳು ಕಟ್ಟುಕಥೆ ಎಂದು ಒಪ್ಪಿಕೊಂಡಿದ್ದಾರೆ.

ಧರ್ಮಸ್ಥಳ ಠಾಣೆಯಲ್ಲಿ "ನನ್ನ ಮಗಳು ನಾಪತ್ತೆಯಾಗಿದ್ದು, ಅನಾಮಿಕ ಹೂತಿಟ್ಟ ಶವಗಳ ತನಿಖೆಯಲ್ಲಿ ಮಗಳ ಶವ ಸಿಕ್ಕರೆ ಡಿಎನ್‌ಎ ಪರೀಕ್ಷೆ ನಡೆಸಿ ಮೃತದೇಹ ಕೊಡಿ. ಹಿಂದೂ ಸನಾತನ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುವೆ" ಎಂದು ಸುಜಾತಾ ಭಟ್‌ ದೂರು ದಾಖಲಿಸಿದ್ದರು. ಆದರೆ, ಈಗ ಇನ್‌ಸೈಟ್‌ ರಶ್‌ ಎಂಬ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದು, ಅದರ ಸಂಪೂರ್ಣ ಸಾರಾಂಶ ಇಲ್ಲಿದೆ.

*ಅನನ್ಯಾ ಭಟ್‌ ನಿಮ್ಮ ಮಗಳು ಎನ್ನುವ ಕಥೆ ಸುಳ್ಳು ಅಥವಾ ಸತ್ಯ?

- ಅದು ಸುಳ್ಳು ಕಟ್ಟುಕಥೆ, ನನಗೆ ಅನನ್ಯಾ ಭಟ್‌ ಎನ್ನುವ ಮಗಳೇ ಇಲ್ಲ.

* ಯಾಕೆ ಸುಳ್ಳು ಹೇಳಿದ್ರಿ?

- ಕೆಲವು ವ್ಯಕ್ತಿಗಳು ಆಸ್ತಿ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳು ಅಂತಾ ಹೇಳಿದಕ್ಕೆ ಹೇಳಿದೆ. ಅದಕ್ಕೆ ಈ ಪರಿಸ್ಥಿತಿ ನನಗೆ ಬಂತು. ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಸೇರಿ ಕೆಲವರು ಹೀಗೆ ಹೇಳುವಂತೆ ಹೇಳಿಕೊಟ್ಟಿದ್ದಾರೆ. ಆದರೆ, ಈ ರೀತಿ ಷಡ್ಯಂತ್ರ ನಡೆಯುತ್ತದೆ ಎಂದು ಗೊತ್ತಿರಲಿಲ್ಲ.

* ಹಣಕ್ಕಾಗಿ ಡಿಮ್ಯಾಂಡ್‌ ಮಾಡಿದ್ರಾ ಅಥವಾ ಆಸ್ತಿ ಬರಲಿ ಅಂತಾ ಹೇಳಿದ್ರಾ?

- ನನಗೆ ಆಸ್ತಿ ಸಮಸ್ಯೆ ಇತ್ತು, ನಾನು ಸುಳ್ಳು ಹೇಳಿದೆ. ನಾನು ದುಡ್ಡಿಗಾಗಿ ಈ ಕೆಲಸ ಮಾಡಿಲ್ಲ. ನನ್ನ ಆಸ್ತಿ ಸಹಿ ಇಲ್ಲದೇ ಧರ್ಮಸ್ಥಳಕ್ಕೆ ಕೊಟ್ಟಿದಕ್ಕೆ ನನಗೆ ಕೋಪ ಬಂತು. ನನ್ನ‌ ತಾತಾನ‌ ಆಸ್ತಿ ಮೊಮ್ಮಗಳಾದ ನನ್ನ‌ ಕೇಳದೇ ದಾನ ಮಾಡಿದಕ್ಕೆ ಕೋಪ ಬಂತು. ನನ್ನ ಹಕ್ಕು ಕಿತ್ತುಕೊಂಡಿದಕ್ಕೆ ಹೀಗೆ ಮಾಡಿದೆ. ನನಗೆ ದುಡ್ಡಿನ‌ ಅವಶ್ಯತೆ ಇಲ್ಲ. ನಾನು ದುಡಿದು ಬದುಕುತ್ತಿನಿ. ಭಿಕ್ಷೆ ಎತ್ತಿಲ್ಲ. ನಾನು ಲೀವಿಂಗ್ ಟು ಗೆದರ್‌ನಲ್ಲಿ ಇದ್ದಾಗ ದುಡಿದು ಅವರನ್ನ ಸಾಕಿದ್ದೇನೆ.

* ನೀವು ಫೋಟೋ ರಿಲೀಸ್‌ ಮಾಡಿದ್ದು?

- ನಾನು ರಿಲೀಸ್ ಮಾಡಿದ್ದ ಫೊಟೋ ಫೇಕ್. ನಾನು ಹೇಳಿದ ಎಲ್ಲ ಕಥೆಗಳು ಫೇಕ್‌. ನನ್ನ‌ ಪ್ರವೋಕ್ ಮಾಡಿಸಿ ಹೀಗೆಲ್ಲ ಮಾಡಿಸಿದ್ದಾರೆ. ನನ್ನ ಆಸ್ತಿಗೆ ಸಹಿ ಕೇಳಲಿಲ್ಲ ಇದಕ್ಕಾಗಿಯೇ ಷಡ್ಯಂತ್ರ ಮಾಡಿದೆ.

* ಧರ್ಮಸ್ಥಳದ ಮೇಲೆ ಕೋಪವ್ಯಾಕೆ?

- ಧರ್ಮಸ್ಥಳದ ದೇವರು ಹಿಂದೂಗಳದ್ದು. ಅದನ್ನು ಜೈನರಿಗೆ ಕೊಟ್ಟಿದ್ದಕ್ಕೆ ನನಗೆ ಕೋಪವಿದೆ. ಹಿಂದೂ ಬದಲಾಗಿ ಜೈನ್‌ ಸಂಪ್ರದಾಯದಲ್ಲಿ ದೇವಸ್ಥಾನ ನಡೆಯುತ್ತಿರುವದು ಯಾಕೆ? ಇದು ನನಗೆ ಇಷ್ಟ ಆಗಲಿಲ್ಲ. ಧರ್ಮಸ್ಥಳ ದೇವಸ್ಥಾನವನ್ನು ಯಾವುದಾದರೂ ಟ್ರಸ್ಟ್‌ಗೆ ಕೊಡಬೇಕಿತ್ತು. ಯಾವುದಾದರೂ ದೇವಸ್ಥಾನಕ್ಕೆ ಕೊಟ್ಟಿದ್ದರೆ ನಾನು ಈ ರೀತಿ ಮಾಡುತ್ತಿರಲಿಲ್ಲ.

* ಧರ್ಮಸ್ಥಳ ಭಕ್ತರ ಭಾವನೆಗೆ ಧಕ್ಕೆ ತಂದಿದ್ದು ಎಷ್ಟು ಸರಿ?

ನಾನು ಜನರ ಭಾವನೆಗಳ ಜೊತೆ ಆಟವಾಡಿಲ್ಲ. ಆ ರೀತಿ ಇವರು ಮಾಡಿದ್ರು. ಧರ್ಮಸ್ಥಳ ಭಕ್ತರ ಭಾವನೆಗೆ ಧಕ್ಕೆ ತರುವಂತೆ ನನ್ನ ಪ್ರವೋಕ್ ಮಾಡಿದರು. ಧರ್ಮಸ್ಥಳದ ಡ್ರಾಮದಲ್ಲಿ ಇನ್ನುಮುಂದೆ ನಾನಿಲ್ಲ. ನಾನು, ಧರ್ಮಸ್ಥಳ ಗ್ರಾಮ ಎಂದು ಹೇಳಿದ್ದೇನೆ ಹೊರತು ಧರ್ಮಸ್ಥಳದಲ್ಲಿರುವ ದೇವರು, ವಿರೇಂದ್ರ ಹೆಗ್ಗಡೆ ಅವರ ಕುರಿತು ನಾನು ಎಲ್ಲೂ ಬೊಟ್ಟು ಮಾಡಿ ತೋರಿಸಿಲ್ಲ. ಆಸ್ತಿಗೋಸ್ಕರ ಅನನ್ಯ ಭಟ್ ಕಥೆ ಕಟ್ಟಿದ್ದಿನಿ.

* ನಿಮ್ಮ ಆಸ್ತಿಗೆ ಕಾನೂನು ಹೋರಾಟ ಮಾಡಬಹುದಿತ್ತಲ್ಲವೇ?

- ನಮ್ಮ ಕುಟುಂಬಸ್ಥರು ನನಗೆ ಮಾಹಿತಿ ನೀಡದೆ ಧರ್ಮಸ್ಥಳಕ್ಕೆ ಆಸ್ತಿ ದಾನ ಮಾಡಿದ್ದಾರೆ. ಆಸ್ತಿ ಪಡೆಯುವಾಗ ಧರ್ಮಸ್ಥಳದವರು ಕುಟುಂಬದ ವಂಶವೃಕ್ಷ ಕೊಡಿ ಎಂದು ಕೇಳಬಹುದಿತ್ತು. ಮೂರೇ ಹೆಣ್ಣುಮಕ್ಕಳು ಎಂದರೆ ನಾನು ಯಾರು? ನನ್ನನ್ನು ಕೇಳದೇ ಹೇಗೆ ಆಸ್ತಿ ಕೊಟ್ಟರು? ಧರ್ಮಸ್ಧಳದರು ಕೊನೆ ಪಕ್ಷ ಇಡೀ ಕುಟುಂಬಸ್ಥರ ಸಹಿ ಪಡೆಯಬೇಕಿತ್ತು. ಆದರೆ ಅದನ್ನು ಯಾವುದು ಮಾಡಿಲ್ಲ. ಹಾಗಾಗಿ ಅನನ್ಯ ಭಟ್‌ ಕಥೆ ಕಟ್ಟಿದ್ದೇನೆ.

* ಈ ಇಳಿವಯಸ್ಸಿನಲ್ಲಿ ಬೇಕಿತ್ತಾ ನಿಮಗೆ?

- ನನಗೆ ಈ ಪ್ರಕರಣ ಬೇಡವಾಗಿತ್ತು. ನನ್ನನ್ನು ಇವರೆಲ್ಲಾ ಬಳಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಈ ಪ್ರಕರಣ ಇಷ್ಟೊಂದು ದೊಡ್ಡದಾಗುತ್ತದೆ ಎಂದುಕೊಂಡಿರಲಿಲ್ಲ. ನನ್ನನ್ನು ತನಿಖೆ ಮಾಡಿ ತೆಜೋವಧೆ ಮಾಡಲು ಇವರ್ಯಾರು?

* ಕರ್ನಾಟಕದ ಜನರ ಕ್ಷಮೆ ಕೇಳುತ್ತಿರಾ?

- ಹೌದು, ನನ್ನಿಂದ ತಪ್ಪಾಗಿದೆ. ಈ ಕುರಿತು ದೇಶದ ಜನರು ಹಾಗೂ ಧರ್ಮಸ್ಥಳಕ್ಕೆ ಕ್ಷಮೆ ಕೇಳುತ್ತೇನೆ. ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಡಿ. ನನ್ನ ಜೀವನವನ್ನು ನಾನು ಸಾಗಿಸಿಕೊಂಡು ಹೋಗುತ್ತೇನೆ. ದಯವಿಟ್ಟು ಕ್ಷಮಿಸಿ..…

Read more Articles on