ಕಿರುಕುಳ ನೀಡಲೂ ಒಂದು ಮಿತಿ ಇದೆ : ವಿನಯ್‌ ಕುಲಕರ್ಣಿ ಅಳಲು

| N/A | Published : Apr 26 2025, 11:35 AM IST

Vinay Kulkarni

ಸಾರಾಂಶ

ಪಕ್ಷ ಯಾವುದೇ ಇರಲಿ ಒಬ್ಬ ಮನುಷ್ಯನಿಗೆ ನೀಡುವ ಕಿರುಕುಳಕ್ಕೂ ಒಂದು ಮಿತಿ ಇರಬೇಕು  ಎಂದು ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ಪಕ್ಷ ಯಾವುದೇ ಇರಲಿ ಒಬ್ಬ ಮನುಷ್ಯನಿಗೆ ನೀಡುವ ಕಿರುಕುಳಕ್ಕೂ ಒಂದು ಮಿತಿ ಇರಬೇಕು. ಜಾರಿ ನಿರ್ದೇಶನಾಲಯದ (ಇ.ಡಿ) ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ನನ್ನ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ರಾಜಕೀಯ ಷಡ್ಯಂತ್ರ. ಸತ್ಯ‌ ಎಂದಿಗೂ‌ ಸತ್ಯವೇ, ನಾನು ಓರ್ವ ಕೃಷಿಕ. ನನ್ನದು ದಾಖಲೆಗಳನ್ನು ಇಟ್ಟುಕೊಳ್ಳುವಂಥಹ ಯಾವುದೇ ದೊಡ್ಡ ವ್ಯವಹಾರಗಳು ಇಲ್ಲ. ಆದರೂ ಇ.ಡಿ. ದಾಳಿ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ಪರಿಶೀಲನೆ, ದಾಳಿ ಇಂದು ನಿನ್ನೆಯದ್ದಲ್ಲ. ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಜನರನ್ನು ಭೇಟಿಯಾಗಲು ಆಗುತ್ತಿಲ್ಲ. ಒಂದಲ್ಲ ಒಂದು ನೆಪ ಇಟ್ಟುಕೊಂಡು ನನಗೆ ಕಿರುಕುಳ ನೀಡಲಾಗುತ್ತಿದೆ. ಪಕ್ಷ ಯಾವುದೇ ಇರಲಿ ಒಬ್ಬ ಮನುಷ್ಯನಿಗೆ ಕಿರುಕುಳ‌ ಕೊಡುವುದಕ್ಕೂ ಒಂದು ಮಿತಿಯಿರಬೇಕು. ಅಧಿಕಾರವಿದೆ ಎಂದು ಈ ರೀತಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಐಶ್ವರ್ಯಾ ಗೌಡ ಜತೆಗಿನ ವ್ಯವಹಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಜತೆ ಯಾವ ವ್ಯವಹಾರವನ್ನೂ ಹೊಂದಿಲ್ಲ. ಹಣದ ವರ್ಗಾವಣೆಯೂ ಆಗಿಲ್ಲ. ಮಂಜುಳಾ ಪಾಟೀಲ್​ ಮತ್ತು ಐಶ್ವರ್ಯಾ ಗೌಡ ನಡುವೆ ನಾನು‌ ರಾಜಿ ಸಂಧಾನ ನಡೆಸಿಲ್ಲ. ಪ್ರಕರಣ ದಾಖಲಾದ ನಂತರ ಪರಿಚಯವಷ್ಟೆ. ಪ್ರಕರಣ ಮುಂದುವರೆಸುವುದು ಬೇಡ, ನನ್ನ ಹಣ ಕೊಡಿಸಿ ಎಂದು ಬಂದಾಗ ಕರೆದು ವಿಚಾರಿಸಿದ್ದೆ. ಅದರ ಹೊರತಾಗಿ ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.