ರಾಜ್ಯದಲ್ಲಿ ತಾಯಿ ಮರಣ ಶೂನ್ಯಕ್ಕಿಳಿಸಲು - 320 ಕೋಟಿ ವೆಚ್ಚದಲ್ಲಿ ವಿಶೇಷ ಕಾರ್‍ಯಕ್ರಮ

| N/A | Published : Mar 08 2025, 11:21 AM IST

motherhood

ಸಾರಾಂಶ

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ತೀವ್ರ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ತಾಯಿ ಮರಣ ಶೂನ್ಯಕ್ಕೆ ಇಳಿಸುವ ಸಂಕಲ್ಪದೊಂದಿಗೆ ರಾಜ್ಯ ಬಜೆಟ್‌ಲ್ಲಿ 320 ಕೋಟಿ ರು. ವಿಶೇಷ ಕಾರ್ಯಕ್ರಮ

 ಬೆಂಗಳೂರು : ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ತೀವ್ರ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ತಾಯಿ ಮರಣ ಶೂನ್ಯಕ್ಕೆ ಇಳಿಸುವ ಸಂಕಲ್ಪದೊಂದಿಗೆ ರಾಜ್ಯ ಬಜೆಟ್‌ಲ್ಲಿ 320 ಕೋಟಿ ರು. ವಿಶೇಷ ಕಾರ್ಯಕ್ರಮ, ಸರ್ಕಾರದ 3 ಲಕ್ಷಕ್ಕೂ ಹೆಚ್ಚು ಗುತ್ತಿಗೆ ನೌಕರರಿಗೆ 5 ಲಕ್ಷ ರು.ವರೆಗೆ ನಗದು ರಹಿತ ಚಿಕಿತ್ಸೆ ನೀಡಲು ಯೋಜನೆ ಘೋಷಿಸಿಸಲಾಗಿದೆ.

ಆರೋಗ್ಯ ಇಲಾಖೆಗೆ ಒಟ್ಟು 17,473 ಕೋಟಿ ರು. ಅನುದಾನ ಮೀಸಲಿಟ್ಟಿದ್ದು, ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸೂಚ್ಯಂಕವೃದ್ಧಿಗೆ 873 ಕೋಟಿ ರು. ವಿಶೇಷ ಅನುದಾನ, ಮಕ್ಕಳ ಶ್ರವಣದೋಷಕ್ಕೆ ಶ್ರವಣ ಸಂಜೀವಿನಿ ಕ್ಲಾಕಿಯರ್‌ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆ, ಪ್ರತಿ ಜಿಲ್ಲೆಯಲ್ಲೂ ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರ, ಆಶಾ ಕಾರ್ಯಕರ್ತೆಯರ ಗೌರವ ಧನ 1,000 ರು. ಹೆಚ್ಚಳ, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಎಂಸಿಎಚ್‌ ಶಸ್ತ್ರಚಿಕಿತ್ಸಕ ತಜ್ಞರ ನೇಮಕ ಸೇರಿ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ.

ತಾಯಿ ಸಾವು ಪ್ರಮಾಣ ಶೂನ್ಯಕ್ಕಿಳಿಸಲು ಗರ್ಭಿಣಿಯರಲ್ಲಿ ಮತ್ತು ಪ್ರಸೂತಿ ವೇಳೆ ಗಂಭೀರ ರಕ್ತಸ್ರಾವ ತಡೆಗಟ್ಟಲು, ಚಿಕಿತ್ಸೆ ನೀಡಲು ಅವಶ್ಯವಿರುವ ಉಪಕರಣ ಪೂರೈಕೆ, ನವೀನ ಡಿಜಿಟಲ್‌ ತಂತ್ರಜ್ಞಾನದ ಮೂಲಕ ಹೆರಿಗೆ ಸೇವೆ, ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕಿಟ್‌ಗಳು, ಪ್ರೋತ್ಸಾಹ ಧನ ಹಾಗೂ ತಾಯಂದಿರಿಗೆ ವಾತ್ಸಲ್ಯ ಕಿಟ್‌ಗಳ ವಿತರಣೆ. ಜತೆಗೆ ರಾಜ್ಯದಲ್ಲಿ ಸಂಭವಿಸುವ ತಾಯಿ ಮರಣವನ್ನು ರಾಜ್ಯ ತಾಂತ್ರಿಕ ತಜ್ಞರ ಸಮಿತಿಯಿಂದ ಆಡಿಟ್‌ ಮಾಡಿಸಿ ಶಿಫಾರಸುಗಳನ್ನು ರಾಜ್ಯ ಅಧಿಕಾರಯುಕ್ತ ಸಮಿತಿ ಮುಂದೆ ಮಂಡಿಸುವುದು ಸೇರಿ ಅನೇಕ ಪ್ರಮುಖ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.

ಇನ್ನು ಪ್ರಸವ ಪೂರ್ವ ಮತ್ತು ನವಜಾತ ಶಿಶುಗಳಲ್ಲಿ ಅಪರೂಪದ ಚಯಾಪಚಯ ಕಾಯಿಲೆಗಳನ್ನು ಪತ್ತೆ ಹಚ್ಚಲು ಕಾರ್ಯಕ್ರಮ ರೂಪಿಸಲಾಗುವುದು. ಮೊದಲನೆಯ ಹಂತದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಗಣಿಬಾಧಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ 10 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಲಾಗಿದೆ.

5 ಲಕ್ಷ ರು.ವರೆಗೆ ನಗದುರಹಿತ ಚಿಕಿತ್ಸೆ:

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 3 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಹಾಗೂ ಅವಲಂಬಿತರಿಗೆ 5 ಲಕ್ಷ ರು.ವರೆಗೆ ನಗದುರಹಿತ ಚಿಕಿತ್ಸೆ ನೀಡಲು ಯೋಜನೆ ರೂಪಿಸಲಾಗಿದೆ.

ಸಿಬ್ಬಂದಿಯ ವೈಯಕ್ತಿಕ ಮಾಸಿಕ ವಂತಿಗೆ 100 ಕೋಟಿ ರು. ಹಾಗೂ ಸರ್ಕಾರದ ಮಾಸಿಕ ವಂತಿಕೆ 200 ರು.ಗಳೊಂದಿಗೆ ಸುವರ್ಣ ಆರೋಗ್ಯ ಟ್ರಸ್ಟ್‌ ಮೂಲಕ ಅನುಷ್ಠಾನಗೊಳಿಸಲಾಗುವುದು.

ಕ್ರಿಟಿಕಲ್‌ ಕೇರ್‌ಗೆ ಆದ್ಯತೆ: ಬೆಂಗಳೂರು ಉತ್ತರ ತಾಲೂಕಿನ ವ್ಯಾಪ್ತಿಯಲ್ಲಿ 200 ಹಾಸಿಗೆಯ ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಯನ್ನು 150 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಎಂಸಿಎಚ್‌ ತಜ್ಞರ ನಿಯೋಜನೆ. ತನ್ಮೂಲಕ ತಾಲೂಕು ಆಸ್ಪತ್ರೆಗಳಲ್ಲೂ ಸೂಪರ್‌ಸ್ಪೆಷಾಲಿಟಿ ತಜ್ಞ ಶಸ್ತ್ರಚಿಕಿತ್ಸಕರು ಲಭ್ಯವಿರುವಂತೆ ನೋಡಿಕೊಳ್ಳುವುದು. 50 ಹಾಸಿಗೆ ಸಾಮರ್ಥ್ಯದ 14 ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ, ಬೆಂಗಳೂರು ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಕಟ್ಟಡ ನಿರ್ಮಾಣ. ಅಥಣಿ, ಹುನಗುಂದ ಮತ್ತು ಮುಧೋಳದಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಮಾನಸಿಕ ಅಸ್ವಸ್ಥರ ಆರೈಕೆ:

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ ನಿಮ್ಹಾನ್ಸ್‌ ಸಹಯೋಗದಲ್ಲಿ ನರ ವೈಜ್ಞಾನಿಕ ಕಾಯಿಲೆಗಳಿಗೆ 2.61 ಲಕ್ಷ ಮಂದಿಗೆ ತಪಾಸಣೆ 32,630 ನರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಯೋಜನೆಯನ್ನು ಎಲ್ಲಾ ಹಂತದ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಲು 20 ಕೋಟಿ ರು. ಒದಗಿಸಲಾಗಿದ್ದು, ಮಾನಸಿಕ ಅಸ್ವಸ್ಥರ ಆರೈಕೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಹೊಸದಾಗಿ ಘೋಷಣೆಯಾಗಿರುವ ತಾಲೂಕುಗಳಾದ ಹನೂರು, ಅಳ್ನಾವರ, ಅಣ್ಣಿಗೇರಿ, ಮಸ್ಕಿ, ಮರಿವಾರ, ಕಾಪು, ಬಬಲೇಶ್ವರ, ಕೋಲ್ಹಾರ, ಚೇಳೂರು, ತೇರದಾಳದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸಲಾಗುವುದು. ಪೊನ್ನಂಪೇಟೆಯಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸಲಾಗುವುದು. ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗಳನ್ನು ಒಟ್ಟು 650 ಕೋಟಿ ರು. ವೆಚ್ಚದಲ್ಲಿ ನವೀಕರಣ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ವಿವಿಧ ಆಸ್ಪತ್ರೆಗಳ ಉನ್ನತೀಕರಣ:

ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈಗಿರುವ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಉನ್ನತೀಕರಣ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ಸ್ಥಾಪನೆ, ಮೈಸೂರು ಜಿಲ್ಲೆ ತಗಡೂರು ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.

ಮಂಗನಕಾಯಿಲೆಗೆ ತಡೆಗೆ ಕ್ರಮ:

2024-25ನೇ ಸಾಲಿನಲ್ಲಿ ಆರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯನ್ನು 100 ಕೋಟಿ ರು. ವೆಚ್ಚದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟಲು ಪ್ರಥಮ ಹಂತದಲ್ಲಿ ಗಣಿ ಬಾಧಿತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ 20 ತಾಲೂಕುಗಳಲ್ಲಿ 9 ಕೋಟಿ ರು. ವೆಚ್ಚದಲ್ಲಿ 14 ವರ್ಷದ ಮಕ್ಕಳಿಗೆ ಎಚ್‌ಪಿವಿ ಲಸಿಕೆ ಹಾಕಿಸಲಾಗುವುದು. 108 ಆ್ಯಂಬುಲೆನ್ಸ್‌ ಸೇವೆ ಉತ್ತಮಪಡಿಸಲಾಗುವುದು,

ಸಾಂಕ್ರಾಮಿಕ ಕಾಯಿಲೆಗಳಾದ ಚಿಕೂನ್‌ ಗುನ್ಯ, ಡೆಂಘೀ ಹಾಗೂ ಮಲೆನಾಡಿನಲ್ಲಿ ಕಾಣಿಸಕೊಳ್ಳುವ ಮಂಗನಕಾಯಿಲೆ ಪರಿಣಾಮಕಾರಿ ನಿಯಂತ್ರಣಕ್ಕೆ 50 ಕೋಟಿ ರು. ವೆಚ್ಚದಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಹೇಳಲಾಗಿದೆ.

ಕ್ರಿಟಿಕಲ್‌ ಕೇರ್‌ ಕೇಂದ್ರ ಆರಂಭ ಮಹತ್ವದ ಕ್ರಮ

ತಾಯಂದಿರ ಮರಣ ಪ್ರಮಾಣ (ಎಂಎಂಆರ್‌) ತಗ್ಗಿಸಲು ರೂಪಿಸಲಾದ ಕಾರ್ಯಕ್ರಮ ಹಾಗೂ ಎಂಎಂಆರ್‌ ಆಡಿಟ್‌ ಮಾಡುವುದು ಉತ್ತಮ ನಿರ್ಧಾರ. ಗರ್ಭಿಣಿಯರಲ್ಲಿ ಅನೀಮಿಯ ತಡೆಗಟ್ಟುವಿಕೆ, ಪೌಷ್ಟಿಕಾಂಶ ಕಿಟ್‌ ವಿತರಣೆ, ತಾಲೂಕು ಮಟ್ಟದಲ್ಲಿ ಸೂಪರ್‌ಸ್ಪೆಷಾಲಿಟಿ ಆರೈಕೆ ನೀಡಲು ಎಎಂಸಿಎಚ್‌ ತಜ್ಞರ ನಿಯೋಜನೆ ಹಾಗೂ ಬೆಂಗಳೂರು ಸೇರಿ ರಾಜ್ಯಾದ್ಯಂತ ಕ್ರಿಟಿಕಲ್‌ ಕೇರ್‌ ಕೇಂದ್ರ ಆರಂಭಿಸುವ ಘೋಷಣೆ ಮಹತ್ವದ್ದು. ಈ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಸುವುದು ಅಗತ್ಯ.

-- ಡಾ.ಸುದರ್ಶನ್‌ ಬಲ್ಲಾಳ್‌, ಅಧ್ಯಕ್ಷರು, ಮಣಿಪಾಲ್‌ ಸಮೂಹ ಆಸ್ಪತ್ರೆಗಳು

ರಾಜ್ಯದಲ್ಲಿ ತಾಯಿ ಮರಣ ಶೂನ್ಯಕ್ಕಿಳಿಸಲು

320 ಕೋಟಿ ವೆಚ್ಚದಲ್ಲಿ ವಿಶೇಷ ಕಾರ್‍ಯಕ್ರಮ

- ಗುತ್ತಿಗೆ ನೌಕರರಿಗೆ 5 ಲಕ್ಷ ವರೆಗೆ ನಗದುರಹಿತ ಚಿಕಿತ್ಸೆ

- ರಾಜ್ಯದ 3 ಲಕ್ಷಕ್ಕೂ ಹೆಚ್ಚು ನೌಕರರಿಗೆ ಇದರಿಂದ ಲಾಭ

- ಪ್ರತಿ ಜಿಲ್ಲೆಯಲ್ಲೂ ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರ

- ಆಶಾ ಕಾರ್ಯಕರ್ತೆಯರ ಗೌರವ ಧನ 1,000ಕ್ಕೆ ಏರಿಕೆ

- ಆರೋಗ್ಯ ಇಲಾಖೆಗೆ 17,473 ಕೋಟಿ ರು. ಅನುದಾನ

- ಅಸಾಂಕ್ರಾಮಿಕ ರೋಗಗಳ ತಪಾಸಣೆ, ಚಿಕಿತ್ಸೆ ವಿಸ್ತರಣೆ