ಸಾರಾಂಶ
ಭಾರತದಲ್ಲಿನ ಸ್ಥಾಯಿಕ ಪುನರಂ ಅವರ ಲೋಕನ ಅಧಿಕಾರವು ಉಚ್ಚ ನ್ಯಾಯಾಲಯದೋಂದಿಗೆ ಸರ್ವೋಚ್ಚ ನ್ಯಾಯಾಲಯವು ಹೊಂದಿದೆ!’ ಇಂತಹ ಅನೇಕ ಎಡವಟ್ಟುಗಳು ಕೆಎಎಸ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ನುಸುಳಿ ಅಭ್ಯರ್ಥಿಗಳ ನೆಮ್ಮದಿ ಕೆಡಿಸಿವೆ.
ಬೆಂಗಳೂರು : ‘ಭಾರತದಲ್ಲಿನ ಸ್ಥಾಯಿಕ ಪುನರಂ ಅವರ ಲೋಕನ ಅಧಿಕಾರವು ಉಚ್ಚ ನ್ಯಾಯಾಲಯದೋಂದಿಗೆ ಸರ್ವೋಚ್ಚ ನ್ಯಾಯಾಲಯವು ಹೊಂದಿದೆ!’
ಇದು ಭಾನುವಾರ ನಡೆದ ಕೆಎಎಸ್ ಪೂರ್ವಭಾವಿ ‘ಮರುಪರೀಕ್ಷೆ’ಯ ಪತ್ರಿಕೆ-1ರ ಬಿ ಸರಣಿಯ 97ನೇ ಪ್ರಶ್ನೆಯ ಮೊದಲ ಸಾಲು. ಮತ್ತೊಂದು ಪ್ರಶ್ನೆಯಲ್ಲಿ ‘ರಾಜ್ಯಪಾಲರು ಮಾಡುವ ಆದೇಶದ ಮೂಲಕ ಸದನದ ಜಂಟಿ ಉಪವೇಶನ ಪ್ರೊರುಗೇಶನ್ ಅನ್ನು ಮುಂದೂಡುತ್ತದೆ.’ ಇಂತಹ ಅನೇಕ ಎಡವಟ್ಟುಗಳು ಕೆಎಎಸ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ನುಸುಳಿ ಅಭ್ಯರ್ಥಿಗಳ ನೆಮ್ಮದಿ ಕೆಡಿಸಿವೆ.
ಮರುಪರೀಕ್ಷೆಯಲ್ಲೂ ಮತ್ತೆ ಎಡವಟ್ಟು:
ಆ.27ರಂದು ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಷಾಂತರ ದೋಷ, ಇಂಗ್ಲಿಷ್ ಮತ್ತು ಕನ್ನಡ ಪ್ರಶ್ನೆಗಳ ನಡುವೆ ಗೊಂದಲಗಳು, ಕನ್ನಡ ಪದಗಳ ತಪ್ಪು ಮುದ್ರಣ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾ ದ ಕಾರಣ ಮರುಪರೀಕ್ಷೆ ನಡೆಸಲಾಗಿದೆ. ಆದರೆ, ಮರುಪರೀಕ್ಷೆಯಲ್ಲೂ ಅನೇಕ ತಪ್ಪುಗಳು ಮರುಕಳಿಸಿ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೂಲಕ ಲೋಪ ದೋಷಗಳಾಗದಂತೆ ಮರುಪರೀಕ್ಷೆ ನಡೆಸುವಲ್ಲಿ ಕೆಪಿಎಸ್‌ಸಿ ವಿಫಲವಾಗಿದೆ.
ಕನ್ನಡ ಪತ್ರಿಕೆ ಗೊಂದಲಗಳ ಕುರಿತು ಅಭ್ಯರ್ಥಿಗಳು ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹಂಚಿಕೊಂಡಿದ್ದಾರೆ. ಅಭ್ಯರ್ಥಿಯೊಬ್ಬರು ಕೆಪಿಎಸ್‌ಸಿ ಕಾರ್ಯದರ್ಶಿಗೂ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ.
ಪ್ರಶ್ನೋತ್ತರ ಅರ್ಥ ಮಾಡಿಕೊಳ್ಳುವುದೇ ಕಷ್ಟ!
ಪ್ರಶ್ನೆ 40: ಮುಂದಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಭಾರತದಲ್ಲಿ 23ನೇ ಸಾಲಿನ ಜೀವವಿಮಾವಲದುಕ್ಕಿಂತ ಜೀವ ವಲಯದ ವಿಮೇಯ ಸುಕ್ಷ್ಮಗ್ರಹಕೆಯು ಹೆಚ್ಚಾಗಿದೆ.
ಬಿ. ಸ್ವಯಂ ಚಾಲಕ ಮಾರ್ಹದ ಮೇರೆಗೆ ವಿಮಾ ಮಧ್ಯವರ್ತಿಗಳಿಗಾಗಿ ಶೇಕಡಾ 100ರಷ್ಟು ಏಫ್‌ಡಿಐ ಅನ್ನು ಅನುಮತಿಸಿದೆ.
ಲೋಪ-ದೋಷಗಳು
- ಪತ್ರಿಕೆ-1ರ 85ನೇ ಪ್ರಶ್ನೆ- ಈ ಕೆಳಗಿನವುಗಳಲ್ಲಿ ಅಮೆರಿಕದ ರಾಷ್ಟ್ರಪತಿಯವರ ಹೋಲಿಕೆಯಲ್ಲಿ ಭಾರತದ ರಾಷ್ಟ್ರಪತಿಯವರ ಪಾಕೆಟ್ ವಿಟೋ ಅಧಿಕಾರಕ್ಕೆ ಸಂಬಂಧಿಸಿದಂತೆ ಯಾವುವು ಸರಿಯಾಗಿವೆ? ಎಂದು ಪ್ರಶ್ನೆ ಕೇಳಲಾಗಿದೆ.
ಅಸಲಿಗೆ ಅಮೆರಿಕದಲ್ಲಿ ರಾಷ್ಟ್ರಪತಿ ಹುದ್ದೆಯೇ ಇಲ್ಲ. ಅಧ್ಯಕ್ಷ ಇರುತ್ತಾರೆ. ಹೀಗಾಗಿ, ಕನ್ನಡ ಪತ್ರಿಕೆಯಲ್ಲಿ ‘ಅಮೆರಿಕದ ಅಧ್ಯಕ್ಷ’ ಎಂದಾಗಬೇಕಿತ್ತು. ಪ್ರೆಸಿಡೆಂಟ್ ಎಂಬ ಇಂಗ್ಲಿಷ್ ಪದವನ್ನು ರಾಷ್ಟ್ರಪತಿ ಎಂದು ಅನುವಾದಿಸಲಾಗಿದೆ!
- ಪತ್ರಿಕೆ-1ರ 3ನೇ ಪ್ರಶ್ನೆಯಲ್ಲಿ, ಲಾಹೋರ್ ನಿರ್ಣಯಕ್ಕೆ ಸಂಬಂಧಿಸಿದ ‘ತಪ್ಪದ’ ಹೇಳಿಕೆಯನ್ನು ಆಯ್ಕೆ ಮಾಡಿ’ ಎಂದಿದೆ. ಇಂಗ್ಲಿಷ್‌ನಲ್ಲಿ Incorrect ಎಂದು ಮುದ್ರಿಸಲಾಗಿದೆ.
Incorrectಗೆ ಸರಿಯಾದ ಪದ ‘ತಪ್ಪಾದ’ ಎಂದಾಗಬೇಕಿತ್ತು.
- ಪ್ರಶ್ನೆ 83ರಲ್ಲಿ ಅಖಲ ಭಾರತ ಪ್ರೈಮರ್ಸಿ ಸಿಬ್ಬಂದಿ ಆಧಾರಿತ ಉದ್ಯೋಗ ಸಮಿಕ್ಷೇ. ಇದನ್ನು ಸರಳವಾಗಿ ಅಖಿಲ ಭಾರತ ಸಂಸ್ಥೆ/ಉದ್ಯಮ/ಕಂಪನಿ ಆಧಾರಿತ ತ್ರೈಮಾಸಿಕ ಉದ್ಯೋಗ ಸಮೀಕ್ಷೆ (ಎಕ್ಯುಇಇಎಸ್) ಎಂದು ಬರೆಯಬಹುದಿತ್ತು.
- ಪ್ರಶ್ನೆ 90ರಲ್ಲಿ ಭಯೋತ್ಪಾದನಾ ಕೃತ್ಯ ಎನ್ನುವುದನ್ನು ಭಯೋತ್ಪಾದನಾ ಉದ್ದೇಶ ಎಂದು ಬರೆಯಲಾಗಿದೆ.
ತಪ್ಪು ಪದಗಳ ಸರಣಿ
ಕೆಪಿಎಸ್‌ಸಿ ಮುದ್ರಿತ ಪದಗಳು ಹಾಗೂ ಅಭ್ಯರ್ಥಿಗಳು ಸರಿಪಡಿಸಿದ ಪದಗಳು
- ಅಸಂಗಟಿತ- ಅಸಂಘಟಿತ
- ಮೆಲವಿನ- ?? ಇದರ ಅರ್ಥ ಏನೆಂದೇ ತಿಳಿದಿಲ್ಲ.
- ಹೋಂದಾಣಿಕೆ- ಹೊಂದಾಣಿಕೆ
- ಸೌಲ್ಯಭ್ಯ- ಸೌಲಭ್ಯ
- ದಿರ್ಘಾವದಿ- ದೀರ್ಘಾವಧಿ
- ಅಂದಾಜಗಳನ್ನು- ಅಂದಾಜುಗಳನ್ನು
- ಪಾರಲಂಪಿಕ್ಸ್- ಪ್ಯಾರಾ ಒಲಿಂಪಿಕ್ಸ್
- ನೇಮಿತಗೊಳಿಸಿ- ಸೀಮಿತಗೊಳಿಸಿ
- ರಾಜ್ಯಸಭೆವೇಂಬ- ರಾಜ್ಯಸಭೆ
- ಇತ್ತೀಚ್ಚೆಗೆ- ಇತ್ತೀಚೆಗೆ
ತಜ್ಞರಿಂದ ಭಾಷಾಂತರ: ಕೆಪಿಎಸ್‌ಸಿ
ಪ್ರಶ್ನೆಪತ್ರಿಕೆಯನ್ನು ತಜ್ಞ ಭಾಷಾಂತರಕಾರರ ಮೂಲಕವೇ ಕನ್ನಡಕ್ಕೆ ಭಾಷಾಂತರ ಮಾಡಿಸಲಾಗಿದೆ. ಕಳೆದ ಬಾರಿ ಪರೀಕ್ಷೆಯಲ್ಲಿ ಲೋಪವಾದ ಕಾರಣ ಸಾಕಷ್ಟು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿತ್ತು. ಆದರೂ, ತಪ್ಪು ಆಗಿದ್ದರೆ ಏಕೆ ಆಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಭಾಷಾಂತರ ವೇಳೆ ಪ್ರಶ್ನೆಗಳು ಸೋರಿಕೆಯಾಗಬಾರದು ಎಂದು ಗರಿಷ್ಠ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ. ಅಗತ್ಯ ಇರುವಷ್ಟೇ ಸೀಮಿತ ಸಂಖ್ಯೆಯ ಜನರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ಇನ್ನು ರಾಜ್ಯದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ಗೊಂದಲವಾಗಿದೆ. ನಂತರ ಅದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿ ಸರಿಪಡಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ಶೇ.47.7ರಷ್ಟು ಹಾಜರಾತಿ
ಭಾನುವಾರ ನಡೆದ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದ 2.109 ಲಕ್ಷ ಅಭ್ಯರ್ಥಿಗಳ ಪೈಕಿ 1.005 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಶೇ.47.7 ಹಾಜರಾತಿ ಇತ್ತು ಎಂದು ಕೆಪಿಎಸ್‌ಸಿ ತಿಳಿಸಿದೆ.
ಆ.27ರಂದು ನಡೆದ ಪರೀಕ್ಷೆಗೆ ಶೇ.62.52ರಷ್ಟು ಹಾಜರಾತಿ ಇತ್ತು. ಮರುಪರೀಕ್ಷೆಯಲ್ಲಿ ಹಾಜರಾತಿ ಗಣನೀಯವಾಗಿ ಕಡಿಮೆಯಾಗಿದೆ.
13.40 ಕೋಟಿ ರು. ಖರ್ಚು ಮಾಡಿ ಪರೀಕ್ಷೆ!
ಆ.27ರಂದು ನಡೆದ ಪೂರ್ವಭಾವಿ ಪರೀಕ್ಷೆಗೆ 13.40 ಕೋಟಿ ರು. ಖರ್ಚು ಮಾಡಲಾಗಿತ್ತು. ಮರುಪರೀಕ್ಷೆಗೂ ಅಷ್ಟೇ ವೆಚ್ಚ ಅಥವಾ ಅದಕ್ಕಿಂತ ಹೆಚ್ಚು ವೆಚ್ಚವಾಗಿರುವ ಸಾಧ್ಯತೆ ಇದೆ.
ಪರೀಕ್ಷೆ ನಡೆಸೋ ಯೋಗ್ಯತೆ
ಇಲ್ವಾ?: ಅಭ್ಯರ್ಥಿಗಳ ಪ್ರಶ್ನೆ
‘ವೀಪರ್ಯ, ಉಪವೇಶನ, ಪುನರವ’ ಇವು ಕೆಎಎಸ್ ಪರೀಕ್ಷೆಯಲ್ಲಿ ಬಳಸಿರುವ ಕನ್ನಡ ಪದಗಳ ಸ್ಯಾಂಪಲ್. ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸುವ ಯೋಗ್ಯತೆ ಕೂಡ ರಾಜ್ಯ ಸರ್ಕಾರಕ್ಕೆ ಇಲ್ಲದಾಗಿದೆಯೇ? ಎಂದು ಅಭ್ಯರ್ಥಿ ರವಿ ಎಂಬುವರು ಪ್ರಶ್ನಿಸಿದ್ದಾರೆ.