ಸಾರಾಂಶ
ಪ್ರವಾಸೋದ್ಯಮ ಇಲಾಖೆ ರಾಜ್ಯದಲ್ಲಿ ಪ್ರವಾಸಿಗರಿಗಾಗಿ 24*7 ಸಹಾಯವಾಣಿ
- ಮೈಸೂರಿನಲ್ಲಿ ಇತಿಹಾಸ, ಸಂಸ್ಕೃತಿ ಬಿಂಬಿಸುವ ರಾಜ್ಯಮಟ್ಟದ ವಸ್ತು ಸಂಗ್ರಹಾಲಯ - ಸವದತ್ತಿಯ ಯಲ್ಲಮ್ಮ ದೇಗುಲ, ದೇವಿಕಾರಾಣಿ ಎಸ್ಟೇಟ್ ಅಭಿವೃದ್ಧಿಗ ₹199 ಕೋಟಿ
- ಮೈಸೂರಿನಲ್ಲಿ ಇತಿಹಾಸ, ಸಂಸ್ಕೃತಿ ಬಿಂಬಿಸುವ ರಾಜ್ಯಮಟ್ಟದ ವಸ್ತು ಸಂಗ್ರಹಾಲಯ - ಸವದತ್ತಿಯ ಯಲ್ಲಮ್ಮ ದೇಗುಲ, ದೇವಿಕಾರಾಣಿ ಎಸ್ಟೇಟ್ ಅಭಿವೃದ್ಧಿಗ ₹199 ಕೋಟಿ
- ಆಯ್ದ 10 ಜಿಲ್ಲೆಗಳ ಪ್ರವಾಸಿ ತಾಣ ಅಭಿವೃದ್ಧಿಗೆ 50 ಕೋಟಿ ರು. ಘೋಷಣೆ
- ಲಕ್ಕುಂಡಿ ದೇಗುಲ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಸೌಕರ್ಯ --
ನೂತನ ಪ್ರವಾಸೋದ್ಯಮ ನೀತಿಯಿಂದ ರಾಜ್ಯದಲ್ಲಿ 8000 ಕೋಟಿ ರು. ಹೂಡಿಕೆ ಮತ್ತು 1.5 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ, ರಾಜ್ಯದ ಆಯ್ದ 10 ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರು. ಅನುದಾನ, ಪ್ರವಾಸಿಗರಿಗಾಗಿ 24/7 ಸಹಾಯವಾಣಿ, ಮೈಸೂರಿನಲ್ಲಿ ರಾಜ್ಯದ ಸಂಸ್ಕೃತಿ, ಇತಿಹಾಸ ಬಿಂಬಿಸುವ ರಾಜ್ಯ ಮಟ್ಟದ ವಸ್ತುಸಂಗ್ರಹಾಲಯ ಸ್ಥಾಪನೆ ಸೇರಿದಂತೆ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿವಿಧ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಪ್ರವಾಸೋದ್ಯಮ ಕ್ಷೇತ್ರವನ್ನು ಆಶಾದಾಯಕ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಆದ್ಯತೆಯ ವಲಯವಾಗಿಸುವ ಉದ್ದೇಶ ಹೊಂದಿರುವ ನೂತನ ಪ್ರವಾಸೋದ್ಯಮ ನೀತಿ 2024-29ಅನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಈ ನೀತಿಯಿಂದ ರಾಜ್ಯದಲ್ಲಿ 8,000 ಕೋಟಿ ರು. ಹೂಡಿಕೆಯ ನಿರೀಕ್ಷೆ ಹಾಗೂ 1.5 ಲಕ್ಷ ಉದ್ಯೋಗ ಸೃಜನೆಯ ಗುರಿ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ ಬೆಂಗಳೂರಿನ ದೇವಿಕಾರಾಣಿ ರೋರಿಚ್ ಎಸ್ಟೇಟ್ ಅನ್ನು ವಿಶೇಷ ಬಂಡವಾಳ ಯೋಜನೆಯಡಿ ಒಟ್ಟಾರೆ 199 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಆಯ್ದ 10 ಜಿಲ್ಲೆಗಳ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು 2025-26ನೇ ಸಾಲಿನಲ್ಲಿ 50 ಕೋಟಿ ರು. ಅನುದಾನ ಒದಗಿಸಲಾಗುವುದು ಎಂದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯಗಳನ್ನು(ಹೈವೇ ಹಬ್ಸ್) ಉನ್ನತೀಕರಿಸಿ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಯುನೆಸ್ಕೋ ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿರುವ ಬೇಲೂರು- ಹಳೇಬೀಡು- ಸೋಮನಾಥಪುರದಲ್ಲಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸಿ ತಾಣಗಳಲ್ಲಿನ ಪ್ರವಾಸಿ ಮಿತ್ರರಿಗೆ ತರಬೇತಿ ನೀಡಿ ಅವರ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸುವುದು ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡಲು 24/7 ಪ್ರವಾಸಿ ಸಹಾಯವಾಣಿ ಆರಂಭ, ರಾಜ್ಯದ ಸ್ಮಾರಕಗಳ ಸಂರಕ್ಷಣೆಗೆ ಈಗ ದತ್ತು ನೀಡಿರುವ 25 ಸ್ಮಾರಕಗಳ ಜೊತೆಗೆ ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಸ್ಮಾರಕಗಳನ್ನು ʻನಮ್ಮ ಸ್ಮಾರಕʼ ಡಿಜಿಟಲ್ ವೇದಿಕೆಯ ಮುಖಾಂತರ ದತ್ತು ನೀಡಲು ಉದ್ದೇಶಿಸಲಾಗಿದೆ. ರಾಜ್ಯದ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಒನ್-ಟಿಎಸಿ ಡಿಜಿಟಲ್ ಗ್ರಿಡ್ ಉಪಯೋಗಿಸಲಾಗುವುದು ಎಂದು ವಿವರಿಸಲಾಗಿದೆ.
ಐತಿಹಾಸಿಕ ಲಕ್ಕುಂಡಿಯ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಸೌಕರ್ಯ ಒದಗಿಸುತ್ತೇವೆ. ಪ್ರಾಚ್ಯಾವಶೇಷಗಳ ಸಂರಕ್ಷಣೆಗಾಗಿ ಬಯಲು ವಸ್ತು ಸಂಗ್ರಹಾಲಯ ಪ್ರಾರಂಭಿಸುತ್ತೇವೆ. ರಾಜ್ಯದ ಸಂಸ್ಕೃತಿ, ನಾಗರಿಕತೆಯ ಉಗಮ, ವಿಕಾಸಗಳೂ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಸಂಗತಿಗಳನ್ನು ಬಿಂಬಿಸುವ ರಾಜ್ಯ ಮಟ್ಟದ ವಸ್ತು ಸಂಗ್ರಹಾಲಯವನ್ನು ಮೈಸೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಕೋಟ್ ನಿರಾಶದಾಯಕ ಬಜೆಟ್
ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದು ನಿರಾಶಾದಾಯಕ ಬಜೆಟ್. ಪ್ರವಾಸಿ ತಾಣಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡಿಲ್ಲ. ಸಕಲೇಶಪುರ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ತೆರಳುವ ರಸ್ತೆಗಳ ಡಾಂಬರೀಕರಣಕ್ಕೂ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಿಲ್ಲ. ಜಲಪಾತಗಳಿಗೆ ಇಳಿಯಲು ಮೆಟ್ಟಿಲು, ಬೆಟ್ಟಗುಡ್ಡಗಳಿಗೆ ಚಾರಣ, ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ, ಪ್ರವಾಸೋದ್ಯಮ ಪಾಲುದಾರರ ಹೋಮ್ ಸ್ಟೇ, ರೆಸಾರ್ಟ್‌ಗಳ ಆರಂಭಿಸಲು ಏಕ ಗವಾಕ್ಷಿ ಪದ್ಧತಿ, ದಾಖಲೆ ಸರಳೀಕರಣದಂತಹ ವಿಚಾರಗಳಿಗೆ ಗಮನ ಹರಿಸದಿರುವುದು ಬೇಸರದ ಸಂಗತಿ. -- ಲೋಹಿತ್‌ಗೌಡ, ಸಕಲೇಶಪುರ ರೆಸಾರ್ಟ್ಸ್ ಅಸೋಸಿಯೇಷನ್ ನಿರ್ದೇಶಕ