ಏರ್‌ಶೋನಲ್ಲಿ ಅಮೆರಿಕದ ಎಫ್‌ - 35, ರಷ್ಯಾದ ಎಸ್‌ಯು-35 ಯುದ್ಧ ವಿಮಾನ ಆಕರ್ಷಣೆ

| N/A | Published : Feb 09 2025, 09:50 AM IST

Airshow

ಸಾರಾಂಶ

ಈ ಬಾರಿಯ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನವು ಅಪರೂಪದ ಘಟನಾವಳಿಗಳಿಗೆ ಸಾಕ್ಷಿಯಾಗುತ್ತಿದೆ

 ಬೆಂಗಳೂರು : ಈ ಬಾರಿಯ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನವು ಅಪರೂಪದ ಘಟನಾವಳಿಗಳಿಗೆ ಸಾಕ್ಷಿಯಾಗುತ್ತಿದೆ. ಶತ್ರುಗಳ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಬಲ್ಲ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನಗಳಾದ ರಷ್ಯಾ ದೇಶದ ‘ಎಸ್‌ಯು-57’ ಜೊತೆಗೆ ಶನಿವಾರವಷ್ಟೇ ಯಲಹಂಕ ವಾಯುಪಡೆ ನೆಲೆಗೆ ಬಂದಿರುವ ‘ಅಮೆರಿಕದ ಎಫ್‌-35’ ಬೆಂಗಳೂರಿನ ಆಕಾಶದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

ನಭಕ್ಕೆ ಚಿಮ್ಮಿದರೆ ಆಕಾಶದಲ್ಲಿ ಆಳ್ವಿಕೆ ನಮ್ಮದೇ ಎನ್ನುವ ಎಫ್‌-35 ಮತ್ತು ಎಸ್‌ಯು-57 ವಿಮಾನಗಳು ಏರೋ ಇಂಡಿಯಾದ ಆಕರ್ಷಣೆಯ ಕೇಂದ್ರ ಬಿಂದು ಆಗುವುದು ನಿಶ್ಚಿತ. ಹೀಗಾಗಿ, ಈ ಎರಡು ವಿಮಾನಗಳ ಸಮಾಗಮವು ರಕ್ಷಣಾ ವಲಯದ ಆಸಕ್ತಿ ಕೆರಳಿಸಿದೆ. ಈಗಾಗಲೇ ತಾಲೀಮು ಆರಂಭಿಸಿರುವ ಎಸ್‌ಯು-57 ಜೊತೆಗೆ ಭಾನುವಾರದಿಂದ ಎಫ್‌-35 ಮತ್ತು ಎರಡು ಎಫ್‌-16 ವಿಮಾನಗಳು ತಾಲೀಮು ನಡೆಸಲಿವೆ. ಇಂತಹ ಕ್ಷಣಗಳನ್ನು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಮಿಲಿಟರಿ ಆಸಕ್ತರು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೆರಿಕ ಮತ್ತು ರಷ್ಯಾ ತಮ್ಮ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ಉತ್ಸುಕವಾಗಿವೆ. ಕಳೆದ ಬಾರಿ ಏರೋ ಇಂಡಿಯಾದಲ್ಲಿ ಎಫ್‌-35 ಭಾಗವಹಿಸಿತ್ತು. ಅದರ ಜೊತೆಗೆ ಎಸ್‌ಯು-57 ಮೊದಲ ಬಾರಿ ಭಾಗವಹಿಸುವುದರೊಂದಿಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ನೆರೆಯ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳಿಂದ ಭಾರತಕ್ಕೆ ಪ್ರತಿಕೂಲ ಪರಿಸ್ಥಿತಿ ಇದೆ. ಈ ರಾಷ್ಟ್ರಗಳು ಪರಸ್ಪರ ಸಹಭಾಗಿತ್ವದಲ್ಲಿ ತಮ್ಮ ಸೇನೆಪಡೆಯ ಬತ್ತಳಿಕೆಯಲ್ಲಿರುವ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸುತ್ತಿವೆ. ಅದರಲ್ಲೂ ಚೀನಾ ದೇಶವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ 5ನೇ ತಲೆಮಾರಿನದ್ದು ಎನ್ನಲಾದ ಯುದ್ಧ ವಿಮಾನವನ್ನು ಇತ್ತೀಚೆಗೆ ಸಾರ್ವಜನಿಕಗೊಳಿಸಿದೆ.

ಹೀಗಾಗಿ, ಭಾರತವು ತನ್ನ ಆಕಾಶ ಗಡಿಯನ್ನು ಭದ್ರಪಡಿಸಿಕೊಳ್ಳಲು ಅತ್ಯಾಧುನಿಕ ವಿಮಾನಗಳ ಖರೀದಿ ಮೊರೆ ಹೋಗುತ್ತದೆ ಎಂಬ ಚರ್ಚೆಗಳು ನಡೆದಿವೆ.