ಸಾರಾಂಶ
ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಹಾಗೂ ಕಾಶಿ ಪೀಠದ ಜಗದ್ಗುರುಗಳು ಒಂದೂವರೆ ದಶಕದ ನಂತರ ಒಂದೇ ವೇದಿಕೆಯಲ್ಲಿ ದರ್ಶನ - ಅಮೃತ ಕ್ಷಣಗಳಿಗೆ ರೇಣುಕಾ ಮಂದಿರ, ದಾವಣಗೆರೆ ಮಹಾನಗರ ಸಾಕ್ಷಿ
ದಾವಣಗೆರೆ : ಬರೋಬ್ಬರಿ 16 ವರ್ಷಗಳ ನಂತರ ಒಂದಾದ ಪಂಚ ಪೀಠಾಧೀಶರು ಇಲ್ಲಿನ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಪೂಜೆ ಸಲ್ಲಿಸಿ, ವೇದಿಕೆಗೆ ಆಗಮಿಸುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಭಾಂಗಣದ ಒಳಗೆ, ಹೊರಗೆ ಸೇರಿದ್ದ ಭಕ್ತರು ಜೈಕಾರ ಹಾಕುತ್ತಾ, ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಹಾಗೂ ಕಾಶಿ ಪೀಠದ ಜಗದ್ಗುರುಗಳು ಒಂದೂವರೆ ದಶಕದ ನಂತರ ಒಂದೇ ವೇದಿಕೆಯಲ್ಲಿ ದರ್ಶನ ನೀಡಲಿರುವ ಐತಿಹಾಸಿಕ ಕ್ಷಣಗಳಿಗಾಗಿ ದಾವಣಗೆರೆ ಸೇರಿದಂತೆ ರಾಜ್ಯ, ಪರ ರಾಜ್ಯಗಳಿಂದ ಬಂದಿದ್ದ ಶಿವಾಚಾರ್ಯರು, ಸಹಸ್ರಾರು ಭಕ್ತರು ಕುತೂಹಲದಿಂದ ಕಾಯುತ್ತಿದ್ದರು. ಈ ಅಮೃತ ಕ್ಷಣಗಳಿಗೆ ರೇಣುಕಾ ಮಂದಿರ, ದಾವಣಗೆರೆ ಮಹಾನಗರ ಸಾಕ್ಷಿಯಾಯಿತು.
ವೇದಿಕೆಗೆ ಪಂಚ ಪೀಠಾಧೀಶರು ಬರುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ। ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿರೋಧ ಪಕ್ಷ ಮಾಜಿ ಮುಖ್ಯ ಸಚೇತಕ ಡಾ। ಎ.ಎಚ್.ಶಿವಯೋಗಿಸ್ವಾಮಿ ಸೇರಿದಂತೆ ಅನೇಕರು ಆಶೀರ್ವಾದ ಪಡೆದು, ತಮಗೆ ಮೀಸಲಿದ್ದ ಆಸನಗಳಲ್ಲಿ ಆಸೀನರಾದರು.
ಶೃಂಗ ಸಮ್ಮೇಳನದ ಹೆಸರಿನಲ್ಲಿ ಪಂಚ ಪೀಠಾಧೀಶರು ಒಂದೇ ವೇದಿಕೆ ಅಲಂಕರಿಸುವ ಮೂಲಕ ಸಹಸ್ರಾರು ಶಿವಾಚಾರ್ಯ ಸ್ವಾಮೀಜಿಗಳಲ್ಲಿದ್ದ ಗೊಂದಲಗಳಿಗೂ ತೆರೆ ಎಳೆದರು. ಇತ್ತ ವೀರಶೈವ ಲಿಂಗಾಯತ ಸಮಾಜ ಬಾಂಧವರಲ್ಲಿದ್ದ ಅಳುಕು, ಆತಂಕವನ್ನೂ ಪಂಚ ಪೀಠಾಧೀಶರು ನಿವಾರಣೆ ಮಾಡಿ, ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಪಂಚಪೀಠಾಧೀಶರು ತಮ್ಮ ಶಕ್ತಿಯನ್ನು ಧಾರೆ ಎರೆದರು.
ಪಂಚ ಪೀಠಾಧೀಶರನ್ನು ಒಂದೇ ವೇದಿಕೆಯಲ್ಲಿ ನೋಡಬೇಕು, ಭಕ್ತರು ಒಂದೇ ಇದ್ದಾರೆ. ನೀವು ಪಂಚ ಪೀಠಾಧೀಶರು ಒಂದಾಗಿ ಎಂಬುದಾಗಿ ಮೊದಲಿನಿಂದಲೂ ಡಾ। ಶಾಮನೂರು ಶಿವಶಂಕರಪ್ಪ ಹೇಳಿಕೊಂಡೆ ಬಂದಿದ್ದರು. ತಮ್ಮ ಒತ್ತಾಸೆಯಂತೆ ಪಂಚ ಪೀಠಾಧೀಶರನ್ನು ಒಂದೇ ವೇದಿಕೆಯಲ್ಲಿ ಕಂಡ ಶಾಮನೂರು ಸಹ ಒಂದು ಕ್ಷಣ ಆತ್ಮವಿಶ್ವಾಸದ ನಗೆ ಮೂಡಿಸಿದರು. ತಮ್ಮ 94ನೇ ವಯಸ್ಸಿನಲ್ಲೂ ಸಮಾಜದ ಬಗ್ಗೆ ಇರುವ ಬದ್ಧತೆಯಿಂದ ವ್ಹೀಲ್ ಚೇರ್‌ನಲ್ಲೇ ವೇದಿಕೆಯನ್ನೇರಿ, ಪಂಚ ಪೀಠಾಧೀಶರ ಆಶೀರ್ವಾದ ಪಡೆದು, ಸಮ್ಮೇಳನಕ್ಕೂ ಶಾಮನೂರು ಚಾಲನೆ ನೀಡಿದರು.