ಸಾರಾಂಶ
ಉದಯಗಿರಿ ಪೊಲೀಸ್ ಠಾಣೆಯ ಮೇಲಿನ ಕಲ್ಲು ತೂರಾಟದಂತಹ ದಾಂಧಲೆಗೆ ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಬುಲ್ಡೋಜರ್ ಹತ್ತಿಸುವ ಕ್ರಮ ಇದೆ. ಕರ್ನಾಟಕದಲ್ಲೂ ಆ ಪರಿಸ್ಥಿತಿ ಬಂದರೆ ನೋಡೋಣ. ಈಗ ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಇಲ್ಲ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು.
ಮೈಸೂರು : ಉದಯಗಿರಿ ಪೊಲೀಸ್ ಠಾಣೆಯ ಮೇಲಿನ ಕಲ್ಲು ತೂರಾಟದಂತಹ ದಾಂಧಲೆಗೆ ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಬುಲ್ಡೋಜರ್ ಹತ್ತಿಸುವ ಕ್ರಮ ಇದೆ. ಕರ್ನಾಟಕದಲ್ಲೂ ಆ ಪರಿಸ್ಥಿತಿ ಬಂದರೆ ನೋಡೋಣ. ಈಗ ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಇಲ್ಲ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು.
ಕಲ್ಲು ತೂರಾಟ ಪ್ರಕರಣ ಹಿನ್ನೆಲೆಯಲ್ಲಿ ಶುಕ್ರವಾರ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ, ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ, ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ಪೊಲೀಸ್ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಈಗಾಗಲೇ ಸಿಸಿಟಿವಿ ದೃಶ್ಯ ಆಧರಿಸಿ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳುವವರು ಎಷ್ಟೇ ಬಲಾಢ್ಯರಾಗಿದ್ದರೂ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ವ್ಯಕ್ತಿ ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಇದ್ದಾರೆ. ಬೇರೆ ಯಾರಿಗೂ ಅದಕ್ಕೆ ಅವಕಾಶ ಕೊಡಲ್ಲ ಎಂದು ಅವರು ಹೇಳಿದರು.
ಇಂತಹ ಘಟನೆ ವೇಳೆ ಕೇಳಿ ಬರುವ ಹೇಳಿಕೆ ನಿಲ್ಲಿಸಲು ಸಾಧ್ಯವಿಲ್ಲ. ರಾಜಕೀಯ ಹೇಳಿಕೆಗಳಿಂದ ಪೊಲೀಸರ ನೈತಿಕತೆ ಕುಗ್ಗಿಸಲು ಸಾಧ್ಯವಿಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಲು ಯಾರ ಕೈಯಲ್ಲೂ ಆಗಲ್ಲ ಎಂದರು.
ಆರ್‌ಎಸ್ಎಸ್ ಕಾರ್ಯಕರ್ತರು ಗಲಭೆ ಮಾಡಿದ್ದಾರೆ ಎನ್ನುವ ಲಕ್ಷ್ಮಣ್ ಹೇಳಿಕೆ ವಿಚಾರ ಅದು ಅವರಿಗೆ ಬಿಟ್ಟಿದ್ದು. ಅವರ ಹೇಳಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.