ಸಾರಾಂಶ
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರತಿಷ್ಠಿತ ಹೋಟೆಲ್ ರಾಮೇಶ್ವರಂ ಕೆಫೆಯಲ್ಲಿ ಗುರುವಾರ ಬೆಳಿಗ್ಗೆ ತಿಂಡಿಯಲ್ಲಿ ಹುಳ ಪತ್ತೆಯಾಗಿದೆ ಎಂದು ಆರೋಪಿಸಿ ಪ್ರಯಾಣಿಕರೊಬ್ಬರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ದೇವನಹಳ್ಳಿ: ತಾಲ್ಲೂಕಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರತಿಷ್ಠಿತ ಹೋಟೆಲ್ ರಾಮೇಶ್ವರಂ ಕೆಫೆಯಲ್ಲಿ ಗುರುವಾರ ಬೆಳಿಗ್ಗೆ ತಿಂಡಿಯಲ್ಲಿ ಹುಳ ಪತ್ತೆಯಾಗಿದೆ ಎಂದು ಆರೋಪಿಸಿ ಪ್ರಯಾಣಿಕರೊಬ್ಬರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಬೆಳಗ್ಗಿನ ತಿಂಡಿಗಾಗಿ ಪೊಂಗಲ್ ತೆಗೆದುಕೊಂಡಿದ್ದ ಪ್ರಯಾಣಿಕ ಅದರಲ್ಲಿ ಹುಳ ಪತ್ತೆಯಾಗಿದೆ ಎಂದು ದೂರಿದ್ದರು, ಘಟನೆಯಿಂದ ಅಲ್ಲಿನ ಸಿಬ್ಬಂದಿಯೂ ಕ್ಷಮೆಯಾಚಿಸಿ ಅವರ ಬಿಲ್ ಹಣ ₹ 300 ವಾಪಸ್ ನೀಡುವುದರೊಂದಿಗೆ ಉಚಿತವಾಗಿ ತಿಂಡಿಯನ್ನು ನೀಡುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಪ್ರಯಾಣಿಕ ಬರೆದುಕೊಂಡಿದ್ದಾರೆ.
ಘಟನೆ ಕುರಿತು ಸ್ಪಷ್ಟನೆ ನೀಡಿರುವ ದಿ ರಾಮೇಶ್ವರಂ ಕೆಫೆ ವಕ್ತಾರರು, ''ಸುಳ್ಳು ಸುದ್ದಿ ಹಬ್ಬಿಸಿರುವ 7-9 ಜನರ ಗುಂಪು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಡದಂತೆ ಇರಲು ₹ 25 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ, ಇವರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ'' ಎಂದು ತಿಳಿಸಿದ್ದಾರೆ.
ದಿ ರಾಮೇಶ್ವರಂ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್ ''ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ, ಅಲ್ಲಿ ನಿಯಮಿತ ಲೆಕ್ಕಪರಿಶೋಧನೆ ಮತ್ತು ನೈರ್ಮಲ್ಯ ತಪಾಸಣೆಗಳು ಕಡ್ಡಾಯವಾಗಿರುತ್ತವೆ. ಹಣವನ್ನು ಸುಲಿಗೆ ಮಾಡಲು ಮತ್ತು ನಮ್ಮ ಬ್ರ್ಯಾಂಡ್‌ಗೆ ಕಳಂಕ ತರುವ ದುರುದ್ದೇಶಪೂರಿತ ಉದ್ದೇಶದಿಂದ ಕಿಡಿಗೇಡಿಗಳು ಈ ಪ್ರಯತ್ನ ನಡೆಸಿದ್ದಾರೆ'' ಎಂದು ಪ್ರತ್ಯಾರೋಪ ಮಾಡಿದ್ದಾರೆ.