ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಕೊರತೆ ನಗರದಲ್ಲಿ ಶುಕ್ರವಾರವೂ ಮುಂದುವರಿದಿದ್ದು ಹೋಟೆಲ್ ಉದ್ಯಮ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ. ಕೆಲವರು ಪರ್ಯಾಯ ಮಾರ್ಗಗಳತ್ತ ಚಿತ್ತ ಹರಿಸಿದ್ದರೆ, ಇನ್ನು ಕೆಲವರು ಮೆನು ಕಡಿತ, ಪದಾರ್ಥಗಳ ಬೆಲೆ ಏರಿಕೆಗೆ ಮುಂದಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಕೊರತೆ ನಗರದಲ್ಲಿ ಶುಕ್ರವಾರವೂ ಮುಂದುವರಿದಿದ್ದು ಹೋಟೆಲ್ ಉದ್ಯಮ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ. ಕೆಲವರು ಪರ್ಯಾಯ ಮಾರ್ಗಗಳತ್ತ ಚಿತ್ತ ಹರಿಸಿದ್ದರೆ, ಇನ್ನು ಕೆಲವರು ಮೆನು ಕಡಿತ, ಪದಾರ್ಥಗಳ ಬೆಲೆ ಏರಿಕೆಗೆ ಮುಂದಾಗಿದ್ದಾರೆ.ಕೆಲವು ಹೋಟೆಲ್‌ಗಳಲ್ಲಿ ಸಿಲಿಂಡರ್ ಅಭಾವದಿಂದಾಗಿ ಇಡ್ಲಿಗೆ ಚಟ್ನಿ ಮಾತ್ರ ನೀಡುತ್ತಿದ್ದು ಸಾಂಬಾರ್ ಕಡಿತ ಮಾಡಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ಅನಿವಾರ್ಯವಾಗಿ ತಿನಿಸುಗಳ ದರವನ್ನು ಹೆಚ್ಚಳ ಮಾಡಿದ್ದು ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಕಾಫಿ-ಟೀ ದರವನ್ನು ಮಾತ್ರ ಹೆಚ್ಚಳ ಮಾಡಿರುವುದು ಕಂಡುಬಂದಿಲ್ಲ.
ಗೃಹ ಬಳಕೆಯ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಸರಬರಾಜು ಮಾಡಲು ಗ್ಯಾಸ್ ಏಜೆನ್ಸಿಯವರು ಹೆಚ್ಚುವರಿ ಸಿಬ್ಬಂದಿಯ ಮೊರೆ ಹೋಗಿದ್ದಾರೆ. ತಾಂತ್ರಿಕ ಕಾರಣದಿಂದ ಸಿಲಿಂಡರ್ ಬುಕ್ಕಿಂಗ್ ಮಾಡಲು ಸಾಧ್ಯವಾಗದವರು ಖಾಳಿ ಸಿಲಿಂಡರ್ ಸಮೇತ ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತುಕೊಂಡು ಕಾಯುತ್ತಿರುವುದು ಕಂಡುಬಂತು.ಕಲ್ಯಾಣ ಮಂಟಪದಲ್ಲಿ ಹೊಗೆ
ರಾಜಾಜಿನಗರದ ಕೈಗಾರಿಕಾ ಪ್ರದೇಶದ ಪದ್ಮಾವತಿ ಕಲ್ಯಾಣ ಮಂಟಪದ ನಾರಾಯಣ್ ಅವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಅಭಾವದಿಂದಾಗಿ ಜನರು ವಿಧಿಯಿಲ್ಲದೇ ಸೌದೆ ಬಳಸುತ್ತಿದ್ದಾರೆ. ಇದರಿಂದ ಕಲ್ಯಾಣ ಮಂಟಪದಲ್ಲೆಲ್ಲಾ ಹೊಗೆ ತುಂಬಿಕೊಳ್ಳುತ್ತಿದೆ. ಏನು ಮಾಡಲೂ ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಇಪ್ಪತ್ತು-ಇಪ್ಪತ್ತೈದು ಕಲ್ಯಾಣ ಮಂಟಪಗಳಿದ್ದು ಇದು ಕೈಗಾರಿಕಾ ಪ್ರದೇಶ ಎನ್ನುವುದಕ್ಕಿಂತ ಮ್ಯಾರೇಜ್ ಪ್ರದೇಶ ಎಂಬಂತಾಗಿದೆ. ವಿವಾಹ ಸಮಾರಂಭವೊಂದಕ್ಕೆ ಎಂಟರಿಂದ ಹನ್ನೆರಡರವೆಗೂ ಸಿಲಿಂಡರ್ ಅವಶ್ಯಕತೆ ಇರುತ್ತದೆ. ಶುಭ ಕಾರ್ಯ ಕೈಗೊಳ್ಳುವವರಿಗೆ ಸಂಕಷ್ಟ ಉಂಟಾಗುತ್ತಿದೆ ಎಂದು ತಿಳಿಸಿದರು.ಅಕ್ರಮ ಗ್ರಾಸ್ ರೀಫಿಲ್ಲಿಂಗ್ ಸಾಧ್ಯತೆ
ನಗರದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಅಭಾವ ಎಲ್ಲೆಡೆ ತಲೆದೋರಿದ್ದರೂ ಅಡುಗೆ ಅನಿಲ ಸಿಲಿಂಡರ್‌ಗೆ ಅಷ್ಟೇನೂ ತೊಂದರೆಯಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ದಂಧೆ ಮಾಡಲು ಮುಂದಾಗುವ ಸಾಧ್ಯತೆ ಇದ್ದು ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಎಚ್ಚರ ವಹಿಸಬೇಕಿದೆ.ಹೋಟೆಲ್‌ಗಳಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್ ಬಳಸುವುದು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಕೆಲ ವಂಚಕರು, ಗೃಹ ಬಳಕೆಯ ಸಿಲಿಂಡರ್‌ನ ಅನಿಲವನ್ನು ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ಅಕ್ರಮವಾಗಿ ತುಂಬಿ ಮಾರಾಟ ಮಾಡಬಹುದು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಏಕೆಂದರೆ ಕೆಲವೊಮ್ಮೆ ರೀ ಫಿಲ್ಲಿಂಗ್ ಮಾಡುವಾಗ ಸ್ಫೋಟ ಸಂಭವಿಸಿ ಅಕ್ಕಪಕ್ಕದ ಬಿಲ್ಡಿಂಗ್‌ಗಳಲ್ಲಿ ಇರುವವರ ಪ್ರಾಣಕ್ಕೂ ಸಂಚಕಾರ ಉಂಟಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.ಅರಮನೆ ಮೈದಾನಕ್ಕೆ ಸದ್ಯಕ್ಕೆ ತಟ್ಟಿಲ್ಲ ‘ಬಿಸಿ’
ಸದಾ ಒಂದಿಲ್ಲೊಂದು ಕಾರ್ಯಕ್ರಮಗಳಿಂದ ಗಿಜಿಗುಡುವ ಬೆಂಗಳೂರಿನ ಬಳ್ಳಾರಿ ರಸ್ತೆಯ ಬೆಂಗಳೂರು ಅರಮನೆ ಮೈದಾನ ಮತ್ತು ಇಲ್ಲಿನ ಹಾಲ್‌ಗಳಲ್ಲಿ ಮಾರ್ಚ್ ಅಂತ್ಯದೊಳಗೆ ಬೆರಳೆಣಿಕೆಯಷ್ಟು ಕಾರ್ಯಕ್ರಮ ಮಾತ್ರ ನಡೆಯಲಿವೆ. ಇಲ್ಲಿ ಸಮಾರಂಭವೊಂದನ್ನು ಆಯೋಜಿಸಬೇಕು ಎಂದರೆ ಕನಿಷ್ಠ 25 ಸಿಲಿಂಡರ್ ಆದರೂ ಬೇಕು. ಬೆಂಗಳೂರು ಕರಗದ ಬಳಿಕವೇ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿರುವುದರಿಂದ ಇಲ್ಲಿ ಸಿಲಿಂಡರ್ ಬಿಸಿ ಅಷ್ಟಾಗಿ ತಟ್ಟಿಲ್ಲ. ಇದನ್ನು ಇಲ್ಲಿನ ಗೇಟ್ ನಂ.5 ರ ‘ಕಿಂಗ್ಸ್ ಕೋರ್ಟ್’ನಲ್ಲಿ ಬುಕ್ಕಿಂಗ್ ಮಾಡುವ ಸಿಮಿಯೋನ್ ಸ್ಪಷ್ಟಪಡಿಸಿದ್ದಾರೆ.ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವವನ್ನು ಕೆಲವರು ಕೃತಕವಾಗಿ ಸೃಷ್ಟಿಸಿ ಸಂದಿಗ್ಧತೆ ತಂದಿಟ್ಟಿರುವ ಸಂಶಯವಿದೆ. ಸಿಲಿಂಡರ್ ಅಭಾವದಿಂದಾಗಿ ಯಾವ ಸಮಾರಂಭಗಳನ್ನೂ ನಮ್ಮಲ್ಲಿ ರದ್ದು ಮಾಡಿಲ್ಲ.-ಭಾಸ್ಕರ್, ಬಿಲ್ಲವ ಅಸೋಸಿಯೇಷನ್ ಕಾರ್ಯದರ್ಶಿ
