ಸಾರಾಂಶ
ರಾಮನಗರ: ನೇರ ಹಣಾಹಣಿಯಿಂದಾಗಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ ಫಲಿತಾಂಶ ಮಂಗಳವಾರ ಹೊರ ಬೀಳುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ 9 ಮಂದಿ ಅಭ್ಯರ್ಥಿಗಳು ಶಿಕ್ಷಕೇತರರೇ ಆಗಿದ್ದು, ಮತದಾನ ಪ್ರಮಾಣ ಶೇ.86.38 ರಷ್ಟು ಆಗಿರುವುದರಿಂದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.ಫೆ.16 ರಂದು ಮತದಾನ ಮುಗಿದ ಮೂರು ದಿನಗಳ ನಂತರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇದು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ.
ಕಳೆದ ನಾಲ್ಕೈದು ತಿಂಗಳಿಂದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ಟಿಕೆಟ್ ಗಿಟ್ಟಿಸಿ, ಕಾರ್ಯಕರ್ತರು ಹಾಗೂ ಬೆಂಬಲಿಗರ ದಂಡು ಕಟ್ಟಿಕೊಂಡು ಚುನಾವಣೆ ಎದುರಿಸಿರುವ ಅಭ್ಯರ್ಥಿಗಳು ತಮ್ಮೆಲ್ಲ ಸಾಮರ್ಥ್ಯ ಸುರಿದಿದ್ದಾಗಿದೆ. ಅಲ್ಲದೆ, ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷಾ ಸಮಯ ಇದಾಗಿದ್ದರೂ ಶಿಕ್ಷಕರು ತಮ್ಮ ಅಭ್ಯರ್ಥಿ ಪರವಾಗಿ ಭರ್ಜರಿಯಾಗಿಯೇ ಪ್ರಚಾರ ನಡೆಸಿದ್ದರು.ಸೋಲು-ಗೆಲುವಿನ ಲೆಕ್ಕಾಚಾರ:
ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇಂಥವರೇ ನಮ್ಮ ಸೇವೆಗೆ ಯೋಗ್ಯರು ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಿ ಆಗಿದ್ದು, ಮತ ಎಣಿಕೆಯೊಂದೇ ಬಾಕಿ ಉಳಿದಿದೆ. ಎಲ್ಲ ತಂತ್ರ , ಪ್ರತಿತಂತ್ರಗಳನ್ನು ಹೆಣೆದು ಚುನಾವಣೆ ಎದುರಿಸಿರುವ ಬಹುತೇಕ ಅಭ್ಯರ್ಥಿಗಳೀಗ ಸೋಲು - ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.ಕೆಲ ಅಭ್ಯರ್ಥಿಗಳು ಗೆಲುವಿಗಾಗಿ ತಮ್ಮ ತಮ್ಮ ಮನೆ ದೇವರ ಮೊರೆ ಹೋಗಿದ್ದಾರೆ. ಭಗವಂತ ಹೇಗಾದರೂ ಮಾಡಿ ದಡ ಮುಟ್ಟಿಸಪ್ಪಾ ಎಂದು ಮೊರೆ ಇಡುತ್ತಿದ್ದಾರೆ. ಮತ್ತಷ್ಟು ಅಭ್ಯರ್ಥಿಗಳು ಎಂದಿನಂತೆ ತಮ್ಮ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಅದ್ಧೂರಿ ಪ್ರಚಾರ ಮಾಡಿದ್ದ ಶಿಕ್ಷಕರು ಒಂದೆಡೆ ಗುಂಪು ಗುಂಪಾಗಿ ಕುಳಿತುಕೊಂಡು ಚುನಾವಣೆಯಲ್ಲಿ ಗೆಲುವು ಯಾರಿಗೆ, ಮುಖಭಂಗಕ್ಕೊಳಗಾಗುವ ಅಭ್ಯರ್ಥಿಗಳ್ಯಾರು ಎನ್ನುವುದರ ಚರ್ಚೆ ನಡೆಸುತ್ತಿದ್ದಾರೆ.ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು. ಇದೇ ಮೊದಲ ಬಾರಿಗೆ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಆದರೆ, ಉಪಚುನಾವಣೆಯನ್ನು ಆಡಳಿತಾರೂಢ ಕಾಂಗ್ರೆಸ್ ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿತು. ಹೀಗಾಗಿ ಫಲಿತಾಂಶ ಕುತೂಹಲ ಮೂಡಿಸಿದೆ.
ಚುನಾವಣೆಯಲ್ಲಿ ಪ್ರತಿಷ್ಠೆ ಪಣಕ್ಕೆ:ಜೆಡಿಎಸ್‌ನಿಂದ ಸ್ಪರ್ಧಿಸಿ ಸತತವಾಗಿ ಮೂರು ಬಾರಿ ಹಾಗೂ ಬಿಜೆಪಿಯಿಂದ ಒಂದು ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ಕಾಂಗ್ರೆಸ್ ಅಭ್ಯರ್ಥಿಯಾದರು. ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪ್ರಬಲ ಪೈಪೋಟಿವೊಡ್ಡಿದೆ. ಜೆಡಿಎಸ್ ವರಿಷ್ಠರು ಕ್ಷೇತ್ರದಲ್ಲಿ ಪಾರಮ್ಯ ಮುಂದುವರಿಸಲು ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದರು. ಇದಕ್ಕೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಂದಲೂ ಉತ್ತಮ ಸಹಕಾರ ದೊರಕಿತು.
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್, ಶಾಸಕರು ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ,ಮಾಜಿ ಶಾಸಕ ಎ. ಮಂಜುನಾಥ್ ಸೇರಿದಂತೆ ಅನೇಕ ನಾಯಕರು ಪ್ರಚಾರ ನಡೆಸಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ.ಬಿಜೆಪಿ - ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮಾತ್ರವಲ್ಲ, ಮೂರು ಪಕ್ಷಗಳ ನಾಯಕರ ಪಾಲಿಗೂ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇವರಲ್ಲಿ ಯಾರ ಪ್ರಭಾವ ಎಷ್ಟು ಕೆಲಸ ಮಾಡಿದೆ ಎಂಬುದು ಫಲಿತಾಂಶದಂದು ಗೊತ್ತಾಗಲಿದೆ.
ಬಾಕ್ಸ್ .....ಮಹತ್ವದ ಚುನಾವಣೆಲೋಕಸಭಾ ಚುನಾವಣೆ ದೃಷ್ಟಿಯಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ಮಹತ್ವ ಪಡೆದುಕೊಂಡಿದ್ದು, ಅಭ್ಯರ್ಥಿ ಗೆಲುವು ರಾಜಕೀಯ ಪಕ್ಷಕ್ಕೆ ಟಾನಿಕ್ ನೀಡಲಿದೆ. ಜೆಡಿಎಸ್ ಪಕ್ಷವು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿಕೊಂಡ ತರುವಾಯ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ ಫಲಿತಾಂಶ ಉಭಯ ಪಕ್ಷಗಳ ಗೆಳೆತನದ ಮೇಲೂ ಪರಿಣಾಮ ಬೀರಿದರೆ, ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಸಾಕ್ಷಿಯಾಗಲಿದೆ.ಬಾಕ್ಸ್ .......2020ರಲ್ಲಿ ಶೇ. 66.18 ಮತದಾನ
2020ರ ಅಕ್ಟೋಬರ್ ನಲ್ಲಿ ನಡೆದಿದ್ದ ಬೆಂಗಳೂರು ಶಿಕ್ಷಕರ ಚುನಾವಣೆಯಲ್ಲಿ ಶೇ. 66.18ರಷ್ಟು ಮತದಾನ ನಡೆದಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪುಟ್ಟಣ್ಣ 7335 ಮತಗಳನ್ನು ಪಡೆದು ಜೆಡಿಎಸ್ ನ ಎ.ಪಿ. ರಂಗನಾಥ್ ಅವರನ್ನು (5107) 2228 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರವೀಣ್ ಪೀಟರ್ 782 ಮತಗಳನ್ನು ಮಾತ್ರ ಪಡೆದಿದ್ದರು. ಈಗ ಫೆ.16ರ ಉಪಚುನಾವಣೆಯಲ್ಲಿ ಪುರುಷರು - 7128, ಮಹಿಳೆಯರು - 12,024 ಸೇರಿ ಒಟ್ಟು 19,152 ಮತದಾರರು ಇದ್ದರು. ಅದರಲ್ಲಿ 6504 - ಪುರುಷರು, 10,040 ಮಹಿಳೆಯರು ಸೇರಿ ಒಟ್ಟು 16,544 ಮಂದಿ (ಶೇ.86.38) ಮತದಾನ ಮಾಡಿದ್ದಾರೆ.ಬಾಕ್ಸ್ ...........ಕಣದಲ್ಲಿರುವ ಅಭ್ಯರ್ಥಿಗಳು:
ಕಾಂಗ್ರೆಸ್ - ಪುಟ್ಟಣ್ಣ,ಜೆಡಿಎಸ್ - ಬಿಜೆಪಿ - ಎ.ಪಿ.ರಂಗನಾಥ
ಪಕ್ಷೇತರರು - ಕೃಷ್ಣವೇಣಿ, ಬಿ.ನಾರಾಯಣಸ್ವಾಮಿ, ಮಂಜುನಾಥ್ , ಬಿ.ಕೆ.ರಂಗನಾಥ, ಟಿ.ರಂಗನಾಥ, ವೀಣಾ ಸೆರೆವಾ, ಸುನಿಲ್ ಕುಮಾರ್.18.ಕೆಆರ್ ಎಂಎನ್ 8,9.ಜೆಪಿಜಿ8.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್