ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಫೆ. 8ರಂದು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯಲ್ಲಿ ಚಾಲನೆ ನೀಡಲಾಗುತ್ತಿದ್ದು, ಈ ಭಾಗದ ಹಲವು ವರ್ಷಗಳ ರೈತರ ಬೇಡಿಕೆಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ.
ಫಕೃದ್ದೀನ ಎಂ.ಎನ್.
ನವಲಗುಂದ: ಬೆಣ್ಣಿಹಳ್ಳದ ಶಾಶ್ವತ ಪ್ರವಾಹ ತಡೆ ಯೋಜನೆಯಡಿ ₹200 ಕೋಟಿ ಹಾಗೂ ವಿವಿಧ ಇಲಾಖೆಗಳ ₹150 ಕೋಟಿ ಸೇರಿ ಒಟ್ಟು ₹350 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಫೆ. 8ರಂದು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯಲ್ಲಿ ಚಾಲನೆ ನೀಡಲಾಗುತ್ತಿದ್ದು, ಈ ಭಾಗದ ಹಲವು ವರ್ಷಗಳ ರೈತರ ಬೇಡಿಕೆಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ.ಮಳೆಗಾಲದ ಸಂದರ್ಭದಲ್ಲಿ ಶತಮಾನಗಳಿಂದಲೂ ತನ್ನ ಪ್ರವಾಹದಿಂದ ಬಕಾಸುರನಂತೆ ತನ್ನ ವ್ಯಾಪ್ತಿಯ ರೈತರು ಹಾಗೂ ಜನಜೀವನ ಅಸ್ತವ್ಯಸ್ತಗೊಳಿಸುತ್ತ ಬಂದಿದ್ದ ಬೆಣ್ಣಿಹಳ್ಳದ ನಿಯಂತ್ರಣಕ್ಕೆ ಸರ್ಕಾರ ಕೊನೆಗೂ ಯೋಜನೆ ರೂಪಿಸಿದೆ. 2012ರ ಅವಧಿಯಲ್ಲಿದ್ದ ಸರ್ಕಾರ ಕೇಂದ್ರ ಜಲ ಆಯೋಗದ ಸಹಯೋಗದೊಂದಿಗೆ ಡಾ. ಜಿ.ಎಸ್. ಪರಮಶಿವಯ್ಯ ನೇತೃತ್ವದಲ್ಲಿ ಬೆಣ್ಣಿಹಳ್ಳದ ನೀರಿನ ಸದ್ಬಳಕೆ ಹಾಗೂ ಪ್ರವಾಹ ನಿವಾರಣೆಗಾಗಿ ಸಿದ್ಧಪಡಿಸಿದ ಯೋಜನೆಯ ಆಧಾರದ ಮೇಲೆ ಈಗ ಸರ್ಕಾರ ಚಾಲನೆ ನೀಡುತ್ತಿರುವುದು ಧಾರವಾಡ ಹಾಗೂ ಗದಗ ಜಿಲ್ಲೆಯ ರೈತರು ಹಾಗೂ ನಾಗರಿಕರಲ್ಲಿ ಸಂತಸ ಮೂಡಿಸಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಢಶಿ ಗ್ರಾಮದಲ್ಲಿ ಜನ್ಮತಾಳುವ ಈ ಹಳ್ಳವು ಸುಮಾರು 56 ಉಪ ಹಳ್ಳಗಳನ್ನು ತನ್ನೊಡಲಲ್ಲಿ ಸೇರಿಸಿಕೊಂಡು ರೋಣ ತಾಲೂಕಿನ ಮೆಣಸಗಿ ಗ್ರಾಮದ ಹತ್ತಿರ ಇರುವ ಮಲಪ್ರಭಾ ನದಿ ಒಡಲನ್ನು ಸೇರುತ್ತದೆ.ಮಳೆಗಾಲದ ಸಂದರ್ಭದಲ್ಲಂತೂ ನವಲಗುಂದ, ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ತನ್ನ ಪ್ರವಾಹದ ಪ್ರಭಾವದಿಂದ ಸಾವಿರಾರು ಎಕರೆ ಜಮೀನುಗಳಲ್ಲಿ ಬೆಳೆದು ನಿಂತ ಬೆಳೆಗಳನ್ನು ನಾಶಮಾಡುತ್ತಿತ್ತು. ಜತೆಗೆ ಪ್ರವಾಹದ ನೀರು ಹರಿದು ಹಲವಾರು ಗ್ರಾಮಗಳು ನೀರಲ್ಲಿ ಮುಳುಗುವಂತೆ ಮಾಡಿ ಸಾವಿರಾರು ಜನರು ನಿರಾಶ್ರಿತರಾಗುವಂತೆ ಮಾಡುತ್ತಿತ್ತು. ಈ ಸಮಸ್ಯೆ ಪರಿಹರಿಸುವುದಕ್ಕಾಗಿ ಪರಮಶಿವಯ್ಯನವರ ವರದಿಯನ್ನು ಅಸ್ತ್ರವನ್ನಾಗಿಸಿದ ಸರ್ಕಾರ ₹1610 ಕೋಟಿಗಳ ಯೋಜನೆಯನ್ನು ರೂಪಿಸಿ ಪ್ರಸ್ತುತ ₹200 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡುತ್ತಿದೆ.
ನವಲಗುಂದ ತಾಲೂಕಿನ ಶ್ರೀಕ್ಷೇತ್ರ ಯಮನೂರಿಗೆ ಬರುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಗ್ರಾಮದಲ್ಲಿ ಹರಿಯುವ ಬೆಣ್ಣಿಹಳ್ಳದಲ್ಲಿ 1.5 ಕಿಮೀ ಕಾಂಕ್ರೀಟ್ ನಿರ್ಮಿತ ಸ್ನಾನಘಟ್ಟವು ನಿರ್ಮಾಣಗೊಳ್ಳಲಿದೆ. ಬೆಣ್ಣಿಹಳ್ಳದ ಒಟ್ಟು 5048 ಚದರ್ ಕಿಮೀ ಜಲಾನಯದುದ್ದಕ್ಕೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಲ್ಲಲ್ಲಿ ಹಳ್ಳವನ್ನು ಹೂಳೆತ್ತುವುದು. ಅಗತ್ಯವಿದ್ದಲ್ಲಿ ಕಾಂಕ್ರಿಟ್ ತಡೆಗೋಡೆ, 7 ಸ್ಥಳಗಳಲ್ಲಿ ರಸ್ತೆ ಸೇತುವೆ ನಿರ್ಮಾಣ, ಜತೆಗೆ ಹೊಲಕ್ಕೆ ನುಗ್ಗುವ ನೀರನ್ನು ಹಳ್ಳಕ್ಕೆ ತಿರುಗಿಸುವುದು ಸೇರಿದಂತೆ 2 ಬೃಹತ್ ಜಲಾಗಾರಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಬೆಣ್ಣಿಹಳ್ಳದ ವ್ಯಾಪ್ತಿಯಲ್ಲಿ ಬರುವ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ಜಮೀನುಗಳು ಪ್ರವಾಹದಿಂದ ಪಾರಾಗಿ ರೈತರಿಗೆ ಅನುಕೂಲವಾಗಲಿದೆ.ಬೇರೆ ಬೇರೆ ಇಲಾಖೆ ಕೆಲಸ:
ಇನ್ನು ನವಲಗುಂದ ಪಟ್ಟಣದಲ್ಲಿ ₹46.13 ಕೋಟಿ ವೆಚ್ಚದ ಒಳಚರಂಡಿ, ಅಣ್ಣಿಗೇರಿಯಲ್ಲಿ ರಸ್ತೆ, ಪುರಸಭೆ ನೂತನ ಕಟ್ಟಡ ₹10.50 ಕೋಟಿ, ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ₹20.75 ಕೋಟಿ, ದೇವಸ್ಥಾನಗಳ ಅಭಿವೃದ್ಧಿ ₹5 ಕೋಟಿ, ವಿವಿಧ ಸಮುದಾಯ ಭವನಗಳ ನಿರ್ಮಾಣ ₹2.45 ಕೋಟಿ, ಶಾದಿಮಹಲ್, ಮಸೀದಿ ಕಟ್ಟಡಗಳ ನಿರ್ಮಾಣ ₹3.5 ಕೋಟಿ, ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.