ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಮಹದಾಯಿ, ಕಳಸಾ- ಬಂಡೂರಿ ಯೋಜನೆ ಇಂದು ಪ್ರಾರಂಭವಾಗುತ್ತದೆ, ನಾಳೆ ಪ್ರಾರಂಭವಾಗುತ್ತದೆ ಎಂಬುದೇ ಆಗಿದೆ. ಆದರೆ, ಈ ವರೆಗೂ ಯೋಜನೆಗೆ ಚಾಲನೆ ನೀಡಲು ಸರ್ಕಾರಕ್ಕೆ ಆಗುತ್ತಿಲ್ಲ. ಈ ನೀರಿನ ಬೇಡಿಕೆ ರಾಜಕಾರಣದಿಂದ ಮೂಲೆ ಸೇರುತ್ತಿದೆಯೇ ಎಂಬ ಶಂಕೆ ಮುಡುತ್ತಿದೆ. ಬೆಣ್ಣಿಹಳ್ಳದ ಶಾಶ್ವತ ಯೋಜನೆಗಾದರೂ ಚಾಲನೆ ನೀಡಲು ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಲಿ ಎಂಬುದು ರೈತ ಸಮುದಾಯದ ಕೂಗು.ಮಹದಾಯಿ ನ್ಯಾಯಾಧೀಕರಣ ತೀರ್ಪು ನೀಡಿ ಆಗಲೇ ಆರು ವರ್ಷ ಕಳೆದಿದೆ. ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿ, ರಾಜ್ಯ ಸರ್ಕಾರದ ಡಿಪಿಆರ್‌ಗೂ ಕೇಂದ್ರ ಒಪ್ಪಿಗೆ ನೀಡಿದ್ದು ಆಗಿದೆ. ವಿಜಯೋತ್ಸವ ಕೂಡ ಆಚರಿಸಲಾಗಿದೆ. ರಾಜ್ಯ ಸರ್ಕಾರ ಇದಕ್ಕಾಗಿ ₹1677 ಕೋಟಿ ಮೀಸಲಿಟ್ಟು ಕುಳಿತಿದೆ. ಟೆಂಡರ್ ಕೂಡ ಕರೆದಿದೆ. ಇದೀಗ ವನ್ಯಜೀವಿ ಮಂಡಳಿ ಕೊಕ್ಕೆ ಹಾಕಿ ಕುಳಿತಿದೆ. ಹಾಗೆ ನೋಡಿದರೆ ವನ್ಯಜೀವಿಗೆ ಸಂಬಂಧಪಟ್ಟಂತೆ ಕೋರ್ಟ್‌ನಲ್ಲಿ ಯಾವುದೇ ಕೇಸ್ ಇಲ್ಲ. ವಿನಾಕಾರಣ ವಿಳಂಬ ಮಾಡುವ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ರಾಜಕಾರಣ ಅಡಗಿದೆ. ರಾಜ್ಯ ಸರ್ಕಾರ ಏನು ಮಾಡಲು ಸಾಧ್ಯವಾಗುತ್ತಿಲ್ಲ.
ಬೆಣ್ಣಿಹಳ್ಳ- ತುಪರಿಹಳ್ಳಪ್ರತಿವರ್ಷ ಬೆಂಬಿಡದ ಭೂತದಂತೆ ಜನರನ್ನು ಹೈರಾಣು ಮಾಡುವ ಬೆಣ್ಣಿಹಳ್ಳದ ಪ್ರವಾಹಕ್ಕೆ ಶಾಶ್ವತ ಪರಿಹಾರ ಸಿಗಬೇಕಿದೆ. ಬೆಣ್ಣಿಹಳ್ಳದ ಯೋಜನೆಯ ಡಿಪಿಆರ್ ಸಿದ್ಧವಾಗಿದೆ. ಏನೇನು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂಬುದನ್ನು ನಿರ್ಧರಿಸಿಯೂ ಆಗಿದೆ. ಕರ್ನಾಟಕ ನೀರಾವರಿ ನಿಗಮವೂ ಇದಕ್ಕೆ ಒಪ್ಪಿಗೆಯನ್ನೂ ನೀಡಿದೆ. ಸರ್ಕಾರ ಹಸಿರು ನಿಶಾನೆ ತೋರಿಸಿ ಹಣ ಮೀಸಲಿಟ್ಟು ಕಾಮಗಾರಿಗೆ ಚಾಲನೆ ನೀಡುವುದೊಂದೇ ಬಾಕಿ. ₹1352 ಕೋಟಿ ವೆಚ್ಚದ ಯೋಜನೆಗೆ ನಾಲ್ಕು ವರ್ಷವಾದರೂ ಈವರೆಗೂ ಯಾವ ಸರ್ಕಾರವೂ ಒಪ್ಪಿಗೆ ನೀಡಲಿಲ್ಲ. ಆ ಕೆಲಸವಾದರೆ ಬರೋಬ್ಬರಿ 14 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದೆ.
ಇನ್ನು ತುಪರಿ ಹಳ್ಳದ ಯೋಜನೆಯ ಕೆಲಸವೇನೋ ಪ್ರಾರಂಭವಾಗಿದೆ. ₹312 ಕೋಟಿ ಯೋಜನೆಗೆ ಬಿಜೆಪಿ ಸರ್ಕಾರ ₹150 ಕೋಟಿ ಬಿಡುಗಡೆ ಮಾಡಿತ್ತು. ಅದರ ಕೆಲಸ ಆಮೆಗತಿಯಲ್ಲಿ ಸಾಗಿದೆ ಎನ್ನುವುದಕ್ಕಿಂತ ಅಕ್ಷರಶಃ ಸ್ಥಗಿತವೇ ಆಗಿದೆ. ಇನ್ನು ಎರಡನೆಯ ಹಂತದ ₹162 ಕೋಟಿ ಬಿಡುಗಡೆ ಮಾಡಬೇಕು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು. ಆ ಕೆಲಸವನ್ನು ಈ ಸರ್ಕಾರ ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂಬುದು ರೈತರ ನಿರೀಕ್ಷೆ.ಈ ಎರಡೂ ಯೋಜನೆಗಳಾದರೆ 14 ಟಿಎಂಸಿಗಿಂತ ಅಧಿಕ ನೀರನ್ನು ಕೃಷಿಗೆ ಬಳಸಿಕೊಳ್ಳಬಹುದಾಗಿದೆ. ಜತೆಗೆ ನವಲಗುಂದ, ನರಗುಂದ, ಬಾಗಲಕೋಟೆಯ ಕೆಲ ತಾಲೂಕುಗಳಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಅನುಭವಿಸುವ ಪ್ರವಾಹಕ್ಕೆ ಶಾಶ್ವತ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಚಾಲನೆ ನೀಡಬೇಕು ಎಂಬುದು ರೈತರ ಒಕ್ಕೊರಲಿನ ಆಗ್ರಹ.
ಈ ಕುರಿತು ಪ್ರತಿಕ್ರಿಯಿಸಿರುವ ರೈತರಾದ ಮಲ್ಲಪ್ಪ ಹುಲ್ಜತ್ತಿ, ಸರ್ಕಾರ ಬೆಣ್ಣಿಹಳ್ಳದ ಯೋಜನೆಗೆ ಒಪ್ಪಿಗೆ ನೀಡಿ ಈ ಬಜೆಟ್‌ನಲ್ಲಿ ಕನಿಷ್ಠವೆಂದರೂ ₹500 ಕೋಟಿ, ತುಪರಿಹಳ್ಳದ 2ನೆಯ ಹಂತದ ಕಾಮಗಾರಿಗೆ ₹162 ಕೋಟಿ ಮೀಸಲಿಡಬೇಕು. ಮಹದಾಯಿಗೆ ಎದುರಾಗಿರುವ ಸಂಕಷ್ಟವನ್ನು ಯಾವ ರೀತಿ ನಿಭಾಯಿಸಬೇಕು ಎಂಬುದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.