ಶಾಲೆಗಳನ್ನು ಅಲಂಕರಿಸಿ, ಮಕ್ಕಳನ್ನು ಸ್ವಾಗತಿಸಲು ಬಿಇಒ ಸಿ.ಕಾಳೀರಯ್ಯ ಸೂಚನೆ

| Published : May 31 2024, 02:15 AM IST

ಶಾಲೆಗಳನ್ನು ಅಲಂಕರಿಸಿ, ಮಕ್ಕಳನ್ನು ಸ್ವಾಗತಿಸಲು ಬಿಇಒ ಸಿ.ಕಾಳೀರಯ್ಯ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೇ 31ರಂದು ಮಕ್ಕಳ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಶಾಲೆ ಆರಂಭಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಾಲೆಗೆ ಸೇರಲು ಅರ್ಹರಿರುವ ಎಲ್ಲಾ ಮಕ್ಕಳನ್ನು ಆಯಾ ಗ್ರಾಮಗಳ ಸಮೀಪದ ಶಾಲೆಗಳಿಗೆ ಕಡ್ಡಾಯವಾಗಿ ದಾಖಲು ಮಾಡಲು ಶಿಕ್ಷಣ ಇಲಾಖೆಯಿಂದ ಮನವಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಬೇಸಿಗೆ ರಜೆ ಮುಗಿದು ಮೇ 31ರಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಹಬ್ಬದ ರೀತಿಯಲ್ಲಿ ಅಲಂಕರಿಸುವ ಜೊತೆಗೆ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಕಾಳಿರಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ಶಾಲೆಗೆ ಬುಧವಾರ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಸಿದ್ಧತೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು ಸ್ವಚ್ಛತಾ ಕಾರ್ಯ ಹಾಗೂ ಸುರಕ್ಷತಾ ಕ್ರಮ ಪರಿಶೀಲಿಸಬೇಕು ಎಂದು ಆದೇಶ ನೀಡಲಾಗಿದೆ ಎಂದರು.

ತರಗತಿಗಳ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್, ಅಡುಗೆ ಕೋಣೆ, ಆಹಾರದ ಧಾನ್ಯಗಳ ಸ್ವಚ್ಛತೆ ಮತ್ತು ಅಡುಗೆ ತಯಾರಿಕಾ ಪರಿಕರಗಳನ್ನು ಸ್ವಚ್ಛಗೊಳಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಶಾಲೆಗಳ ಪ್ರಾರಂಭದ ಪ್ರಯುಕ್ತ ಶಾಲೆಗಳ ಆವರಣವನ್ನು ತಳಿರು ತೋರಣಗಳಿಂದ ಅಲಂಕರಿಸಿ ರಂಗೋಲಿ ಇಟ್ಟು ಮಕ್ಕಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸುವ ಜೊತೆಗೆ ಮಧ್ಯಾಹ್ನದ ಬಿಸಿಯೂಟ ದೊಂದಿಗೆ ಸಿಹಿ ವಿತರಿಸಲು ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ ಎಂದರು.

ಮೇ 31ರಂದು ಮಕ್ಕಳ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಶಾಲೆ ಆರಂಭಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಾಲೆಗೆ ಸೇರಲು ಅರ್ಹರಿರುವ ಎಲ್ಲಾ ಮಕ್ಕಳನ್ನು ಆಯಾ ಗ್ರಾಮಗಳ ಸಮೀಪದ ಶಾಲೆಗಳಿಗೆ ಕಡ್ಡಾಯವಾಗಿ ದಾಖಲು ಮಾಡಲು ಶಿಕ್ಷಣ ಇಲಾಖೆಯಿಂದ ಮನವಿ ಮಾಡಲಾಗಿದೆ ಎಂದರು.

ಜೂನ್‌ 1ರಿಂದ ಆಯಾ ಶಾಲೆಗಳ ವ್ಯಾಪ್ತಿಯಲ್ಲಿ ದಾಖಲಾತಿ ಆಂದೋಲನ ನಡೆಸುವುದರೊಂದಿಗೆ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆ 0.1 ರಲ್ಲಿ ಅನುತ್ತೀರ್ಣಗೊಂಡ ಹಾಗೂ ಸಿ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ಕೇಂದ್ರಗಳು ಮೇ 29ರಿಂದ ಜೂನ್ 13 ರವರೆಗೆ ಆಯಾ ಶಾಲೆಗಳಲ್ಲಿ ವಿಶೇಷ ಬೋಧನಾ ತರಗತಿಗಳನ್ನು ನಡೆಸಲಾಗುವುದು. ಬೇರೆ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಸ್ತುತ ವಾಸವಿರುವ ಸ್ಥಳಕ್ಕೆ ಸಮೀಪವಿರುವ ಪ್ರೌಢಶಾಲೆ ಹಾಜರಾಗಿ ಬೋಧನಾ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು.