ಬೆಳಗಾವಿ ವಿಭಾಗ ವ್ಯಾಪ್ತಿಯ ಎಲ್ಲ ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಪಾರದರ್ಶಕ ಮತ್ತು ತ್ವರಿತಗತಿಯ ಕಡತ ವಿಲೇವಾರಿ ಮತ್ತು ಆಡಳಿತದ ಕಾರ್ಯನಿರ್ವಹಣೆಗೆ ಪೂರಕವಾಗಿ ಇ-ಆಫೀಸ್ ಕಡ್ಡಾಯ ಅನುಷ್ಠಾನಗೊಳಿಲು ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೂಚಿಸಿದರು.
ಧಾರವಾಡ:
ಬೆಳಗಾವಿ ವಿಭಾಗ ವ್ಯಾಪ್ತಿಯ ಎಲ್ಲ ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಪಾರದರ್ಶಕ ಮತ್ತು ತ್ವರಿತಗತಿಯ ಕಡತ ವಿಲೇವಾರಿ ಮತ್ತು ಆಡಳಿತದ ಕಾರ್ಯನಿರ್ವಹಣೆಗೆ ಪೂರಕವಾಗಿ ಇ-ಆಫೀಸ್ ಕಡ್ಡಾಯ ಅನುಷ್ಠಾನಗೊಳಿಲು ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೂಚಿಸಿದರು.ಇಲ್ಲಿಯ ಡಯಟ್ ಸಮಾವೇಶ ಭವನದಲ್ಲಿ ಜರುಗಿದ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಒಂಭತ್ತು ಜಿಲ್ಲೆಗಳ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬೆಳಗಾವಿ ವಿಭಾಗದ 59 ತಾಲೂಕುಗಳ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 3ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಜನವರಿ -2026ರ ಅಂತ್ಯದೊಳಗಾಗಿ ಮೂಲಭೂತ ಭಾಷಾಜ್ಞಾನ ಮತ್ತು ಸಂಖ್ಯಾಜ್ಞಾನ ಗಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಗುರಿ ನೀಡಲಾಯಿತು.
ಇಲಾಖೆಯ ಮಹತ್ವದ ಕಾರ್ಯಕ್ರಮಗಳಾದ ಎಫ್.ಎಲ್.ಎನ್, ಎಲ್.ಬಿ.ಎನಿಖರ ಅನುಷ್ಠಾನ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸುವಂತೆ ಮಾಡಲು 29 ಅಂಶಗಳ ಕಾರ್ಯಕ್ರಮ ಅನುಷ್ಠಾನ ಹಾಗೂ ಮಿಷನ್ 40+ ಗುರಿಯೊಂದಿಗೆ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಮತ್ತು ವಿಷಯ ಶಿಕ್ಷಕರು ಕಾರ್ಯನಿರ್ವಹಿಸುವಂತೆ ಬಿನೊಓ ಮತ್ತು ಡಿಡಿಪಿಐ ಅನುಪಾಲನೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.ಮಧ್ಯಾಹ್ನ ಉಪಾಹಾರ:
ಶಾಲಾ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನ ಉಪಾಹಾರವು ಸಂಪೂರ್ಣ ಶುಚಿ-ರುಚಿಯಾಗಿರುವಂತೆ ಎಲ್ಲರೂ ಗಮನಹರಿಸಬೇಕು. ಜತೆಗೆ ಆಹಾರ ಧಾನ್ಯಗಳ ಸುರಕ್ಷತೆ ಬಗ್ಗೆ ಗಮನಹರಿಸುವಂತೆ ಸೂಚಿಸಿ, ಈ ಕುರಿತು ಪ್ರಮಾದಗಳು ಕಂಡು ಬಂದರೆ ತಪ್ಪಿತಸ್ಥರಿಗೆ ಕಠಿಣ ಶಿಸ್ತು ಕ್ರಮಕೈಗೊಳ್ಳುವಲ್ಲಿ ಹಿಂದೇಟು ಹಾಕುವುದಿಲ್ಲ ಎಂದು ಡಾ. ಈಶ್ವರ ಉಳ್ಳಾಗಡ್ಡಿ ಎಚ್ಚರಿಸಿದರು.ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ನಾಯ್ಕ, ಸಹನಿರ್ದೇಶಕಿ ಜಯಶ್ರೀ ಕಾರೇಕರ, ಉಪನಿರ್ದೇಶಕ ಗಿರೀಶ ಪದಕಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಜಾತಾ ತಿಮ್ಮಾಪೂರ ಇದ್ದರು. ಬೆಳಗಾವಿ, ವಿಜಯಪೂರ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ಶಿರಸಿ ಮತ್ತು ಚಿಕ್ಕೋಡಿ ಜಿಲ್ಲೆಗಳ 59 ಕ್ಷೇತ್ರ ಶಿಕ್ಷಣಾಧಿಕಾರಿಗಳು, 9 ಜಿಲ್ಲೆಗಳ ಡಿಡಿಪಿಐ ಹಾಗೂ ಡಯಟ್ ಪ್ರಾಚಾರ್ಯರು, ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳು ಸೇರಿದಂತೆ ವಿವಿಧ ಹಂತಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.