ಥಿಯೇಟರ್‌ಗೆ ಮಾಂಟೇಜ್ ಶೈಲಿ ತಂದ ಬರ್ಟೋಲ್ಟ್ ಬ್ರೆಕ್ಟ್

| Published : Mar 30 2024, 12:50 AM IST

ಥಿಯೇಟರ್‌ಗೆ ಮಾಂಟೇಜ್ ಶೈಲಿ ತಂದ ಬರ್ಟೋಲ್ಟ್ ಬ್ರೆಕ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಹೆಯ ಗಾಂಧೀಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಇದರ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನದಂದು ಬರ್ಟೋಲ್ಟ್ ಬ್ರೆಕ್ಟ್ ಕುರಿತು ಹಿರಿಯ ಬರಹಗಾರ ಪ್ರೊ. ಕೆ.ಫಣಿರಾಜ್ ಉಪನ್ಯಾಸವನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಖ್ಯಾತ ಜರ್ಮನ್ ನಾಟಕಕಾರ ಕವಿ ಬರ್ಟೋಲ್ಟ್ ಬ್ರೆಕ್ಟ್ ಅವರು ಸಾಮಾಜಿಕ ಮಾನವತಾವಾದ, ದ್ವಂದ್ವಾತ್ಮಕ ತಾತ್ವಿಕತೆ ಮತ್ತು ಶ್ರಮದ ಮೌಲ್ಯಗಳನ್ನು ತಮ್ಮ ಜೀವನ, ಕವಿತೆ, ನಾಟಕಗಳು ಮತ್ತು ವಿಚಾರಗಳಲ್ಲಿ ಒತ್ತಿ ಹೇಳಿದ್ದಾರೆ ಎಂದು ಹಿರಿಯ ಬರಹಗಾರ ಪ್ರೊ. ಕೆ.ಫಣಿರಾಜ್ ವಾದಿಸಿದರು.

ಅವರು ಮಾಹೆಯ ಗಾಂಧೀಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಇದರ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನದಂದು ಬರ್ಟೋಲ್ಟ್ ಬ್ರೆಕ್ಟ್ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

20ನೇ ಶತಮಾನದ ಮೊದಲಾರ್ಧದಲ್ಲಿ ರಾಜಕೀಯವಾಗಿ ಮತ್ತು ಕಲಾತ್ಮಕವಾಗಿ ಮಹತ್ವದ ಸಮಯದಲ್ಲಿ ವೀಮರ್ ರಿಪಬ್ಲಿಕ್ (ಜರ್ಮನಿ)ನಲ್ಲಿ ಬರ್ಟೋಲ್ಟ್ ಬ್ರೆಕ್ಟ್ ಜೀವಿಸಿದ್ದರು ಮತ್ತು ಅವರು ತಮ್ಮ ಕಾಲದ ಪ್ರಗತಿಪರ ಚಳುವಳಿಗಳಿಂದ ಪ್ರಭಾವಿತರಾಗಿದ್ದರು ಎಂದು ಪ್ರೊ. ಫಣಿರಾಜ್ ಹೇಳಿದರು.

ಅವರು ನಿರ್ದಿಷ್ಟವಾಗಿ ದಾಡಾಯಿಸಂ ಮತ್ತು ಮಾರ್ಕ್ಸ್‌ವಾದ, ಕಾರ್ಲ್ ವ್ಯಾಲೆಂಟೈನ್ ಮತ್ತು ಚಾರ್ಲಿ ಚಾಪ್ಲಿನ್, ಗೋಲ್ಡ್ ರಶ್ ಮತ್ತು ಬ್ಯಾಟಲ್‌ ಶಿಪ್ ಪೊಟೆಮ್‌ ಕಿನ್‌ ನಂತಹ ಚಲನಚಿತ್ರಗಳಿಂದ ಪ್ರಭಾವಿತರಾಗಿದ್ದರು. ಅವರು ಚಲನಚಿತ್ರ ನಿರ್ಮಾಣದ ‘ಮಾಂಟೇಜ್’ ಶೈಲಿಯನ್ನು ಥಿಯೇಟರ್‌ಗೆ ಅಳವಡಿಸಿಕೊಂಡರು.

ಸಾಂಪ್ರದಾಯಿಕ ಅರಿಸ್ಟಾಟಿಲಿಯನ್ ನಾಟಕೀಯ ರಚನೆಯನ್ನು ಮುರಿದು ಅವರು ‘ಮಾಂಟೇಜ್’ ಶೈಲಿಯನ್ನು ‘ಎಪಿಕ್’ ರಂಗಭೂಮಿಯಾಗಿ ಅಭಿವೃದ್ಧಿಪಡಿಸಿದರು. ಬ್ರೆಕ್ಟ್‌ನ ಕವಿತೆಗಳು ಮತ್ತು ನಾಟಕಗಳ (ಗೆಲಿಲಿಯೋ ಮತ್ತು ಮದರ್ ಕರೇಜ್‌ನಂತಹ) ಅನೇಕ ಉದಾಹರಣೆಗಳನ್ನು ಉಲ್ಲೇಖಿಸುತ್ತಾ, ಪ್ರೊ.ಫಣಿರಾಜ್ ಅವರ ಸಾಮಾಜಿಕ ಮಾನವತಾವಾದವನ್ನು, ದ್ವಂದ್ವಾತ್ಮಕ ಚಲನೆಯನ್ನು ಪ್ರಗತಿಯ ಮಾರ್ಗ ಮತ್ತು ಶ್ರಮದ ಮೌಲ್ಯವನ್ನು ಜೀವನದ ಮೂಲ ಮೌಲ್ಯವೆಂದು ವ್ಯಾಖ್ಯಾನಿಸಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅವರು ಸಮಕಾಲೀನ ಕಾಲದಲ್ಲಿ ಬ್ರೆಕ್ಟ್ ಹೆಚ್ಚು ಮಹತ್ವದ್ದಾಗಿದ್ದಾರೆ ಎಂದು ಹೇಳಿದರು. ಅಪರ್ಣಾ ಪರಮೇಶ್ವರನ್ ಕಾರ್ಯಕ್ರಮ ನಿರೂಪಿಸಿದರು.