ಸಾರಾಂಶ
ಮಾಜಿ ನೌಕರನ ಪಿಂಚಣಿ ಮಂಜೂರಿಗೆ ಲಂಚ ಕೇಳಿದ ಬೆಸ್ಕಾಂ ಲೆಕ್ಕಾಧಿಕಾರಿಯ ಅಮಾನತು ಮಾಡಲು ಡಿ.ಕೆ.ಶಿವಕುಮಾರ್ ನಿರ್ದೇಶನ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಷ್ಕೃತ ಪಿಂಚಣಿ ಮೊತ್ತ ಬಿಡುಗಡೆಗೆ ಬೆಸ್ಕಾಂ ಕೆಂಗೇರಿ ವಿಭಾಗದ ಲೆಕ್ಕಾಧಿಕಾರಿ ಲಂಚ ಕೇಳುತ್ತಿರುವ ಆರೋಪ ಮಾಡಿದ ವೃದ್ಧ ದಂಪನಿ ಅಳಲು ಆಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಥಳದಲ್ಲೇ ಅಧಿಕಾರಿಯ ಅಮಾನತಿಗೆ ಸೂಚಿಸಿದರು.ಶೇಷಾದ್ರಿಪುರದ ಶಿರೂರು ಮೈದಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ 5ನೇ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕರಿಸುವ ವೇಳೆ, ಲೆಕ್ಕಾಧಿಕಾರಿ ಗಿರೀಶ್ ಎಂಬುವವರು ₹50 ಸಾವಿರ ಲಂಚ ಕೇಳಿದ್ದಾರೆ ಎಂದು ಎಸ್.ಎಂ.ಗೋವಿಂದಪ್ಪ ದೂರಿದರು. ಬೆಸ್ಕಾಂನಲ್ಲಿ ಪ್ರಥಮ ದರ್ಜೆ ಕ್ಲರ್ಕ್ ಆಗಿ ಸೇವೆ ಸಲ್ಲಿಸಿ 2007ರಲ್ಲಿ ನಿವೃತ್ತಿ ಹೊಂದಿದ್ದೇನೆ. ಹಲವು ವರ್ಷಗಳಿಂದ ಪಿಂಚಣಿಗೆ ಅಲೆದು ಸುಸ್ತಾಗಿದ್ದೇನೆ. ಆದರೆ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲವೇ ದಿನಗಳಲ್ಲಿ ನಿಮಗೆ ನಿವೃತ್ತಿ ವೇತನ ದೊರೆಯುತ್ತದೆ ಎಂದು ಭರವಸೆ ಡಿಸಿಎಂ, ಅಧಿಕಾರಿ ಅಮಾನತಿಗೆ ಸೂಚಿಸಿದರು.ಮಲ್ಲೇಶ್ವರಂನ ಪಿ.ರಂಜಾನಾ ಮನವಿ ನೀಡಿ, ಸಹಾಯಕ ಪ್ರಾಧ್ಯಾಪಕಿಯಾಗಿ 2017ರಲ್ಲಿ ಉದ್ಯೋಗ ಸಿಕ್ಕಿದರೂ ತಾಂತ್ರಿಕ ಕಾರಣ ಹೇಳಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸಮಸ್ಯೆ ಹೇಳಿಕೊಂಡರು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ, ನಿರುದ್ಯೋಗ ಸಮಸ್ಯೆ ನಿವಾರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳು ನಮಗೆ ವ್ಯಾಪಾರ ಮಾಡಲು ಸ್ಥಳವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಜನತೆಗೆ ಹಾಗೂ ನಿಮಗೆ ಇಬ್ಬರಿಗೂ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಅವರಿಗೆ ತಿಳಿಸಿದರು.ಗಾಂಧೀಜಿ ಬಂದಿದ್ದ ಶಾಲೆ ಅಭಿವೃದ್ಧಿ
ಚಾಮರಾಜಪೇಟೆಯ ಪ್ರಭಾಕರ್ ಮನವಿ ನೀಡಿ, ಭಕ್ಷಿ ಗಾರ್ಡನ್‌ನಲ್ಲಿ ಮಹಾತ್ಮಾ ಗಾಂಧೀಜಿ ಅವರು ಭೇಟಿ ನೀಡಿದ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಲ್ಲಿದೆ. ಅದನ್ನು ನವೀಕರಿಸಿ ಅಭಿವೃದ್ಧಿ ಮಾಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದರು.