ಮಾರುಕೇರಿ ಸೊಸೈಟಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ

| Published : Nov 18 2024, 12:01 AM IST

ಮಾರುಕೇರಿ ಸೊಸೈಟಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿಯ ಕೆನರಾ ಡಿಸಿಸಿ ಬ್ಯಾಂಕಿನಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ, ಉಪಾಧ್ಯಕ್ಷ ಮೋಹನದಾಸ ನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ ಮತ್ತಿತರ ನಿರ್ದೇಶಕರು, ಸಂಘದ ಅಧ್ಯಕ್ಷ ಶಿವಾನಂದ ಹೆಬ್ಬಾರ ಮತ್ತು ಮುಖ್ಯಕಾರ್ಯನಿರ್ವಾಹಕ ಶ್ರೀಧರ ಹೆಬ್ಬಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಭಟ್ಕಳ: ತಾಲೂಕಿನ ಮಾರುಕೇರಿಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಉತ್ತಮ ಕಾರ್ಯನಿರ್ವಹಣೆಗಾಗಿ ಪ್ರತಿಷ್ಠಿತ ಕೆನರಾ ಡಿಸಿಸಿ ಬ್ಯಾಂಕಿನಿಂದ ಉತ್ತಮ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ.

ಶಿರಸಿಯ ಕೆನರಾ ಡಿಸಿಸಿ ಬ್ಯಾಂಕಿನಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ, ಉಪಾಧ್ಯಕ್ಷ ಮೋಹನದಾಸ ನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ ಮತ್ತಿತರ ನಿರ್ದೇಶಕರು, ಸಂಘದ ಅಧ್ಯಕ್ಷ ಶಿವಾನಂದ ಹೆಬ್ಬಾರ ಮತ್ತು ಮುಖ್ಯಕಾರ್ಯನಿರ್ವಾಹಕ ಶ್ರೀಧರ ಹೆಬ್ಬಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾರುಕೇರಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಉದಯಕುಮಾರ ಜೈನ್, ನಿರ್ದೇಶಕರಾದ ಎಂ.ಡಿ. ನಾಯ್ಕ, ರಾಘವೇಂದ್ರ ಹೆಬ್ಬಾರ, ಮಂಜುನಾಥ ಮೊಗೇರ, ಸಂಘದ ಹಾಡವಳ್ಳಿ ಶಾಖೆಯ ವ್ಯವಸ್ಥಾಪಕ ನಾಗರಾಜ ಹೆಬ್ಬಾರ ಇದ್ದರು.

ಬೇಡಿಕೆಗಳ ಈಡೇರಿಕೆಗೆಗಾಗಿ 20ರಂದು ರಸ್ತೆತಡೆ

ಯಲ್ಲಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಮುಂದೆ ರೈತರು ನ. ೨೦ರಂದು ಬೆಳಗ್ಗೆ ೯.೩೦ ಗಂಟೆಗೆ ಸಭೆ ಸೇರಿ ಅಲ್ಲಿಂದ ಮೆರವಣಿಗೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ರೈತರ ಹಕ್ಕು ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಆರ್.ಕೆ. ಭಟ್ಟ ಕಿಚ್ಚುಪಾಲ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಒಂದು ತಿಂಗಳಲ್ಲಿ ಎಲ್ಲ ರೈತರ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಆದರೆ ಇಲ್ಲಿಯ ತನಕ ಯಾವುದೇ ಸಭೆ ಕರೆದಿದ್ದಾಗಲೀ ಅಥವಾ ರೈತರ ಮನವಿಗೆ ಸ್ಪಂದಿಸಿಲ್ಲ. ಆ ಕಾರಣಕ್ಕಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸುತ್ತಿದ್ದೇವೆ ಎಂದರು.

ರೈತರ ಸೊಪ್ಪಿನ ಬೆಟ್ಟದ ಕುಮಕಿ ಜಾಗದ ಹಾಗೂ ಹಳೆಯ ಪಾರಂಪರಿಕ ಅತಿಕ್ರಮಣದಾರರ ಎಲ್ಲ ಸಮಸ್ಯೆಗಳ ಪರಿಹಾರದ ಬಗ್ಗೆ ಆಗ್ರಹಿಸಲು ನಿರ್ಣಯಿಸಲಾಗಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ, ದಸ್ತಾವೇಜುಗಳ ನೋಂದಣಿ ಇಲಾಖೆ ರೈತರ ಸಮಸ್ಯೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿವೆ.ಕಂದಾಯ ಇಲಾಖೆಯಲ್ಲಿ ಖಾತಾ ಪರಿವರ್ತನೆಗೆ ₹೨೫ ಸಾವಿರ ಲಂಚ ಪಡೆದು ಶೋಷಿಸಲಾಗುತ್ತಿದೆ. ದಿನೇ ದಿನೇ ಅನೇಕ ರೈತರ ಹಕ್ಕು ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಹಕ್ಕು ಬಾಧ್ಯತೆಗಳನ್ನು ಪಡೆದುಕೊಳ್ಳುವುದಕ್ಕೆ ಅನಿವಾರ್ಯವಾಗಿ ತೀವ್ರ ಹೋರಾಟ ಮಾಡುವುದು ಅಗತ್ಯವಾಗಿದೆ.

ಜಿಲ್ಲೆಯ ಭೌಗೋಳಿಕ ಸ್ಥಿತಿಯಲ್ಲಿ ರೈತರು ಸೊಪ್ಪಿನ ಬೆಟ್ಟದಲ್ಲಿ ಮನೆ ಕಟ್ಟಲು ಕಾನೂನಿನ ಅವಕಾಶ ಇದ್ದರೂ ಕೆನರಾ ಪ್ರಿವಿಲೇಜ್ ಕಾಯಿದೆ ರದ್ದಾಗಿಲ್ಲ. ಹೀಗೆ ಅಧಿಕಾರಿಗಳು ಕಾನೂನಿನ ನೆಪ ಹೇಳಿ ತೊಂದರೆ ನೀಡುತ್ತಾರೆ. ಕಾಡುಪ್ರಾಣಿಗಳು ಬೆಳೆನಾಶ ಮಾಡುತ್ತಿವೆ.

ಗಿಡ- ಮರಗಳು ನಾಶವಾದಲ್ಲಿ ಮಾತ್ರ ಅತ್ಯಂತ ಕಡಿಮೆ ಪರಿಹಾರ ಇಲಾಖೆಗಳ ಕಚೇರಿಗೆ ಅಲೆದಾಡಿದರೂ ವರ್ಷಗಳ ನಂತರ ಪರಿಹಾರ ನೀಡಿ ಕಣ್ಣೊರೆಸುವ ಪ್ರಯತ್ನ ಮಾಡಲಾಗುತ್ತಿದೆ. ರೈತರನ್ನು ಸರ್ಕಾರಿ ಕಚೇರಿಗಳಲ್ಲಿ ಅತ್ಯಂತ ಕೆಳಮಟ್ಟದ ನಾಗರರಿಕರಂತೆ ಕಾಣುತ್ತಿದ್ದಾರೆ.ಸೊಪ್ಪಿನ ಬೆಟ್ಟದ ಪಹಣಿ ಪತ್ರಿಕೆಯಲ್ಲಿ ಅ ಖರಾಬ ಅಂತ ಇರುವುದನ್ನು ಬ ಖರಾಬು ಅಂತ ರೈತರ ಗಮನಕ್ಕೆ ತರದೇ ಬದಲಾವಣೆ ಮಾಡಲಾಗಿದೆ. ಬೆಳೆಗೆ ಬೆಳೆ ವಿಮೆ ಸಮರ್ಪಕ ರೀತಿಯಲ್ಲಿ ನೀಡುತ್ತಿಲ್ಲ. ರೈತರ ಬೆಳೆಗಳಿಗೆ ಯೋಗ್ಯ ದರ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಂದ ರೈತರು ಕಂಗಾಲಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಿತಿಯ ಕಾರ್ಯದರ್ಶಿ ಕೆ.ಟಿ. ಭಟ್ಟ ಗುಂಡ್ಕಲ್, ಸಹಕಾರ್ಯದರ್ಶಿ ಸಿ.ಟಿ. ಹೆಗಡೆ ಗೋಳಿಗದ್ದೆ, ಖಜಾಂಚಿ ನಾಗೇಂದ್ರ ಭಟ್ಟ ಲಿಂಗಭಟ್ಟರಮನೆ, ಸದಸ್ಯರಾದ ವಿ.ಎಂ. ಭಟ್ಟ, ಗಣಪತಿ ಕರೂಮನೆ ಉಪಸ್ಥಿತರಿದ್ದರು.