ಕಾಡಂಚಿನ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ: ಸಚಿವ ದಿನೇಶ ಗುಂಡೂರಾವ್‌

| Published : Sep 12 2024, 01:53 AM IST

ಕಾಡಂಚಿನ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ: ಸಚಿವ ದಿನೇಶ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಂಚಿನಲ್ಲಿರುವ ಖಾನಾಪುರ ತಾಲೂಕಿನ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ 60 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆನಿರ್ಮಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾಡಂಚಿನಲ್ಲಿರುವ ಖಾನಾಪುರ ತಾಲೂಕಿನ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ 60 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆನಿರ್ಮಿಸಲಾಗಿದೆ. ಆದಷ್ಟು ಶೀಘ್ರ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಕೂಡ ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಖಾನಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್‌.ಎಂ) ಅಡಿಯಲ್ಲಿ ನಿರ್ಮಿಸಿದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟಿಸಿದ ಬಳಿಕ ನಬಾರ್ಡ್‌ ಆರ್.ಐಡಿಎಫ್-30 ಯೋಜನೆಯಡಿಯಲ್ಲಿ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಶಾಸಕರ ಬೇಡಿಕೆಯಂತೆ ಕೆಲವು ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ನಿರ್ಮಾಣವಾಗಬೇಕಿದ್ದು, ಇವುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.

ಸರ್ಕಾರ ಮಹಿಳಾ ಸಬಲೀಕರಣಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಪೋಲಿಯಲ್ಲಿ ₹65 ಲಕ್ಷ ವೆಚ್ಚದಲ್ಲಿ ಉಪ ಕೇಂದ್ರ ನಿರ್ಮಿಸಲಾಗುವುದು. ಇಟಗಿ, ನಂದಗಡ, ಪಾರಿಶ್ವಾಡ, ಕಕ್ಕೇರಿ, ಬೀಡಿ, ಭಾಗದಲ್ಲಿ ಆರೋಗ್ಯ ಇಲಾಖೆಯ ಬೇರೆ ಬೇರೆ ಕಾಮಗಾರಿಗಳಿಗೆ ಸುಮಾರು ₹ 3 ಕೋಟಿ 50 ಲಕ್ಷ ಅನುದಾನ ನೀಡಲಾಗುವುದು. ಸ್ಥಳೀಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.

ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ತಾಲೂಕಿನಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಇಲ್ಲದಂತಾಗಿತ್ತು. ಆಸ್ಪತ್ರೆಯಲ್ಲಿ ಕೂಡ ಸಾಕಷ್ಟು ಮೂಲ ಸೌಕರ್ಯಗಳ ಕೊರತೆಯಿತ್ತು. ಸಾರ್ವಜನಿಕರ ತೊಂದರೆ ಗಮನಿಸಿ ಸರ್ಕಾರದಿಂದ ಎರಡು ಆಸ್ಪತ್ರೆ ಕೊಡುಗೆಯಾಗಿ ನೀಡಿದೆ ಎಂದರು.

ಈ ಭಾಗದಲ್ಲಿ ಬಹಳ ಮಳೆಯಾಗುವುದರಿಂದ ರಸ್ತೆಗಳು ಹಾಳಾಗಿವೆ. ತಾಲೂಕು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಿದೆ. ಚಾಪಗಾವಿ, ಕಕ್ಕೇರಿ, ಜಾಂಬೋಟಿ ಸೇರಿದಂತೆ ತಾಲೂಕಿನಲ್ಲಿ ಅಗತ್ಯವಿರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಹಲಗೇಕರ ಮನವಿ ಮಾಡಿಕೊಂಡರು.

ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ , ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ ಕಿವುಡಸಣ್ಣವರ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಪಂ ಸಿಇಒ ರಾಹುಲ್ ಶಿಂಧೆ, ಖಾನಾಪೂರ ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.