ಸಾರಾಂಶ
ಸಂಸ್ಕೃತ ಭಾಷೆಯಿಂದ ಒಳ್ಳೆಯ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ. ಮನುಷ್ಯ ಪ್ರಬುದ್ಧನಾಗುವುದು ಅವನು ಬಳಸುವ ಸಾಹಿತ್ಯದಿಂದ. ಒಳ್ಳೆಯ ಸಾಹಿತ್ಯವಿರುವುದು ಸಂಸ್ಕೃತದಲ್ಲಿ ಎಂದು ವಿ. ಗಣಪತಿ ಭಟ್ಟ ಕೋಲಿಬೇಣ ತಿಳಿಸಿದರು.
ಯಲ್ಲಾಪುರ: ಸಂಸ್ಕೃತ ಭಾಷೆ ಎಲ್ಲ ಜಾತಿ ಜನಾಂಗಕ್ಕೂ ಒಂದೇ ಆಗಿದೆ. ಸ್ವಾಭಿಪ್ರಾಯವನ್ನು ವ್ಯಕ್ತಪಡಿಸಲು ಭಾಷೆಯೇ ಮುಖ್ಯವಾಗಿದ್ದು, ಸಂಸ್ಕೃತ ಸನಾತನ ಮತ್ತು ನವೀನತೆಗಳನ್ನು ಒಳಗೊಂಡಿದೆಯಲ್ಲದೇ ಎಲ್ಲ ಭಾಷೆಗಳ ಜನನಿಯಾಗಿದೆ ಎಂದು ವಿ. ಗಣಪತಿ ಭಟ್ಟ ಕೋಲಿಬೇಣ ತಿಳಿಸಿದರು.
ಇತ್ತೀಚೆಗೆ ತಾಲೂಕಿನ ಬಿಸಗೋಡು ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಕರ್ನಾಟಕ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಶ್ರೀ ಸೀತಾರಾಮಾಂಜನೇಯ ಸಂಸ್ಕೃತ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಬೀಸಗೋಡ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಸ್ಮಾಕಂ ಸಂಸ್ಕೃತಂ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.ಕೆಲವು ಭಾಷೆಗಳಿಗೆ ಲಿಪಿ ಇಲ್ಲದಿದ್ದರೂ ಆ ಭಾಷೆ ಸಮೃದ್ಧಿಯಿಂದ ಕೂಡಿದೆ. ಸಂಸ್ಕೃತ ಭಾಷೆಯಿಂದ ಒಳ್ಳೆಯ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ. ಮನುಷ್ಯ ಪ್ರಬುದ್ಧನಾಗುವುದು ಅವನು ಬಳಸುವ ಸಾಹಿತ್ಯದಿಂದ. ಒಳ್ಳೆಯ ಸಾಹಿತ್ಯವಿರುವುದು ಸಂಸ್ಕೃತದಲ್ಲಿ. ಅಸಂಸ್ಕೃತಿಯ ವಾತಾವರಣ ಬೆಳೆಯಲು ಸಂಸ್ಕೃತಿಯ ಮಹತ್ವ ಅರಿತುಕೊಳ್ಳದಿರುವುದೇ ಕಾರಣವಾಗಿದೆ ಎಂದರು. ಸಂಸ್ಕೃತ ವಿವಿ ಧಾರವಾಡ ವಲಯದ ವಿಷಯ ಪರಿವೀಕ್ಷಕ ವಿ. ಜಿ.ಎಸ್. ಗಾಂವ್ಕರ ಮಾತನಾಡಿ, ಸಂಸ್ಕೃತ ಭಾಷೆಯ ಜಾಗೃತಿಗೋಸ್ಕರ ಈ ಕಾರ್ಯಕ್ರಮವನ್ನು ಸಂಸ್ಕೃತ ನಿರ್ದೇಶನಾಲಯ ಹಮ್ಮಿಕೊಂಡಿದೆ ಎಂದರು. ಶ್ರೀ ಸೀತಾರಾಮಾಂಜನೇಯ ಸಂಸ್ಕೃತ ಪಾಠಶಾಲೆಯ ನಿವೃತ್ತ ಶಿಕ್ಷಕ ವಿ. ವಿಘ್ನೇಶ್ವರ ಭಟ್ಟ ಮಾತನಾಡಿ, ಎಲ್ಲ ಪುಸ್ತಕಗಳು, ವಿಷಯಗಳು, ಇಂದು ಸುಲಭವಾಗಿ ಸಿಗುತ್ತವೆ. ಅದನ್ನು ಉತ್ತಮ ದೃಷ್ಟಿಯಿಂದ ಉಪಯೋಗಿಸಿ ಉದಾತ್ತವಾದ ಚಿಂತನೆಯನ್ನು ಮೂಡಿಸಿಕೊಂಡಾಗ ಸುಸಂಸ್ಕೃತ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಈ ಬಿಸಗೋಡು ಪ್ರದೇಶದಲ್ಲಿ ಪ್ರತಿಯೊಬ್ಬರ ಆಡುಭಾಷೆಯನ್ನಾಗಿ ಸಂಸ್ಕೃತವನ್ನು ಬೆಳೆಸಬೇಕಾಗಿದೆ ಎಂದರು.ಶ್ರೀ ಆಂಜನೇಯ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ರಾಜಶೇಖರ ಧೂಳಿ ಮಾತನಾಡಿ, ನಮ್ಮ ದೇಶ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಸಂಸ್ಕೃತ ಭಾಷೆ ಮತ್ತು ಸಂಸ್ಕೃತ ಭಾಷೆಯ ಶಿಕ್ಷಣ ಅತ್ಯುನ್ನತವಾಗಿತ್ತು. ಸಂಸ್ಕೃತ ಭಾಷೆಯ ಉದಾತ್ತ ಚಿಂತನೆಗಳು ನಶಿಸತೊಡಗಿದಾಗ ದೇಶವೂ ಅವನತಿಯತ್ತ ಸಾಗಿತು. ಸಂಸ್ಕೃತ ಭಾಷೆಯ ಉಚ್ಛಾರಣೆ ಎಲ್ಲ ಕಡೆಯೂ ಒಂದೇ ರೀತಿಯಲ್ಲಿರಲು ಅದರಲ್ಲಿರುವ ವ್ಯಾಕರಣವೇ ಕಾರಣವಾಗಿದೆ ಎಂದರು.ಪಾಠಶಾಲಾ ಮುಖ್ಯಾಧ್ಯಾಪಕ ವಿ. ರಾಮನಾಥ ಭಾಮೆಮನೆ ಸ್ವಾಗತಿಸಿ, ನಿರ್ವಹಿಸಿದರು. ಶಿಕ್ಷಕಿ ಶೈಲಾ ಭಟ್ಟ ವಂದಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಗಣಪತಿ ಭಟ್ಟ ಅಗ್ಗಾಶಿಕುಂಬ್ರಿ, ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ನಾಯಕ ಉಪಸ್ಥಿತರಿದ್ದರು. ಪ್ರಸಾದಿನಿ ಎನ್. ಭಟ್ಟ ಪ್ರಾರ್ಥಿಸಿದರು. ಸಮೃದ್ಧಿ ಭಾಗ್ವತ್ ಸಂಗಡಿಗರು ಸಂಸ್ಕೃತ ಗಾಯನ ಪ್ರಸ್ತುತಪಡಿಸಿದರು.