ತೋಟಕ್ಕೆ ಹೊರಟಿದ್ದ ವ್ಯಕ್ತಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ಬೇಧಿಸಿರುವ ಪೊಲೀಸರು ಕೊಲೆಗೆ ಸುಪಾರಿ ಕೊಟ್ಟಿದ್ದ ಅಣ್ಣ ಸೇರಿ ಐವರನ್ನು ಸಾವಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತೋಟಕ್ಕೆ ಹೊರಟಿದ್ದ ವ್ಯಕ್ತಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ಬೇಧಿಸಿರುವ ಪೊಲೀಸರು ಕೊಲೆಗೆ ಸುಪಾರಿ ಕೊಟ್ಟಿದ್ದ ಅಣ್ಣ ಸೇರಿ ಐವರನ್ನು ಸಾವಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀಶೈಲ ಬಿರಾದಾರ, ರವಿ ಶಿವಪೂಜಿ, ಬಸವರಾಜ ಹಗರಿ, ಆಕಾಶ ಯಳ್ಳೂರ ಪ್ರಥಮೇಶ ಮಹಾಜನ ಬಂಧಿತರು. ಕೊಲೆಗೆ ಬಳಸಿದ್ದ ಎರಡು ಮೊಟಾರ್ ಸೈಕಲ್ ವಶ ಪಡಿಸಿಕೊಂಡಿದ್ದಾರೆ.ಏನಿದು ಘಟನೆ?: ಮೇ 14ರಂದು ತಾಲೂಕಿನ ಕುರುಗೋಡ ಗ್ರಾಮದ ಸಿದ್ದು ಬಿರಾದಾರ ಎಂಬ ಯುವಕ ಕುರುಗೋಡು ಗ್ರಾಮದ ಕೆನಾಲ್ ರಸ್ತೆಯಲ್ಲಿ ತೋಟಕ್ಕೆ ತೆರಳುತ್ತಿದ್ದ ವೇಳೆ ಕೆಲವರು ಸಿನಿಮೀಯ ರೀತಿ ಹಿಂಬಾಲಿಸಿ ಕಬ್ಬಿಣದ ರಾಡ್‌ಗಳಿಂದ ತಲೆಯ ಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿದ್ದರು. ಈ ಕುರಿತು ಘಟನೆ ನಡೆದಿದ್ದು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಮಲ್ಲಪ್ಪ ಮಡ್ಡಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಅಣ್ಣಪ್ಪ ಐಗಳಿ ಹಾಗೂ ತಂಡದವರು ತನಿಖೆ ನಡೆಸಿದ್ದರು. ಮೃತ ಸಿದ್ದು ಬಿರಾದಾರ ಕುಡಿದು ಬಂದು ಜಮೀನಿನ ವಿಷಯದಲ್ಲಿ ತಮ್ಮ ಶ್ರೇಶೈಲನೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದ್ದು, ಶ್ರೀಶೈಲ ಹಾಗೂ ರವಿ ಪೂಜಾರಿ ಸೇರಿ ಕೊಲೆಗೆ ಸಂಚು ರೂಪಿಸಿ ಮಹರಾಷ್ಟ್ರ ಜತ್ತ ತಾಲೂಕಿನ ಬಸವರಾಜ ಹಗರಿ ಎಂಬುವವನಿಗೆ ಕೊಲೆಗೆ ₹1 ಲಕ್ಷ ಸುಪಾರಿ ನೀಡಿದ್ದು, ₹5 ಸಾವಿರ ಮುಂಗಡ ಪಡೆದ ಬಸವರಾಜ ಹಾಗೂ ಆಕಾಶ ಹಳ್ಳೂರ, ಪ್ರಥಮೇಶ ಮಹಾಜನ ಸೇರಿ ಸಿದ್ದುನನ್ನು ಹಿಂಬಾಲಿಸಿ ಚಲನವಲನ ಗಮನಿಸಿ, ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಯಾಗಿ ಸಿಕ್ಕ ಸಿದ್ದುವನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದ್ದು, ಪೊಲೀಸರು ಐವರನ್ನು ಬಂಧಿಸಿದ್ದಾರೆ.